Last Updated:
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ಜೂನಿಯರ್ ಮತ್ತು ಮಹಿಳಾ ಆಯ್ಕೆ ಸಮಿತಿಗೂ ನೂತನವಾಗಿ ಅಧ್ಯಕ್ಷರನ್ನು ನೇಮಿಸಿಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ 84ನೇ ವಾರ್ಷಿಕ ಸಭೆಯಲ್ಲಿ ಹೊಸ ಅಧ್ಯಕ್ಷರನ್ನು ಘೋಷಿಸಿದೆ. ದೆಹಲಿ ರಣಜಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ (Mithun manhas) ಅವರು ಬಿಸಿಸಿಐನ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದಲ್ಲದೆ, ಟೀಮ್ ಇಂಡಿಯಾ ಪುರುಷರ ಆಯ್ಕೆ ಸಮಿತಿಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಅಜಿತ್ ಅಗರ್ಕರ್ (Ajit Agarkar) ನೇತೃತ್ವದ ಆಯ್ಕೆ ಸಮಿತಿಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ (Pragyan Ojha) ಮತ್ತು ಆರ್ಪಿ ಸಿಂಗ್ (RP Singh) ಅವರನ್ನು ಸೇರಿಸಲಾಗಿದೆ.
ಪುರುಷರ ಆಯ್ಕೆ ಸಮಿತಿಯಿಂದ ಕೈಬಿಟ್ಟ ನಂತರ ತಮಿಳುನಾಡಿನ ಮಾಜಿ ಸ್ಟಾರ್ ಬ್ಯಾಟರ್ ಎಸ್. ಶರತ್ ಅವರನ್ನು ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪುರುಷರ ಆಯ್ಕೆ ಸಮಿತಿಯ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದವರ ಸಾಲಿನಲ್ಲಿ ಓಜಾ ಮತ್ತು ಆರ್ಪಿ ಸಿಂಗ್ ಅವರಲ್ಲದೆ, ಪ್ರವೀಣ್ ಕುಮಾರ್, ಅಮಯ್ ಖುರಾಸಿಯಾ, ಆಶಿಶ್ ವಿನ್ಸ್ಟನ್ ಜೈದಿ ಮತ್ತು ಶಕ್ತಿ ಸಿಂಗ್ ಅವರಂತಹ ಆಟಗಾರರು ಸೇರಿದ್ದಾರೆ.
ಅಮಿತಾ ಶರ್ಮಾ ಅವರು ಮಹಿಳಾ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಜೊತೆಗೆ ಭಾರತ ತಂಡದ ಪರ 116 ಏಕದಿನ ಪಂದ್ಯಗಳನ್ನು ಆಡಿರುವ ಮಾಜಿ ವೇಗದ ಬೌಲರ್ ನೀತು ಅವರೊಂದಿಗೆ ಶ್ಯಾಮಾ ಡೇ, ಜಯ ಶರ್ಮಾ ಮತ್ತು ಶ್ರವಂತಿ ನಾಯ್ಡು ಕೂಡ ಮಹಿಳಾ ಆಯ್ಕೆ ಸಮಿತಿಗೆ ಆಯ್ಕೆಯಾಗಿದ್ದಾರೆ.
ಬಿಸಿಸಿಐನ ಅರ್ಹತಾ ಮಾನದಂಡಗಳ ಪ್ರಕಾರ, ಅರ್ಜಿದಾರರು ಅರ್ಜಿ ಸಲ್ಲಿಸಲು ಕನಿಷ್ಠ ಏಳು ಟೆಸ್ಟ್ಗಳು, 30 ಪ್ರಥಮ ದರ್ಜೆ ಪಂದ್ಯಗಳು, 10 ಏಕದಿನ ಪಂದ್ಯಗಳು ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಇದಲ್ಲದೆ, ಅರ್ಜಿದಾರರು ಕನಿಷ್ಠ ಐದು ವರ್ಷಗಳ ಹಿಂದೆ ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತರಾಗಿರಬೇಕು. ಪ್ರಗ್ಯಾನ್ ಓಜಾ ಮತ್ತು ಆರ್ಪಿ ಸಿಂಗ್ ಅವರ ವೃತ್ತಿಜೀವನದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ, ಇಬ್ಬರೂ ಮಾಜಿ ಕ್ರಿಕೆಟಿಗರು ತಮ್ಮ ಅವಧಿಯಲ್ಲಿ ಭಾರತ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಪ್ರದರ್ಶನ ನೀಡಿದ್ದರು.
39 ವರ್ಷದ ಪ್ರಗ್ಯಾನ್ ಓಜಾ ಎಡಗೈ ಸ್ಪಿನ್ನರ್ ಆಗಿದ್ದು, ಭಾರತ ತಂಡವನ್ನು 24 ಟೆಸ್ಟ್, 18 ಏಕದಿನ ಮತ್ತು ಆರು ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ ಒಟ್ಟು 144 ವಿಕೆಟ್ಗಳನ್ನು ಪಡೆದಿದ್ದಾರೆ. ದೇಸೀಯ ಕ್ರಿಕೆಟ್ನಲ್ಲಿ ಹೈದರಾಬಾದ್, ಬಂಗಾಳ ಮತ್ತು ಬಿಹಾರ ತಂಡಗಳ ಪರ ಓಜಾ ಆಡಿದ್ದಾರೆ.
ಆರ್ಪಿ ಸಿಂಗ್ ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದವರು. ಈ ಮಾಜಿ ಎಡಗೈ ವೇಗಿ ಟೀಮ್ ಇಂಡಿಯಾ ಪರ 2005 ಮತ್ತು 2011 ರ ನಡುವೆ 14 ಟೆಸ್ಟ್, 58 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 124 ವಿಕೆಟ್ಗಳನ್ನು ಕಬಳಿಸಿದ್ದಾರೆ.
September 28, 2025 7:15 PM IST