ಹೌದು, ಇದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಶ್ರೀನಿವಾಸ್ ನಗರದ ನಿವಾಸಿ ಶ್ರೀನಾಥ್ ಕುಲಕರ್ಣಿಯ ಕಥೆ. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಇವರು ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಅಂಪೈರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಪೈರಿಂಗ್ ಮಾಡಲು ಹೊರಟಿದ್ದಾರೆ. ಬಾಲ್ಯದ ಕನಸಿದ್ದದ್ದು ಭಾರತದ ಪರ ಆಡೋದು, ಆದರೆ ಈಗ ಬೇರೆಯವರನ್ನು ಆಡಿಸಲು ಹೋಗುತ್ತಿದ್ದರೂ ಅಂಪೈರ್ ಪದವಿಕ್ಕೆರೋದು ಅಷ್ಟು ಸುಲಭದ ಮಾತಲ್ಲ, ಅಲ್ಲವೇ?!
ಲೋಕಲ್ 18 ಜೊತೆಗೆ ಮಾತನಾಡಿದ ಶ್ರೀನಾಥ್, ಕ್ರಿಕೆಟ್ ಆಟಗಾರನಾಗುವ ಕನಸು ಈಡೇರದಿದ್ದರೂ, ಅಂಪೈರಿಂಗ್‌ನಲ್ಲಿ ಈ ಸಾಧನೆ ಮಾಡಿರುವುದು ಹೆಚ್ಚು ಖುಷಿಕೊಟ್ಟಿದೆ. ಪ್ಲೇಯರ್ ಆಗಿ ಸಾಧನೆ ಮಾಡಲು ಆಗಲಿಲ್ಲ. ಆದ್ದರಿಂದ ಕ್ರಿಕೆಟ್ ಜೊತೆಗಿನ ಬಾಂಧವ್ಯ ಇರಬೇಕು ಅಂತ ಅಂಪೈರ್ ಆಗಲು ನಿರ್ಧಾರ ಮಾಡಿದೆ. ಈ ಜರ್ನಿಯಲ್ಲಿ ಗುರುಗಳಿಗೆ ಧನ್ಯವಾದ ಹೇಳಬೇಕಿದೆ, ಅಭಿಜಿತ್ ಬೆಂಗೇರಿ ಅವರು ನನಗೆ 2015ರಿಂದ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇದರೊಂದಿಗೆ ಇನ್ನು ಸಾಕಷ್ಟು ಮಂದಿ ನನಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಶ್ರೀನಾಥ್, ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಬಿಸಿಸಿಐ ಅಂಪೈರಿಂಗ್ ಪರೀಕ್ಷೆ ಬರೆದು, ಜುಲೈ 3ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಸಿಸಿಐ ಅಂಪೈರ್ ಆಗಿ ಅರ್ಹತೆ ಪಡೆದುಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀನಾಥ್ ಅವರ ತಂದೆ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದು, ಹುಬ್ಬಳ್ಳಿಯಲ್ಲೇ ನೆಲೆಸಿದ್ದಾರೆ. ಶ್ರೀನಾಥ್, ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯಲ್ಲಿ ವಿಜಯ್ ಕಾಮತ್ ಬಳಿ ತರಬೇತಿ ಪಡೆದಿದ್ದಾರೆ. ಬಿಡಿಕೆ ಸ್ಪೋರ್ಟ್ಸ್ ಕ್ಲಬ್ ಪರ ಆಡಿದ್ದ ಅವರು, ಎಂಜಿನಿಯರಿಂಗ್ ನಂತರ ಕೆಎಸ್‌ಸಿಎ ಅಂಪೈರ್ ಆಗಿ 2014ರಲ್ಲಿ ಆಯ್ಕೆಯಾಗಿ, ಉದ್ಯೋಗದ ಜತೆಗೆ ಅಂಪೈರಿಂಗ್ ಮಾಡುತ್ತಿದ್ದಾರೆ.
ಉದ್ಯೋಗದ ಜೊತೆಗೆಯೇ ಅಂಪೈರಿಂಗ್ ಮಾಡುತ್ತಾ ಕ್ರಿಕೆಟ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದ್ದ ಶ್ರೀನಾಥ್, 2014, 2019ರಲ್ಲಿಯೂ ಪರೀಕ್ಷೆ ಬರೆದಿದ್ದರು. ಆದರೆ ಈ ಬಾರಿ ಮೂರನೇ ಪ್ರಯತ್ನದಲ್ಲಿ ಬಿಸಿಸಿಐ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಆವೃತ್ತಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ, ಒಟ್ಟು 26 ಮಂದಿ ಜನರು ಅಂಪೈರ್‌ಗಳಾಗಿ ಆಯ್ಕೆಯಾಗಿದ್ದಾರೆ.
ಯಾರೇ ಆಗಲಿ ಅಂಪೈರ್ ಆಗಬೇಕು ಎಂದು ಕೊಂಡರೆ ಅವರಿಗೆ ಮೊದಲು ಈ ಕುರಿತು ಅಭಿರುಚಿ ಇರಬೇಕು ಅಂತ ಹೇಳುತ್ತಾರೆ ಶ್ರೀನಾಥ್, ಆದರೆ ಈ ಜರ್ನಿ ಅಷ್ಟು ಸುಲಭ ಇರೋದಿಲ್ಲ. ಏಕೆಂದರೆ ನೀವು ದಿನ ಪೂರ್ತಿ ಬಿಸಿಲಿನಲ್ಲಿ ನಿಂತುಕೊಂಡು ಇರಬೇಕು. ಇದಕ್ಕೆ ನಿಮ್ಮ ದೈಹಿಕ ಸಾಮರ್ಥ್ಯ ಎಷ್ಟು ಮುಖ್ಯವೋ ನಿಮ್ಮ ಮಾನಸಿಕ ದೃಢತೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಕ್ರಿಕೆಟ್‌ನಲ್ಲಿ ನೀವು ಅಂಪೈರ್ ಆಗಲು, ಕ್ರಿಕೆಟ್ ಆಟಗಾರ ಆಗಿರಲೇ ಬೇಕು ಅಂತ ಏನು ಇಲ್ಲ. ಆದರೆ ನೀವು ಕ್ರಿಕೆಟ್ ಆಟಗಾರರಾದರೆ ನಿಮಗೆ ಅಲ್ಲಿಯೇ ಬಹುತೇಕ ನಿಯಮಗಳು ತಿಳಿದುಕೊಳ್ಳಬಹುದು. ಜೊತೆಗೆ ಟಿವಿಯಲ್ಲಿ ಕ್ರಿಕೆಟ್ ನೋಡುವುದು, ಆನ್‌ಫೀಲ್ಡ್‌ನಲ್ಲಿ ಪಂದ್ಯಗಳನ್ನು ನೋಡುವುದರಿಂದಲೂ ಸಾಕಷ್ಟು ಕಲಿಯುವ ಅವಕಾಶ ಇರುತ್ತದೆ.
ಅಂಪೈರ್ ಆಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಕೆಲವು ತರಬೇತಿಗಳು ಕೂಡ ಸಿಗುತ್ತದೆ. ಆ ಬಳಿಕ ನೀವು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಕೆಎಸ್‌ಸಿಎನಲ್ಲಿ ನೀವು ಅಂಪೈರ್ ಆಗಿ ಆಯ್ಕೆಯಾಗಿ ಕನಿಷ್ಠ 2-3 ವರ್ಷ ಕಾರ್ಯ ನಿರ್ವಹಿಸಬೇಕು. ಆ ಬಳಿಕ ಬಿಸಿಸಿಐ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಅಂಪೈರ್ ಬಗ್ಗೆ ನೋಟಿಫಿಕೇಶನ್‌ಗಳನ್ನು ನೀಡುತ್ತದೆ. ಆಗ ಅನುಭವ ಇರುವ ಅಂಪೈರ್‌ಗಳನ್ನು ಬಿಸಿಸಿಐಗೆ ರೆಫರ್ ಮಾಡಲಾಗುತ್ತದೆ. ಈ ಬಾರಿ ಕರ್ನಾಟಕ ಸೇರಿದಂತೆ ಇತರ ಸಂಸ್ಥೆಗಳಿಗೆ ಕೇವಲ ನಾಲ್ವರನ್ನು ರೆಫರ್ ಮಾಡಲು ಅವಕಾಶ ನೀಡಲಾಗಿತ್ತು. ಇದರಂತೆ ಕೆಎಸ್‌ಸಿಎ ಬೆಂಗಳೂರಿನಲ್ಲಿಯೇ ಪರೀಕ್ಷೆ ನಡೆಸಿತ್ತು, ಇದರಲ್ಲಿ 83 ಮಂದಿ ಭಾಗಿಯಾಗಿದ್ದರು. ಇವರಲ್ಲಿ ನಾಲ್ವರನ್ನು ಬಿಸಿಸಿಐಗೆ ರೆಫರ್ ಮಾಡಲಾಗಿತ್ತು, ಈ ಪಟ್ಟಿಯಲ್ಲಿ ನನ್ನ ಹೆಸರು ಇತ್ತು, ಎಂದು ಶ್ರೀನಾಥ್ ತಿಳಿಸಿದ್ದಾರೆ.
ಕೆಎಸ್‌ಸಿಎ ನಿಂದ ಪಟ್ಟಿ ಫೈನಲ್ ಆದ ಬಳಿಕ ಅಹಮದಾಬಾದ್‌ನಲ್ಲಿ ಮಾರ್ಚ್ ತಿಂಗಳಿನಲ್ಲಿ ಮೂರು ದಿನಗಳ ಸೆಮಿನರ್ ನಡೆಸಲಾಗಿತ್ತು. ಇಲ್ಲಿ ಅಂಪೈರ್ ಪರೀಕ್ಷೆ ಯಾವ ಹಂತಗಳಲ್ಲಿ ನಡೆಸಲಾಗುತ್ತದೆ. ಏನೆಲ್ಲಾ ಹಂತಗಳು ಇರುತ್ತದೆ? ಯಾವೆಲ್ಲಾ ವಿಚಾರಗಳನ್ನು ಓದಬೇಕು ಎಂಬ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿ, ಅಭ್ಯಾಸ ನಡೆಸಲು ಮೂರು ತಿಂಗಳು ಕಾಲಾವಕಾಶ ನೀಡಿದ್ದರು. ಜೂನ್‌ನಲ್ಲಿ 75 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು, ಆ ಬಳಿಕ ಪ್ರಾಕ್ಟಿಕಲ್ ಎಕ್ಸಾಮ್ ಸೇರಿದಂತೆ ಪ್ರೆಸೆಂಟೇಶನ್ ಇರುತ್ತದೆ.
ಇದರೊಂದಿಗೆ ವಿಶೇಷವಾಗಿ ವಿಡಿಯೋ ಅವರ್ ಕೂಡ ಪ್ರಮುಖವಾಗಿರುತ್ತದೆ. ಒಟ್ಟು ನಾಲ್ಕು ದಿನಗಳು ನಡೆದ ಈ ಪರೀಕ್ಷೆಯಲ್ಲಿ ಒಟ್ಟು 154 ಮಂದಿ ಭಾಗಿಯಾಗಿದ್ದರು. ಕರ್ನಾಟಕದಿಂದ ಶಿವಮೊಗ್ಗದ ಜೆ ಸಂದೀಪ್ ಅವರು ಬಿಸಿಸಿಐ ಅಂಪೈರ್‌ಗಳಾಗಿ ಆಯ್ಕೆಯಾಗಿದ್ದೇವೆ ಎಂದು ಶ್ರೀನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
Bangalore [Bangalore],Bangalore,Karnataka
July 09, 2025 10:33 AM IST