Last Updated:
ನೇತ್ರಾವತಿ ನದಿಯ ಕಲ್ಮಂಜ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಬಳಿ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ; ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಮಂಗಳೂರು: ನೇತ್ರಾವತಿ ಭಾರತದ ಅತ್ಯಂತ ಪುಣ್ಯ ನದಿ. ಈ ನದಿಯ (River) ನೀರು ಮೊನ್ನೆ ಮೊನ್ನೆ ತಾನೇ ರಾಜ್ಯದ (State) ಎಲ್ಲಾ ನದಿ ನೀರಿಗಿಂತ (Water) ಉತ್ತಮ ಎಂಬ ಅಭಿದಾನ ದಕ್ಕಿಸಿಕೊಂಡಿದೆ. ಇಂತಹ ನೇತ್ರಾವತಿಯಲ್ಲಿ (Netravati) ಪಜಿರಡ್ಕ ಸದಾಶಿವ, ಸದಾಶಿವ ಸೂರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಇನೋಳಿ ಸೋಮನಾಥೇಶ್ವರ, ನಂದಾವರ ಶ್ರೀ ವಿನಾಯಕ, ಕಾರಿಂಜೇಶ್ವರ, ಸಹಸ್ರಲಿಂಗೇಶ್ವರ ಸೇರಿದಂತೆ ಹಲವು ತೀರ್ಥಕ್ಷೇತ್ರಗಳಿವೆ.
ಇಲ್ಲೆಲ್ಲಾ ಸ್ನಾನ ಮಾಡುವುದು ಪುಣ್ಯಕರ ಎಂಬುದೇ ಪ್ರತೀತಿ. ಅತಿಯಾದ ಜನರ ಓಡಾಟದಿಂದ ಇಲ್ಲಿ ಪ್ರಾಣಿ ಸಂಕುಲ ವಿರಳ. ಆದರೆ ಇದಕ್ಕೆ ಅಪವಾದವೆಂಬಂತೆ ಭಯ ಮೂಡಿಸುವಂತೆ ಒಂದು ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಮುಂಭಾಗದ ನೇತ್ರಾವತಿ ನದಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ದೇವಸ್ಥಾನದ ಸಮೀಪ ಮೃತ್ಯುಂಜಯ ನದಿ ಹಾಗೂ ನೇತ್ರಾವತಿ ನದಿ ಸಂಗಮ ಸ್ಥಳದಲ್ಲಿ ಈ ಮೊಸಳೆ ಪತ್ತೆಯಾಗಿದೆ. ನದಿ ದಡದ ಮರಳಿನ ಮೇಲೆ ವಿಶ್ರಮಿಸುತ್ತಿದ್ದ ವೇಳೆ ಮೊಸಳೆ ಜನರ ಕಣ್ಣಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವೇಳೆಯೂ ಮೊಸಳೆಯ ಓಡಾಟ ಕಂಡುಬಂದಿದ್ದು, ಗ್ರಾಮಸ್ಥರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರವಾಸಿಗರೇ ಎಚ್ಚರ, ಎಚ್ಚರ, ಎಚ್ಚರ!
ಇತ್ತೀಚೆಗೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳಲ್ಲಿ ಅಲ್ಲಲ್ಲಿ ಮೊಸಳೆ ಕಾಣಸಿಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನದಿತಟದ ಕೃಷಿ ಭೂಮಿ ಹಾಗೂ ನದಿ ಪಾತ್ರದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಸ್ನಾನಘಟ್ಟಗಳು ಈ ಎಲ್ಲಾ ದೇಗುಲಗಳಲ್ಲಿ ಕೂಡ ಇದ್ದು ಅತೀ ಬೇಗ ಈ ಮೊಸಳೆಯನ್ನು ಸೆರೆ ಹಿಡಿದಿದ್ದರೆ ಯಾವುದಾದರೂ ಅವಘಡ ಶ್ರೀ ಕ್ಷೇತ್ರಗಳಲ್ಲಿ ಸಂಭವಿಸಬಹುದು ಎಂದು ಎಣಿಸಲಾಗಿದೆ. ಅದರಲ್ಲೂ ನೇತ್ರಾವತಿ ಸ್ನಾನಘಟ್ಟಕ್ಕೆ ಮೊಸಳೆ ಬಂದರೆ ಏನು ಗತಿ? ಎಂಬ ಚಿಂತೆ ಜನರಲ್ಲಿ ಮನೆ ಮಾಡಿದ್ದು ಈ ಮೊಸಳೆಗೆ ಶೀಘ್ರ ಬಂದೋಬಸ್ತ್ ಮಾಡಬೇಕೆಂದು ಜನ ವಿನಂತಿಸಿದ್ದಾರೆ.
Dakshina Kannada,Karnataka
October 22, 2025 11:08 AM IST