Bangladesh vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಠಿಸಿದ ಮುಷ್ಫಿಕರ್ ರಹೀಮ್! 17 ವರ್ಷಗಳ ಆಸಿಸ್ ದಿಗ್ಗಜನ ದಾಖಲೆ ಉಡೀಸ್ | Mushfiqur Rahim breaks Gilchrist record sets new milestone

Bangladesh vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಠಿಸಿದ ಮುಷ್ಫಿಕರ್ ರಹೀಮ್! 17 ವರ್ಷಗಳ ಆಸಿಸ್ ದಿಗ್ಗಜನ ದಾಖಲೆ ಉಡೀಸ್ | Mushfiqur Rahim breaks Gilchrist record sets new milestone

Last Updated:

ಬಾಂಗ್ಲಾದೇಶ vs ಶ್ರೀಲಂಕಾ ಟೆಸ್ಟ್‌‌ನಲ್ಲಿ ಬಾಂಗ್ಲಾದೇಶ ತಂಡದ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮುಷ್ಫಿಕರ್ ರಹೀಮ್ ಅವರು ಹೊಸ ದಾಖಲೆ ಬರೆದಿದ್ದಾರೆ.

ಮುಷ್ಫಿಕರ್ ರಹೀಮ್
ಮುಷ್ಫಿಕರ್ ರಹೀಮ್
ಮುಷ್ಫಿಕರ್ ರಹೀಮ್

2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಮೊದಲ ಸರಣಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ (Bangladesh vs Sri Lank) ನಡುವೆ ಆರಂಭವಾಗಿದೆ. ಶ್ರೀಲಂಕಾದ ಗಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧದ ಬಿಗಿ ಹಿಡಿತ ಸಾಧಿಸಿದೆ. ಮಾತ್ರವಲ್ಲ ಇದೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಮುಷ್ಫಿಕರ್ ರಹೀಮ್ (Mushfiqur Rahim) ಅವರು ಹೊಸ ದಾಖಲೆ ಬರೆದಿದ್ದಾರೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 500 ಕ್ಕೂ ಅಧಿಕ ರನ್ ಗಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಮುಷ್ಫಿಕರ್ ರಹೀಮ್ ಬಾಂಗ್ಲಾದೇಶದ ಬೃಹತ್ ರನ್‌ಗಳಿಕೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 12ನೇ ಶತಕವನ್ನು ಪೂರ್ಣಗೊಳಿಸಿದರು. ಈ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಅವರು ಆಸ್ಟ್ರೇಲಿಯಾದ ಲೆಜೆಂಡ್ ಆಡಂ ಗಿಲ್‌ಕ್ರಿಸ್ಟ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಬ್ರೇಕ್ ಮಾಡಿದ್ದಾರೆ.

ಮುಷ್ಫಿಕರ್ ರಹೀಮ್ 350 ಎಸೆತಗಳಲ್ಲಿ 163 ರನ್ ಗಳಿಸಿ ಔಟ್ ಆದರು. ಆ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡದೆ 15,502 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಒಂದೇ ಒಂದು ಬಾಲ್ ಎಸೆಯದೆ 15,461 ರನ್ ಗಳಿಸಿದ್ದ ಗಿಲ್‌ಕ್ರಿಸ್ಟ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿದ್ದಾರೆ.

ಒಂದೇ ಒಂದು ಎಸೆತ ಬೌಲ್ ಮಾಡದೆ ಅತೀ ಹೆಚ್ಚು ರನ್ ಗಳಿಸಿದ ಆಟಗಾರರು.

ಆಟಗಾರ ರನ್ಸ್ ದೇಶ
ಮುಷ್ಫಿಕರ್ ರಹೀಮ್ 15,502 ಬಾಂಗ್ಲಾದೇಶ
ಆಡಮ್ ಗಿಲ್‌ಕ್ರಿಸ್ಟ್ 15,461 ಆಸ್ಟ್ರೇಲಿಯಾ
ಕ್ವಿಂಟನ್ ಡಿ ಕಾಕ್ 12,654 ದಕ್ಷಿಣ ಆಫ್ರಿಕಾ
ಜೋಸ್ ಬಟ್ಲರ್ 11,881 ಇಂಗ್ಲೆಂಡ್
ಜಾನಿ ಬೈರ್‌ಸ್ಟೋವ್ 11,581 ಇಂಗ್ಲೆಂಡ್

ಮತ್ತೊಂದು ದಾಖಲೆ ಬರೆದ ಮುಷ್ಫಿಕರ್ ರಹೀಮ್

38 ವರ್ಷ 39 ದಿನ ವಯಸ್ಸಿನ ಮುಷ್ಫಿಕರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆರಂಭಿಕನಲ್ಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2015 ರಲ್ಲಿ ಶ್ರೀಲಂಕಾ ವಿರುದ್ಧ 37 ವರ್ಷ 216 ದಿನ ವಯಸ್ಸಿನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ದಂತಕಥೆ ಯೂನಿಸ್ ಖಾನ್ ಅವರ ದಾಖಲೆಯನ್ನು ಅವರು ಅಳಿಸಿ ಹಾಕಿದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆರಂಭಿಕರಲ್ಲದ ಬ್ಯಾಟ್ಸ್‌ಮನ್‌ಗಳ ಲಿಸ್ಟ್:

ಆಟಗಾರ ವಯಸ್ಸು ತಂಡ ಎದುರಾಳಿ ಸ್ಥಳ ವರ್ಷ
ಮುಷ್ಫಿಕರ್ ರಹೀಮ್ 38 ವರ್ಷಗಳು, 39 ದಿನಗಳು ಬಾಂಗ್ಲಾದೇಶ ಶ್ರೀಲಂಕಾ ಗ್ಯಾಲೆ 2025
ಯೂನಿಸ್ ಖಾನ್ 37 ವರ್ಷಗಳು, 216 ದಿನಗಳು ಪಾಕಿಸ್ತಾನ ಶ್ರೀಲಂಕಾ ಪಲ್ಲೆಕೆಲೆ 2015
ಸಚಿನ್ ತೆಂಡೂಲ್ಕರ್ 37 ವರ್ಷಗಳು, 93 ದಿನಗಳು ಭಾರತ ಶ್ರೀಲಂಕಾ ಕೊಲಂಬೊ 2010
ಮಹೇಲ ಜಯವರ್ಧನೆ 37 ವರ್ಷಗಳು, 58 ದಿನಗಳು ಶ್ರೀಲಂಕಾ ದಕ್ಷಿಣ ಆಫ್ರಿಕಾ ಕೊಲಂಬೊ 2014
ಅಲನ್ ಬಾರ್ಡರ್ 37 ವರ್ಷಗಳು, 43 ದಿನಗಳು ಆಸ್ಟ್ರೇಲಿಯಾ ಶ್ರೀಲಂಕಾ ಮೊರಟುವಾ 1992

ಇಷ್ಟು ಮಾತ್ರವಲ್ಲ,  ಮುಷ್ಫಿಕರ್ ರಹೀಮ್ ಅವರು ಮೊಹಮ್ಮದ್ ಅಶ್ರಫುಲ್ ಅವರನ್ನು ಹಿಂದಿಕ್ಕಿ ಶ್ರೀಲಂಕಾ ನೆಲದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬಾಂಗ್ಲಾದೇಶದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.