Last Updated:
2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ಕೊನೆಯ ಸ್ಥಾನಕ್ಕೆ ಕುಸಿದರೂ, ಯುವ ಆಟಗಾರ ಆಯುಷ್ ಮ್ಹಾತ್ರೆ ಬೃಹತ್ ಸಾಧನೆ ಮಾಡಿದ್ದಾರೆ. ಪವರ್ ಪ್ಲೇನಲ್ಲಿ 192 ಸ್ಟ್ರೈಕ್ ರೇಟ್ ಮತ್ತು 240 ರನ್ ಗಳಿಸಿದ್ದಾರೆ.
2025ರ ಐಪಿಎಲ್‌ನಲ್ಲಿ (IPL 2025) ಸಿಎಸ್‌ಕೆ ಧಯನೀಯ ವೈಫಲ್ಯ ಅನುಭವಿಸಿದೆ. 16 ಆವೃತ್ತಿಗಳನ್ನಾಡಿರುವ ಫ್ರಾಂಚೈಸಿ ಮೊದಲ ಬಾರಿಗೆ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಫ್ರಾಂಚೈಸಿಯ ಸಮಾಧಾನಕರ ವಿಷಯವೆಂದರೆ ಈ ವರ್ಷ ತಂಡದ ಯುವ ಆಟಗಾರರು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಮುಂದಿನ ಆವೃತ್ತಿಗೆ ಸಿದ್ಧರಾಗಿದ್ದಾರೆ. ಸಿಎಸ್‌ಕೆ (CSK) ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ (Ayush Mhatre) ಐಪಿಎಲ್‌ನ ತಮ್ಮ ಚೊಚ್ಚಲ ಋತುವಿನಲ್ಲಿಯೇ ಬೃಹತ್ ದಾಖಲೆಯನ್ನು ಸಾಧಿಸಿದ್ದಾರೆ. CSK ಪರ ಒಂದು ಋತುವಿನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ (ಕನಿಷ್ಠ 200 ರನ್‌ಗಳು) ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಋತುವಿನಲ್ಲಿ ಅವರು ಕೇವಲ 7 ಪಂದ್ಯಗಳನ್ನು ಆಡಿದ್ದಾರೆ ಮತ್ತು 189 ರ ಸ್ಟ್ರೈಕ್ ರೇಟ್‌ನಲ್ಲಿ 240 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಒಂದು ದೊಡ್ಡ ಅರ್ಧಶತಕ (94) ಸೇರಿದೆ.
ಸಿಎಸ್‌ಕೆ ತಂಡದ ಟಾಪ್ 5 ಬೆಸ್ಟ್ ಸ್ಟ್ರೈಕ್ ರೇಟ್ ಬ್ಯಾಟರ್
ಇದೇ ಋತುವಿನಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಕೂಡ 180 ಸ್ಟ್ರೈಕ್ ರೇಟ್‌ನಲ್ಲಿ 225 ರನ್ ಗಳಿಸಿದರು. ಮ್ಹಾತ್ರೆ ನಂತರ ಒಂದೇ ಋತುವಿನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿದ CSK ಆಟಗಾರ ಬ್ರೆವಿಸ್ ಆದರು. ಈ ದಾಖಲೆ ವಿಭಾಗದಲ್ಲಿ ಮ್ಹಾತ್ರೆ ಮತ್ತು ಬ್ರೆವಿಸ್ ನಂತರ, ಅಜಿಂಕ್ಯ ರಹಾನೆ ಇದ್ದಾರೆ. ಅವರು 2023 ರ ಋತುವಿನಲ್ಲಿ 172.48 ರ ಸ್ಟ್ರೈಕ್ ರೇಟ್‌ನಲ್ಲಿ 326 ರನ್‌ಗಳಿಸಿದ್ದರು. ರವೀಂದ್ರ ಜಡೇಜಾ 2020 ರ ಋತುವಿನಲ್ಲಿ 167.85 ರ ಸ್ಟ್ರೈಕ್ ರೇಟ್‌ನಲ್ಲಿ 232 ರನ್‌ಗಳು ಮತ್ತು ಎಂಎಸ್ ಧೋನಿ 2013 ರ ಋತುವಿನಲ್ಲಿ 162.89 ರ ಸ್ಟ್ರೈಕ್ ರೇಟ್‌ನಲ್ಲಿ 461 ರನ್‌ಗಳಿಸಿದ್ದರು.
ಪವರ್ ಪ್ಲೇನಲ್ಲೂ ಗರಿಷ್ಠ ಸ್ಟ್ರೈಕ್ ರೇಟ್
ಇಷ್ಟೇ ಅಲ್ಲ, ಈ ವರ್ಷ ಪವರ್ ಪ್ಲೇ ನಲ್ಲಿ ಆಯುಷ್ ಮ್ಹಾತ್ರೆ 192ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪರ ಗರಿಷ್ಠ ಪವರ್ ಪ್ಲೆ ಸ್ಟ್ರೈಕ್ರೇಟ್ ಆಗಿದೆ. ಆಯುಷ್ ಬಳಿಕ ಮೊಯೀನ್ ಅಲಿ (165), ಸುರೇಶ್ ರೈನಾ (162), ಅಂಬಾಟಿ ರಾಯುಡು (153) ಇದ್ದಾರೆ. ಆಯುಷ್ 18ಕ್ಕಿಂತ ಕಡಿಮೆ ವಯಸ್ಸಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ವೈಭವ್ ಸೂರ್ಯವಂಶಿ(25), ಇಶಾನ್ ಕಿಶನ್ (13) ಮಾತ್ರ ಆಯುಷ್ಗಿಂತ(11) ಮುಂದಿದ್ದಾರೆ.
ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಸಿಎಸ್‌ಕೆ
ಭಾನುವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 83 ರನ್‌ಗಳ ಭಾರಿ ಅಂತರದಿಂದ ಜಯಗಳಿಸಿತು. ಈ ಮರೆಯಲಾಗದ ಋತುವನ್ನ ಗೆಲುವಿನೊಂದಿಗೆ ಕೊನೆಗೊಂಡಿತು. ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಬೃಹತ್ ಸ್ಕೋರ್ (230/5) ದಾಖಲಿಸಿತು. ಆಯುಷ್ ಮ್ಹಾತ್ರೆ (34), ಡೆವೊನ್ ಕಾನ್ವೇ (52), ಉರ್ವಿಲ್ ಪಟೇಲ್ (37) ಮತ್ತು ಡೆವಾಲ್ಡ್ ಬ್ರೆವಿಸ್ (57) ವಿಧ್ವಂಸಕಾರಿ ಇನ್ನಿಂಗ್ಸ್ ಆಡಿದ್ದರು.
ಇದೇ ಮೊದಲ ಬಾರಿಗೆ 150ಕ್ಕಿಂತ ಕಡಿಮೆ ಮೊತ್ತಕ್ಕೆ ಜಿಟಿ ಆಲೌಟ್
ನಂತರ ಬೃಹತ್ ಗುರಿಯನ್ನು ಬೆನ್ನಟ್ಟಲು ಹೊರಟ ಗುಜರಾತ್, ಸಿಎಸ್‌ಕೆ ತಂಡದ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಪತನಗೊಂಡಿತು. ಈ ಋತುವಿನಲ್ಲಿ ಗುಜರಾತ್ ಇಷ್ಟು ಕಡಿಮೆ ಸ್ಕೋರ್ಗೆ ಆಲೌಟ್ ಆಗಿದ್ದು ಇದೇ ಮೊದಲು. ಅನ್ಶುಲ್ ಕಾಂಬೋಜ್ ಮತ್ತು ನೂರ್ ಅಹ್ಮದ್ ತಲಾ ಮೂರು ವಿಕೆಟ್ ಪಡೆದು ಗುಜರಾತ್ ತಂಡದ ಸೋಲಿಗೆ ಕಾರಣರಾದರು.
ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಮತ್ತು ಪತೀರಣ ತಲಾ ಒಂದು ವಿಕೆಟ್ ಪಡೆದರು. ಗುಜರಾತ್ ಇನ್ನಿಂಗ್ಸ್‌ನಲ್ಲಿ ಸಾಯಿ ಸುದರ್ಶನ್ (41) ಗರಿಷ್ಠ ಸ್ಕೋರರ್ ಆಗಿದ್ದರೆ, ಅರ್ಷದ್ ಖಾನ್ (20), ಶುಭ್‌ಮನ್ ಗಿಲ್ (13), ಶಾರುಖ್ ಖಾನ್ (19), ತೆವಾಟಿಯಾ (140) ಮತ್ತು ರಶೀದ್ ಖಾನ್ (12) ಎಲ್ಲರೂ ಎರಡಂಕಿಯ ಸ್ಕೋರ್ ಗಳಿಸಿದರು.