ಬಾರ್ಬಡೋಸ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಆಸೀಸ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ವೆಸ್ಟ್ ಇಂಡೀಸ್ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿ ಎಂಟು ರನ್‌ಗಳಿಗೆ ಮೊದಲ ವಿಕೆಟ್ ಪಡೆದರು. ಇದಕ್ಕೂ ಮೊದಲು, ಆರಂಭಿಕ ಉಸ್ಮಾನ್ ಖವಾಜಾ ಕ್ಯಾಚ್ ನೀಡಿದ್ದರಾದರೂ ಫೀಲ್ಡರ್ ಎಸಗಿದ ಪ್ರಮಾದದಿಂದ ಜೀವದಾನ ಪಡೆದುಕೊಂಡಿದ್ದರು. ಸ್ಯಾಮ್ ಕಾನ್ಸ್ಟಸ್(3), ಕ್ಯಾಮರೂನ್ ಗ್ರೀನ್ (3) ಮತ್ತು ಜೋಶ್ ಇಂಗ್ಲಿಸ್ (5) ಒಂದಂಕಿ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು.
ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ಸ್ವಲ್ಪ ಸಮಯದವರೆಗೆ ಇನ್ನಿಂಗ್ಸ್ ಬೆಳೆಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ನೀಡಿದರು. ಉಸ್ಮಾನ್ ಖವಾಜಾ ತಂಡದ ಮೊತ್ತ 111 ರನ್ ಗಳಿದ್ದಾಗ 47 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಖವಾಜ ವಿಕೆಟ್ ಕಳೆದುಕೊಂಡ 69 ರನ್‌ಗಳ ಅಂತರದಲ್ಲಿ ಉಳಿದ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಕೊನೆಯಲ್ಲಿ, ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 28 ರನ್ಗಳಿಸಿದರು. ಕೊನೆಗೆ ಆಸ್ಟ್ರೇಲಿಯಾ 180 ರನ್‌ಗಳಿಗೆ ಆಲೌಟ್ ಆಯಿತು. 30 ವರ್ಷಗಳಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧ ಇಷ್ಟು ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿರುವುದು ಇದೇ ಮೊದಲು. 1984ರಲ್ಲಿ ಕೊನೆಯ ಬಾರಿ ಬ್ರಿಸ್ಬೇನ್ನಲ್ಲಿ 175 ರನ್‌ಗಳಿಗೆ ಆಲೌಟ್ ಆಗಿತ್ತು. ಅದೇ ವರ್ಷ ಸರಣಿಯ ಮತ್ತೊಂದು ಟೆಸ್ಟ್ನಲ್ಳೂ 173ಕ್ಕೆ ಆಲೌಟ್ ಆಗಿತ್ತು. ಆ ನಂತರ ಆಸ್ಟ್ರೇಲಿಯಾ ಒಮ್ಮೆಯೂ 200ರೊಳಗೆ ಆಲೌಟ್ ಆಗಿರಲಿಲ್ಲ.
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಯಾಮ್ ಕಾನ್ಸ್ಟಸ್ 3, ಉಸ್ಮಾನ್ ಖವಾಜ 47, ಕ್ಯಾಮರೂನ್ ಗ್ರೀನ್ 3, ಜೋಶ್ ಇಂಗ್ಲಿಸ್ 5, ಟ್ರಾವಿಸ್ ಹೆಡ್ 59, ಡ್ಯೂ ವೆಬ್‌ಸ್ಟರ್ 11, ಅಲೆಕ್ಸ್ ಕ್ಯಾರಿ 8, ಪ್ಯಾಟ್ ಕಮ್ಮಿನ್ಸ್ 28, ಮಿಚೆಲ್ ಸ್ಟಾರ್ಕ್ 0, ನಾಥನ್ ಲಿಯಾನ್ 9, ಜೋಶ್ ಹ್ಯಾಜಲ್‌ವುಡ್ 4 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ ಐದು ವಿಕೆಟ್ ಪಡೆದರೆ, ಶಮರ್ ಜೋಸೆಫ್ ನಾಲ್ಕು ವಿಕೆಟ್ ಪಡೆದರು. ಜಸ್ಟಿನ್ ಗ್ರೀವ್ಸ್ ಒಂದು ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ಕೂಡ ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಕ್ರೈಗ್ ಬ್ರಾಥ್ವೇಟ್ (4), ಜಾಬ್ ಕ್ಯಾಂಪ್ಬೆಲ್ (7), ಕೇಸಿ ಕಾರ್ಟಿ(20) , ಜೊಮೆಲ್ ವಾರಿಕನ್ (0) ಅಲ್ಪಮೊತ್ತಕ್ಕೆ ವಿಕೆಟ್ ಮೊದಲ ದಿನವೇ ವಿಕೆಟ್ ಒಪ್ಪಿಸಿದ್ದರು. ಬ್ರಾಂಡನ್ ಕಿಂಗ್ 44 ಎಸೆತಗಳಲ್ಲಿ 28 ರನ್ಗಳಿಸಿ ಇಂದು ಹ್ಯಾಜಲ್‌ವುಡ್ ಬೌಲಿಂಗ್ನಲ್ಲಿ ಕೀನ್ ಬೌಲ್ಡ್ ಆದರು. ಪ್ರಸ್ತುತ ವೆಸ್ಟ್ ಇಂಡೀಸ್ 35 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 102 ರನ್ಗಳಿಸಿದೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 26, 2025 8:52 PM IST