Bali: ತುಡರ್‌ ಪರ್ಬ್‌ದ ಎಡ್ಡೆಪುಲು, ಬಲಿಯನ್ನು ಕರೆಯುವ ಹಾಡಿನ ಬಗ್ಗೆ ನಿಮಗೆ ಗೊತ್ತೇ?! | Mangaluru Tulu Nadu celebrates unique Balindra Leppu during Deepavali festival | ದಕ್ಷಿಣ ಕನ್ನಡ

Bali: ತುಡರ್‌ ಪರ್ಬ್‌ದ ಎಡ್ಡೆಪುಲು, ಬಲಿಯನ್ನು ಕರೆಯುವ ಹಾಡಿನ ಬಗ್ಗೆ ನಿಮಗೆ ಗೊತ್ತೇ?! | Mangaluru Tulu Nadu celebrates unique Balindra Leppu during Deepavali festival | ದಕ್ಷಿಣ ಕನ್ನಡ

Last Updated:

ತುಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ತುಡರ್ ಪರ್ಬವೆಂದು ಮೂರು ದಿನಗಳು ಆಚರಿಸಿ, ಬಲಿಪಾಡ್ಯಮಿ ದಿನ ಬಲೀಂದ್ರನಿಗೆ ವಿಶೇಷ ಪೂಜೆ, ಬಲಿಯೇಂದ್ರ ಲೆಪ್ಪು ಹಾಡುಗಳೊಂದಿಗೆ ಸಂಭ್ರಮಿಸುತ್ತಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಭಾರತಾದ್ಯಂತ (Nationwide)  ಆಚರಣೆಯಲ್ಲಿರುವ ಹಬ್ಬವು ತುಳುನಾಡಿನಲ್ಲಿ (Tulunadu)  ತುಡರ್ ಪರ್ಬವೆಂದು ಆಚರಣೆಯಲ್ಲಿದೆ. ಚತುರ್ದಶಿ, ಅಮಾವಾಸ್ಯೆ ಮತ್ತು ಪಾಡ್ಯದಂದು ತುಡರ್ ಪರ್ಬವನ್ನು ಆಚರಿಸಲಾಗುತ್ತದೆ. ನಿರಂತರವಾಗಿ ನಡೆಯುವ ಮೂರು ದಿನಗಳ ಹಬ್ಬವಾದ (Festival) ದೀಪಾವಳಿಯನ್ನು ತುಳುವರು ಮೊದಲನೆಯ ದಿನ ನರಕ ಚತುರ್ದಶಿಯನ್ನು ಮೀಯುವ ಹಬ್ಬ, ಎರಡನೆಯ ದಿನವಾದ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮತ್ತು ಮೂರನೆಯ ದಿನವಾದ ಪಾಡ್ಯವನ್ನು ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ. ತುಳುವರು ಬೇರೆ ಹಬ್ಬಕ್ಕಿಂತ ವಿಶಿಷ್ಟವಾಗಿ (Different) ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಇಂದು ಭೂಮಿಗೆ ಬರುತ್ತಾನೆ ಬಲಿ ಮಹಾರಾಜ

ಮೂರನೆಯ ದಿನವಾದ ಪಾಡ್ಯದಂದು ನಾಲ್ಕೈದು ಅಡಿ ಉದ್ದದ ಹಾಲೆ ಮರದ ಕಂಬವೊಂದನ್ನು ಗದ್ದೆಯ ಹುಣಿಯೊಂದರಲ್ಲಿ ವಿಧಿವತ್ತಾಗಿ ನೆಡುತ್ತಾರೆ. ಇದಕ್ಕೆ ಎರಡು ಮೂರು ಕವಲುಗಳಿರುವ ಕಂಬಗಳನ್ನೇ ಆರಿಸುತ್ತಾರೆ. ಆ ಕವಲಿಗೆ ಅಡ್ಡಲಾಗಿ ಕೋಲುಗಳನ್ನು ಕಟ್ಟುತ್ತಾರೆ. ಅದರ ಆಧಾರದಲ್ಲಿ ಹೂವಿನ ಮಾಲೆಗಳಿಂದ ಅಲಂಕಾರ ಮಾಡುತ್ತಾರೆ. ಇದನ್ನು ಬಲೆಕಿ ಮರ ಅಥವಾ ಬಲೀಂದ್ರ ಮರವೆಂದು ಕರೆಯುತ್ತಾರೆ. ಅದರ ತುದಿಗೆ ಬಟ್ಟೆಯೊಂದನ್ನು ದೊಂದಿಯಾಕಾರದಲ್ಲಿ ಕಟ್ಟಿ ಅದನ್ನು ತೆಂಗಿನ ಎಣ್ಣೆಯಿಂದ ಅದ್ದಿ ದೀಪ ಉರಿಯುವಂತೆ ಮಾಡುತ್ತಾರೆ. ಈ ಕಂಬವು ಬಲೀಂದ್ರನನ್ನು ಪ್ರತಿನಿಧಿಸುವ ಸಂಕೇತವಾಗಿದೆ.

ಬಲೀಂದ್ರ ಲೆಪ್ಪು ಬಗ್ಗೆ ಕೇಳಿದ್ದೀರಾ?

ಸೂರ್ಯಾಸ್ತವಾಗುತ್ತಿದ್ದಂತೆ ಗೋಪೂಜೆ, ಬಲೀಂದ್ರ ಪೂಜೆಗಳಿಗೆ ಸಿದ್ಧತೆ ಮಾಡಲಾಗುತ್ತದೆ. ಮನೆಯ ಅಂಗಳ, ಕಿಟಕಿ-ಬಾಗಿಲುಗಳ ಮುಂದೆ, ಹೊಸ್ತಿಲು, ನಡುಮನೆ, ಒಳಮನೆ, ಹೊರಗಿನ ಹಜಾರ, ಹಟ್ಟಿ, ಗೊಬ್ಬರದ ರಾಶಿ, ಬೈಹುಲ್ಲಿನ ತುಪ್ಪೆಗಳಿಗೆ ಸಣ್ಣಸಣ್ಣ ಮಣ್ಣಿನ ಹಣತೆಗಳನ್ನು ಇಟ್ಟು ದೀಪ ಬೆಳಗಿಸಲಾಗುತ್ತದೆ. ಇದು ಸಾಂಕೇತಿಕವಾಗಿ ಬಲೀಂದ್ರನನ್ನು ಸ್ವಾಗತಿಸುವ ಸಂಭ್ರಮವೂ ಹೌದು. ಬಳಿಕ ದೀಪ ಬೆಳಗುತ್ತಿರುವ ಗೆರಸೆಯನ್ನು ಬಲೀಂದ್ರನ ಸಂಕೇತವಾಗಿ ನೆಟ್ಟಿರುವ ಕಂಬದ ಬುಡದಲ್ಲಿ ಶುದ್ಧವಾಗಿ ತೊಳೆದಿರಿಸಿದ ಮಣೆಯ ಮೇಲಿಟ್ಟು ಆರತಿ ಮಾಡಿ, ಬಲಿಚಕ್ರವರ್ತಿಯ ಕಥೆಯನ್ನು ಸಾರುವ ಕಥೆಯನ್ನು ಪಾಡ್ಡನ ಅಥವಾ ಗಾಯನವನ್ನು ಹಾಡುತ್ತಾರೆ. ಇದನ್ನು ‘ಬಲಿಯೇಂದ್ರ ಲೆಪ್ಪುನು’ (ಬಲಿಯೇಂದ್ರ ಕರೆಯುವುದು) ಎಂದು ಹೇಳುತ್ತಾರೆ.

ಬಲೀಂದ್ರ ಲೆಪ್ಪುವಿನ ಕನ್ನಡ ವಿವರಣೆ ಇಲ್ಲಿದೆ

ಇದನ್ನೂ ಓದಿ: Attention Please: ನೇತ್ರಾವತಿ ನದಿಯಲ್ಲಿ ಸ್ನಾನಕ್ಕಿಳಿಯುವ ಮುನ್ನ ಎಚ್ಚರ, ಎಚ್ಚರ! ಯಾಮಾರಿದ್ರೆ ಕಾದಿದೆ ಅಪಾಯ

ಕಗ್ಗಲ್ಲು ಕಾಯಿಕೊಡುವಾಗ, ಬೆಳ್ಳಲ್ಲು ಹೂಬಿಡುವಾಗ, ಉಪ್ಪು ಕರ್ಪೂರ ಆಗುವಾಗ, ಅಂಗಗಳ ಬಂಡೆಹಾಸು ಆಗುವಾಗ, ಉದ್ದು ಮದ್ದಳೆ ಆಗುವಾಗ, ಗೊಡ್ಡೆಮ್ಮೆ ಕೋಣ ಆಗುವಾಗ, ಎತ್ತು ಮಂಗ ಆಗುವಾಗ, ನೆಕ್ಕಿ ಗಿಡದಡಿ ಯಕ್ಷಗಾನ ಆಗುವಾಗ, ತುಂಬೆ ಗಿಡದಡಿ ಕೂಟ ಆಗುವಾಗ, ಹೊಲದ ಬಿರುಕಿಗೆ ಕಾಲು ಸೇತುವೆ ಆಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ದಂಟೆ ಹಿಡಿದು ನಡೆಯುವ ಅಜ್ಜಿ ಮತ್ತೆ ಋತುಮತಿ‌ ಆಗುವಾಗ, ಗುರುಗುಂಜಿಯ ಕಲೆ ಮಾಸುವಾಗ ನಿನ್ನ ಊರು, ನಿನ್ನ ಸೀಮೆ ಆಳಿಕೊಂಡು ಬಾ ಬಲೀಂದ್ರ… ಕೂ… ಕೂ… ಕೂ… ಎಂದು ಬಲೀಯೆಂದ್ರನನ್ನು ಕರೆಯುತ್ತಾರೆ. (ಅಘಟಿತ ಘಟನೆಗಳು ನಡೆದಾಗ ಮತ್ತೆ ಆತ ಭೂಮಿಗೆ ಬಂದು ಆಳ್ವಿಕೆ ಮಾಡಬಹುದು ಎಂಬುದು ಇದರ ತಾತ್ಪರ್ಯ). ಇಲ್ಲಿಗೆ ಗೋಪೂಜೆ, ಬಲಿಯೇಂದ್ರ ಪೂಜೆ ಮುಗಿಯುತ್ತದೆ.