ಪಾರಮ್ಯ ಮೆರೆದ ವಿಂಡೀಸ್ ಬೌಲರ್ಸ್
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ರೋಮಾಂಚಕ ಆರಂಭವನ್ನು ಕಂಡಿತು. ಮೊದಲ ದಿನದಂದು ವೇಗಿಗಳು ಅದ್ಭುತ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ವೆಸ್ಟ್ ಇಂಡೀಸ್ ವೇಗಿಗಳು ಆರಂಭದಲ್ಲೇ ಆಸೀಸ್ಗೆ ಆಘಾತ ನೀಡಿದರು. ಶಮರ್ ಜೋಸೆಫ್ ಟಾಪ್ ಆರ್ಡರ್ ಧ್ವಂಸಗೊಳಿಸಿದರೆ, ಜೇಡನ್ ಸೀಲ್ಸ್ ಮಧ್ಯಮ ಕ್ರಮಾಕ ಹಾಗೂ ಕೆಳ ಕ್ರಮಾಂಕವನ್ನ ಧೂಳೀಪಟ ಮಾಡಿದರು. ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳ ಪೈಕಿ ಟ್ರಾವಿಸ್ ಹೆಡ್ 78 ಎಸೆತಗಳಲ್ಲಿ9 ಬೌಂಡರಿಗಳ ಸಹಿತ 59 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು, ಉಸ್ಮಾನ್ ಖವಾಜ 47 ರನ್ಗಳಿಸಿದರು. ಉಳಿದ ಬ್ಯಾಟರ್ ಯಾರೂ ವಿಂಡೀಶ್ ವೇಗಿಗಳ ಮುಂದೆ ನಿಲ್ಲಲಾರದಾದರು.
ಆರಂಭದಲ್ಲೇ ಶಮರ್ ಜೋಸೆಫ್ ಬೆಂಕಿ ಬೌಲಿಂಗ್
ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಶಮರ್ ಜೋಶೆಫ್ ಓಪನರ್ ಸ್ಯಾಮ್ ಕಾನ್ಸ್ಟಾಸ್ರನ್ನ ಎಲ್ಬಿಡಬ್ಲ್ಯೂ ಮಾಡಿದರು. ಮೊದಲು ಅಂಪೈರ್ ಔಟ್ ನೀಡಲಿಲ್ಲ ಆದರೆ, ವೆಸ್ಟ್ ಇಂಡೀಸ್ ಡಿಆರ್ಎಸ್ ತೆಗೆದುಕೊಂಡಿತು. ಡಿಆರ್ಎಸ್ನಲ್ಲಿ ನಿರ್ಧಾರ ವೆಸ್ಟ್ ಇಂಡೀಸ್ ಪರವಾಗಿ ಬಂದಿತು. ಕಾನ್ಸ್ಟಾಸ್ ಪೆವಿಲಿಯನ್ ಸೇರಬೇಕಾಯಿತು. ಶಮರ್ ಜೋಸೆಫ್ ಅದೇ ಓವರ್ನಲ್ಲಿ ಎರಡನೇ ವಿಕೆಟ್ ಪಡೆಯಬಹುದಿತ್ತು. ಆದರೆ, ಕ್ಯಾಮರೂನ್ ಗ್ರೀನ್ ಕ್ಯಾಚ್ ಅನ್ನು ಬ್ರಾಂಡನ್ ಕಿಂಗ್ ಕೈಬಿಟ್ಟರು. ಇದರ ನಂತರ, ರೋಸ್ಟನ್ ಚೇಸ್ ಕೂಡ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಇದು ಜೋಸೆಫ್ಗೆ ನಿರಾಶೆಯನ್ನುಂಟುಮಾಡಿತು. ಆದರೂ ಜೋಸೆಫ್ ಗ್ರೀನ್ ವಿಕೆಟ್ ಪಡೆಯುವ ಮೂಲಕ ತನ್ನ ಎರಡನೇ ವಿಕೆಟ್ ಪಡೆದರು.
ಒಂದು ಹಂತದಲ್ಲಿ ಆಸ್ಟ್ರೇಲಿಯಾದ ಸ್ಕೋರ್ 22 ರನ್ಗಳಿಗೆ 3 ವಿಕೆಟ್ಗಳಾಗಿತ್ತು. ಇದಾದ ನಂತರ ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು. ಇಬ್ಬರೂ ವೇಗವಾಗಿ ರನ್ ಗಳಿಸಿದರು. ಹೆಡ್ ಅರ್ಧಶತಕ ಗಳಿಸಿದರೆ, ಖವಾಜಾ 47 ರನ್ ಗಳಿಸಿ ಔಟಾದರು ಖವಾಜ ವಿಕೆಟ್ನೊಂದಿಗೆ ಆಸೀಸ್ ಪತನ ಆರಂಭವಾಯಿತು.
ಕೆಳ ಕ್ರಮಾಂಕವನ್ನ ಉಡೀಸ್ ಮಾಡಿದ ಸೀಲ್ಸ್
ಆಸ್ಟ್ರೇಲಿಯಾದ ಸ್ಕೋರ್ 3 ವಿಕೆಟ್ಗಳಿಗೆ 111 ರನ್ಗಳಿಸಿತ್ತು, ಈ ವೇಳೆ ವೆಸ್ಟ್ ಇಂಡೀಸ್ ತಂಡವು ಮತ್ತೆ ಕಮ್ಬ್ಯಾಕ್ ಮಾಡಿತು. ಶಮರ್ ಜೋಸೆಫ್ ಖವಾಜಾ ಅವರನ್ನು ಔಟ್ ಮಾಡಿದರು. ಇದಾದ ನಂತರ ಅವರು ಬ್ಯೂ ವೆಬ್ಸ್ಟರ್ (11) ಅವರನ್ನು ಸಹ ಬೌಲ್ಡ್ ಮಾಡಿ 4ನೇ ವಿಕೆಟ್ ತಮ್ಮದಾಗಿಸಿಕೊಂಡರು. ಅಲೆಕ್ಸ್ ಕ್ಯಾರಿ (8) ಚಹಾ ವಿರಾಮಕ್ಕೆ ಕೆಲವು ಎಸೆತಗಳಿರುವಾಗ ಔಟಾದರು. ಚಹಾ ನಂತರ ಹೆಡ್ ಕೂಡ ಪೆವಿಲಿಯನ್ಗೆ ಮರಳಿದರು. ಇದು ಆಸ್ಟ್ರೇಲಿಯಾದ ಇನ್ನಿಂಗ್ಸ್ ಅನ್ನು ಕುಂಠಿತಗೊಳಿಸಿತು. ಪ್ಯಾಟ್ ಕಮ್ಮಿನ್ಸ್ 18 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 28 ರನ್ಗಳಿಸಿ ಔಟ್ ಆದರು. ಕೊನೆಗೆ ಆಸ್ಟ್ರೇಲಿಯಾ ತಂಡವು 180 ರನ್ಗಳಿಗೆ ಆಲೌಟ್ ಆಗಿತ್ತು. ಆಸೀಸ್ ಕೆಳ ಕ್ರಮಾಂಕವನ್ನ ಉಡೀಸ್ ಮಾಡಿದ ಸೀಲ್ಸ್ 60 ರನ್ ನೀಡಿ ಐದು ವಿಕೆಟ್ ಪೂರ್ಣಗೊಳಿಸಿದರೆ, ಶಮರ್ ಜೋಶೆಪ್ 46ಕ್ಕೆ4 ವಿಕೆಟ್ ಪಡೆದು ಮಿಂಚಿದರು.
ವೆಸ್ಟ್ ಇಂಡೀಸ್ಗೂ ಆರಂಭಿಕ ಆಘಾತ
ವೆಸ್ಟ್ ಇಂಡೀಸ್ ಕೂಡ ಕೆಟ್ಟ ಆರಂಭ ಪಡೆದುಕೊಂಡಿದೆ. ಮಿಚೆಲ್ ಸ್ಟಾರ್ಕ್ ಆರಂಭಿಕ ಕ್ರೇಗ್ ಬ್ರಾಥ್ವೈಟ್ (4) ಹಾಗೂ ಜಾನ್ ಕ್ಯಾಂಪ್ಬೆಲ್ (7) ಇಬ್ಬರನ್ನ ಬೇಗನೆ ಪೆವಿಲಿಯನ್ಗಟ್ಟಿದರು. ವೆಸ್ಟ್ ಇಂಡೀಸ್ ತಮ್ಮ ಎರಡೂ ಆರಂಭಿಕ ಆಟಗಾರರನ್ನು 7 ಓವರ್ಗಳಲ್ಲಿ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬಂದ ಕೇಸಿ ಕಾರ್ಟಿ 40 ಎಸೆತಗಳಲ್ಲಿ 20 ರನ್ಗಳಿಸಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರೆ, 5ನೇ ಕ್ರಮಾಂಕದಲ್ಲಿ ಬಂದಿದ್ದ ಜೊಮೆಲ್ ವಾರಿಕ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆದರು.
ಮೊದಲ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 57 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿದೆ. ವೆಸ್ಟ್ ಇಂಡೀಸ್ ಈಗ ಬ್ರಾಂಡನ್ ಕಿಂಗ್ 31 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 23, ಮತ್ತು ನಾಯಕ ರೋಸ್ಟನ್ ಚೇಸ್ ಅಜೇಯ 1 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 26, 2025 4:40 PM IST