Last Updated:
ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವು ಘಟನೆಗಳು ಮಾತ್ರ ಇದೆಲ್ಲವನ್ನೂ ಮೀರಿ ನಡೆಯುತ್ತದೆ. ಅಂತಹ ಘಟನೆಗಳೇ ಆಸ್ತಿಕರಲ್ಲಿ ದೇವರ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಂಥದ್ದೇ ಒಂದು ಘಟನೆ ವರದಿಯಾಗಿದ್ದು, ಇದು ಅಯ್ಯಪ್ಪ ಸ್ವಾಮಿ ದಯೆ ಎಂಬುದು ಭಕ್ತರ ಅಭಿಪ್ರಾಯ.
ದಕ್ಷಿಣ ಕನ್ನಡ: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತದೆ. ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಈಗ ಪುತ್ತೂರಿನಲ್ಲಿ ವರದಿಯಾಗಿದೆ. ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಯುವಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ (Lord Ayyappa). ಈ ಬಾರಿಯೂ ಮತ್ತೆ ಶಬರಿಮಲೆಗೆ ಹೋಗಲು ಮಾಲೆ ಹಾಕಿರುವ ಆತ ಮಾತನಾಡಲು ಆರಂಭಿಸಿದ್ದಾನಂತೆ (Dakshina Kannada News) (Ayyappa Devotees Faith).
ಪುತ್ತೂರಿನ ಸಾಮೆತ್ತಡ್ಕದ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಓದುತ್ತಿರುವ ಪ್ರಸನ್ನ ವರ್ಷದ ಹಿಂದೆ ಮಾತನಾಡಲು ಬಹಳ ಕಷ್ಟಪಡುತ್ತಿದ್ದನಂತೆ. ಎಲ್ಲವನ್ನೂ ಕೈ ಸನ್ನೆಯ ಮೂಲಕವೇ ಹೇಳುತ್ತಿದ್ದ ಪ್ರಸನ್ನ ಈಗ ಮಾತನಾಡಲು ಆರಂಭಿಸಿದ್ದಾರಂತೆ. ಪ್ರಸನ್ನನಲ್ಲಾಗಿರುವ ಬದಲಾವಣೆಗೆ ಅಯ್ಯಪ್ಪ ಸ್ವಾಮಿಯ ದಯೆಯೇ ಕಾರಣ ಎನ್ನುವುದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.
ಅಯ್ಯಪ್ಪ ಸ್ವಾಮಿ ಶರಣು ಹೇಳುವ ಪ್ರಸನ್ನ
ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಪ್ರಸನ್ನ ಕಳೆದ ವರ್ಷ ಐಯ್ಯಪ್ಪ ಮಾಲೆ ಹಾಕಿ 48 ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆಗೆ ಹೋಗಿದ್ದರಂತೆ. ಸುಮಾರು 48 ಮೈಲು ಕಾಡಿನ ದುರ್ಗಮ ಹಾದಿಯಲ್ಲಿ ಸಾಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದ ಪ್ರಸನ್ನ, ಈಗ ಮಾತನಾಡಲು ಆರಂಭಿಸಿದ್ದಾರಂತೆ. ಒಂದು ಶಬ್ದ ಉಚ್ಚರಿಸಲೂ ಚಡಪಡಿಸುತ್ತಿದ್ದ ಪ್ರಸನ್ನ ಇಂದು ಅಯ್ಯಪ್ಪ ಸ್ವಾಮಿಯ ಶರಣು ಹೇಳ್ತಿದ್ದಾರಂತೆ. ಪ್ರಸನ್ನ ಈಗ ಮಾತನಾಡುತ್ತಿದ್ದು, ಎಂಟು ಶರಣನ್ನು ಯಾವುದೇ ತೊಂದರೆಯಿಲ್ಲದೆ ಹೇಳುತ್ತಾರಂತೆ.
ಈ ಬಾರಿಯೂ ಅಯ್ಯಪ್ಪ ಮಾಲೆ ಧರಿಸಿರುವ ಯುವಕ
ಪ್ರಸನ್ನ ಮಾತುಗಳು ಸಂಪೂರ್ಣ ಸ್ಪಷ್ಟವಾಗಿಲ್ಲದಿದ್ದರೂ, ಪೋಷಕರು, ಭಕ್ತರಿಗೆ ಅರ್ಥವಾಗುತ್ತಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಏರಲು ಪ್ರಸನ್ನ ಸಿದ್ಧತೆ ನಡೆಸಿದ್ದಾರೆ. ಮತ್ತೆ ಶಬರಿಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಹಿರಿಯ ಸ್ವಾಮಿಗಳು. ಮೊದಲ ಬಾರಿ ಮಾಲೆ ಧರಿಸಲು ಬಂದಾಗ ಪ್ರಸನ್ನನಿಗೆ ಕೇಳಲು ಮತ್ತು ಮಾತನಾಡಲು ಬರುತ್ತಿರಲಿಲ್ಲ. ಆದರೆ ಈಗ ಒಂದು ಕಿವಿ ಕೇಳಿಸುತ್ತಿದೆ ಮತ್ತು ಮಾತನಾಡಲು ಸಾಧ್ಯವಾಗುತ್ತಿದೆ ಎಂದು ಹಿರಿಯ ಸ್ವಾಮಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: Mysuru: ಹನಗೋಡು ಶಾಲೆಯಲ್ಲಿ ಅಪೂರ್ವ ನಾಣ್ಯ-ನೋಟುಗಳ ಪ್ರದರ್ಶನ; ಪಂಚ್ ಮಾರ್ಕ್ ನಾಣ್ಯ ನೋಡಿ ವಿದ್ಯಾರ್ಥಿಗಳಿಗೆ ಅಚ್ಚರಿ
ಗುರು ಸ್ವಾಮಿಗಳಿಗೆ ಸಂತಸ
ಮೊದಲ ಬಾರಿ ಮಾಲೆ ಹಾಕಲು ಬಂದಾಗ ಕೈ ಸನ್ನೆಯ ಮೂಲಕವೇ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಈಗ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ. ಇಂತಹ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ವಿವರಿಸುತ್ತಾರೆ. ಈ ಸಾಲಿಗೆ ಈಗ ಪ್ರಸನ್ನ ಕೂಡ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಭಕ್ತರ ಮಾತಾಗಿದೆ.
ಆಸ್ತಿಕರ ಪಾಲಿಗೆ ಇದೊಂದು ನಂಬಿಕೆಯ ವಿಷಯವಾದರೆ, ನಾಸ್ತಿಕರ ಪಾಲಿಗೆ ಇದೊಂದು ಚರ್ಚೆಯ ವಿಷಯವಾಗಿದೆ. ಪ್ರಸನ್ನನಿಗೆ ಮಾತನಾಡಲು ಸಾಧ್ಯವಾಗುತ್ತಿರುವುದರ ಹಿಂದೆ ಇರುವ ಕಾರಣ ಮಾತ್ರ ದೈವ ಪವಾಡವೋ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
December 10, 2024 6:15 PM IST