Last Updated:
Mangaluru Pilikulaನಲ್ಲಿ Karnataka Tourism ಮತ್ತು ಅರಣ್ಯ ಇಲಾಖೆ ಹಮ್ಮಿಕೊಂಡ ಹಕ್ಕಿ ಹಬ್ಬದಲ್ಲಿ 12 ಕಡೆ ಪಕ್ಷಿ ವೀಕ್ಷಣೆ, ಅಧಿವೇಶನ, ಮಕ್ಕಳ ಭಾಗವಹಿಸುವಿಕೆ ಗಮನಸೆಳೆದಿದೆ.
ಮಂಗಳೂರು: ಪಕ್ಷಿ, ಹಕ್ಕಿಗಳನ್ನು(Birds) ನೋಡುವುದೇ ಒಂದು ಚೆಂದ. ಅದರಲ್ಲೂ ಅದಕ್ಕಾಗಿ ಒಂದು ಹಬ್ಬ (Festival) ನಡೆಯುತ್ತೆ ಅಂದ್ರೆ ಅದು ಇನ್ನೂ ಖುಷಿ. ಹೌದು ಕರ್ನಾಟಕ ಪ್ರವಾಸೋದ್ಯಮ (Karnataka Tourism) ಅಭಿವೃದ್ಧಿ ಮಂಡಳಿ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ (Mangaluru) ಪಿಲಿಕುಲದಲ್ಲಿ ನಡೆದ ಹಕ್ಕಿಹಬ್ಬ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಹಕ್ಕಿಗಳ ಬಗ್ಗೆ ಅಧ್ಯಯನ ಮತ್ತು ಕುತೂಹಲ ಇರುವ ಮಕ್ಕಳು ಈ ಹಕ್ಕಿಹಬ್ಬದ ಭರಪೂರ ಪ್ರಯೋಜನವನ್ನು ಪಡೆಯುವ ತಾವೂ ಒಬ್ಬ ಹಕ್ಕಿ ಪ್ರೇಮಿ ಆಗಬೇಕು ಎನ್ನುವ ದೃಢ ನಿಶ್ಚಯವನ್ನು ತೆಗೆದುಕೊಂಡಿದ್ದಾರೆ.
ಮಂಗಳೂರಿನ ಪಿಲಿಕುಳದಲ್ಲಿ ಜ. 9ರಿಂದ 11ರವರೆಗೆ ಹಕ್ಕಿ ಹಬ್ಬ ಆಯೋಜನೆ ಆಗಿತ್ತು. ಪಕ್ಷಿ ವೀಕ್ಷಕರು, ಸಂಶೋಧಕರು, ವನ್ಯ ಜೀವಿ ಛಾಯಾಗ್ರಾಹಕರು ಈ ಹಬ್ಬಕ್ಕೆ ಸಾಕ್ಷಿಯಾಗಿದ್ದಾರೆ. ವಿವಿಧ ಪಕ್ಷಿಗಳ ಬಗ್ಗೆ ಮತ್ತು ಪಕ್ಷಿಗಳ ಪ್ರಾಮುಖ್ಯತೆ ಮತ್ತು ಪ್ರಕೃತಿಯ ಸಂರಕ್ಷಣೆಯ ಬಗ್ಗೆ ಕಲ್ಪನೆಯನ್ನು ನೀಡುವುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿತ್ತು.
ಮಂಗಳೂರು ನಗರ, ಗ್ರಾಮಾಂತರ ಭಾಗದ ಸುಮಾರು 12 ಕಡೆಗಳಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.ಸಾಮಾನ್ಯವಾಗಿ ಮೂರು ದಿನಗಳ ಕಾಲ ನಡೆಯುವ ಹಕ್ಕಿ ಹಬ್ಬದಲ್ಲಿ ಮೂರೂ ದಿನವೂ ವಿವಿಧ ಕಡೆಗಳಲ್ಲಿ ಪಕ್ಷಿ ವೀಕ್ಷಣೆಗೇ ಮಕ್ಕಳಿಗೆ ಅವಕಾಶವನ್ನು ನೀಡಲಾಗಿತ್ತು. ಮಂಗಳೂರಿನ ಮಂಜಲ್ಪಾದೆ, ಜೋಕಟ್ಟೆ ಸೇರಿದಂತೆ ಸುಮಾರು 12 ಕಡೆ ಹಕ್ಕಿಗಳ ವೀಕ್ಷಣೆಯನ್ನು ಮಾಡಲಾಗಿದೆ.
ಹಕ್ಕಿ ಹಬ್ಬದಲ್ಲಿ ವಿವಿಧ ರಾಜ್ಯಗಳ ಪಕ್ಷಿ ವಿಜ್ಞಾನಿಗಳು ಭಾಗವಹಿಸಲಿದ್ದು, ವಿವಿಧ ಪಕ್ಷಿಗಳ ಬಗ್ಗೆ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಅಧಿವೇಶನವೂ ನಡೆದಿದೆ. ನಾನಾ ರಾಜ್ಯಗಳ ಪಕ್ಷಿ ವೈವಿದ್ಯತೆಯ ಬಗ್ಗೆ ಮಾತುಕತೆ ನಡೆದಿದೆ. ಸ್ಥಳೀಯರು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಹಕ್ಕಿಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹಕ್ಕಿಗಳ ಮೇಲೆ ತಮಗಿರುವ ಒಲವನ್ನ ತೋರ್ಪಡಿಸಿದ್ದಾರೆ.
ಪಿಲಿಕುಳದಲ್ಲಿ ಎಂಟು ವರ್ಷಗಳ ಹಿಂದೆ ಕರ್ನಾಟಕ ಹಕ್ಕಿ ಹಬ್ಬ ನಡೆದಿತ್ತು. ಪಕ್ಷಿ ತಜ್ಞರಿಂದ ಉಪನ್ಯಾಸ, ವ್ಯಂಗ್ಯಚಿತ್ರ ಕಾರ್ಯಾಗಾರ, ರಸಪ್ರಶ್ನೆ ನಡೆದಿತ್ತು. ಸಸಿಹಿತ್ತು, ಮಂಗಳೂರು ಚೌಗು ಪ್ರದೇಶ ಹಾಗೂ ಮಂಗಳೂರು ವಿ.ವಿ.ಗಳಲ್ಲಿ ಪಕ್ಷಿ ಪ್ರವಾಸೋದ್ಯಮ ಏರ್ಪಡಿಸಲಾಗಿತ್ತು. ಬೋಟಿನಲ್ಲಿ ದ್ವೀಪಕ್ಕೆ ತೆರಳಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ಪ್ರಕಾರ ಈ ಬಾರಿಯೂ ಈ ಪ್ರದೇಶಗಳಲ್ಲದೆ ಹಕ್ಕಿಗಳ ಹೆಚ್ಚು ಸಂಚಾರವಿರುವ ಪ್ರದೇಶಗಳನ್ನೂ ಗುರುತಿಸಿ, ಅಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು , ಮಕ್ಕಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.
Dakshina Kannada,Karnataka
Jan 14, 2026 12:17 PM IST