Bisile Ghat: ಮಳೆಗಾಲ ಕಳೆದರೂ ಕುಗ್ಗಲ್ಲ ಬಿಸಿಲೆಯ ಸೌಂದರ್ಯ! ವೀಕೆಂಡ್‌ಗೆ ಹೇಳಿ ಮಾಡಿಸಿದ ಜಾಗ ಇದು | Bisile Ghat is most favorite place for tourists from its beauty

Bisile Ghat: ಮಳೆಗಾಲ ಕಳೆದರೂ ಕುಗ್ಗಲ್ಲ ಬಿಸಿಲೆಯ ಸೌಂದರ್ಯ! ವೀಕೆಂಡ್‌ಗೆ ಹೇಳಿ ಮಾಡಿಸಿದ ಜಾಗ ಇದು | Bisile Ghat is most favorite place for tourists from its beauty

Last Updated:

ಗಿರಿ ಶಿಖರಗಳ ನಡುವೆ ಸೌಂದರ್ಯವನ್ನೇ ಆಸ್ತಿಯನ್ನಾಗಿಸಿರುವ ರಾಜ್ಯದ ಕೆಲವೇ ಕೆಲವು ಸ್ಪಾಟ್‌ಗಳಲ್ಲಿ ದಕ್ಷಿಣಕನ್ನಡ ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವ ಬಿಸಿಲೆಘಾಟ್ ಕೂಡಾ ಒಂದು.

X

ವಿಡಿಯೋ ಇಲ್ಲಿ ನೋಡಿ

ಮಳೆಗಾಲ‌(Rainy Season) ಕೊನೆಗೊಳ್ಳುವ ಹೊತ್ತಿಗೆ, ಬೇಸಿಗೆ(Summer) ಇನ್ನೇನು ಬರಲು ಮುಂದಡಿ ಇಡುವ ಸಮಯದಲ್ಲಿ ಪ್ರಕೃತಿಯ(Nature) ರಮಣೀಯ ಪ್ರದೇಶಗಳಿಗೊಮ್ಮೆ ಭೇಟಿ ನೀಡಿದರೆ ಮನಸ್ಸಿನ ದುಗುಡು ದುಮ್ಮಾನಗಳನ್ನು ಮರೆಯಬಹುದು.

ಪ್ರವಾಸಿಗರ ಫೇವರಿಟ್‌ ಸ್ಪಾಟ್!

ಹೌದು ಮಳೆಗಾಲದಲ್ಲಿ ಪ್ರಕೃತಿ ಮಾತೆ ಹಸಿರ ಸೀರೆಯನ್ನುಟ್ಟು ನವ ವಧುವಿನಂತೆ ಕಂಗೊಳಿಸುವ ಪ್ರಕೃತಿ ಮಳೆಗಾಲ ಕಳೆದು ಬೇಸಿಗೆಕಾಲ ಬರುವ ತನಕವೂ ಅದೇ ಸೌಂದರ್ಯದಲ್ಲಿ ಮೆರೆಯುತ್ತಾಳೆ. ಇವಳ ನೈಜ ಸೌಂದರ್ಯಕ್ಕೆ ಮಾರು ಹೋಗದ ಮನಸ್ಸುಗಳಿಲ್ಲ. ಕಾಣಲು ಹಂಬಲಿಸದ ಕಣ್ಣುಗಳಿಲ್ಲ. ಗಿರಿ ಶಿಖರಗಳ ನಡುವೆ ಸೌಂದರ್ಯವನ್ನೇ ಆಸ್ತಿಯನ್ನಾಗಿಸಿರುವ ರಾಜ್ಯದ ಕೆಲವೇ ಕೆಲವು ಸ್ಪಾಟ್‌ಗಳಲ್ಲಿ ದಕ್ಷಿಣಕನ್ನಡ ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವ ಬಿಸಿಲೆಘಾಟ್ ಕೂಡಾ ಒಂದು.

ಬಿಸಿಲೆ ಘಾಟ್‌ ಎಲ್ಲಿದೆ?

ಸುಂದರ ವಾತಾವರಣ, ಹಕ್ಕಿಗಳ‌ ಚಿಲಿಪಿಲಿ ಸದ್ದು, ಹರಿಯುವ ನೀರಿನ ನಿನಾದ, ಮುಗಿಲು ಚುಂಬಿಸುವ ಗಿರಿ ಶಿಖರಗಳು..ಈ ಅದ್ಭುತ ಚಿತ್ರಣ ಕಂಡು ಬರೋದು ಬಿಸಿಲೆಘಾಟ್ ನಲ್ಲಿ..ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಿಂದ ಕೇವಲ 26 ಕಿಲೋಮೀಟರ್ ದೂರದಲ್ಲಿರುವ ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೂಡು ಸಂಗಮವಾದ ಈ ಪ್ರದೇಶವೇ ಬಿಸಿಲೆ ಫಾಟ್. ಮಳೆಗಾಲ ಬಂತೆಂದರೆ ಸಾಕು ಈ ಪ್ರದೇಶ ತನ್ನ ಪ್ರಕೃತಿದತ್ತವಾದ ನೈಜ ಸೌಂದರ್ಯಕ್ಕೆ ತೆರೆದುಕೊಳ್ಳುತ್ತದೆ.‌

ಇದನ್ನೂ ಓದಿ: Bengaluru Kambala: ಈ ವರ್ಷ ಬೆಂಗಳೂರು ಕಂಬಳ ನಡೆಯೋದೆ ಡೌಟ್!

ಬಿಸಿಲೆಯ ಸೌಂದರ್ಯವೇ ಅಂತಹದ್ದು!

ಇಲ್ಲಿನ ಹಸಿರಿನ ಸಿರಿಗಳ ನಡುವೆ ಪ್ರಕೃತಿಯ ಮಂಜು ಮತ್ತು ಇಬ್ಬನಿ ಮಿಶ್ರಿತ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಮುಗಿಲು ಮುಟ್ಟಿದ ಸಾಲು ಪರ್ವತ ಶ್ರೇಣಿಗಳ ಮಧ್ಯೆ ಹರಿಯುವ ಜಲಧಾರೆ ನೋಡುಗನನ್ನು ಹುಚ್ಚೆಬ್ಬಿಸುತ್ತದೆ. ಕರ್ನಾಟಕ ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದರೂ ಈ ಬಿಸಿಲ್‍ಘಾಟ್ ಪ್ರದೇಶ ಮಾತ್ರ ಪ್ರಕೃತಿಯ ನಿಜವಾದ ಸೌಂದರ್ಯವನ್ನು ಉಣ ಬಡಿಸುವ ಹಸುರಿನ ಬಟ್ಟಲು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಈ ತಾಣವನ್ನು ವೀಕ್ಷಿಸುವ ಸಲುವಾಗಿ ಇಲಾಖೆ ವೀಕ್ಷಣಾಲಯವನ್ನು ನಿರ್ಮಿಸಿದೆ. ಪ್ರತಿನಿತ್ಯ ಇಲ್ಲಿಗೆ ಬರುವ ಸಾವಿರಾರು ಮಂದಿ ಪ್ರವಾಸಿಗರು ತಣ್ಣನೆಯ ಗಾಳಿಗೆ ಮೈಯೊಡ್ಡಿ ಪರಿಸರದೊಂದಿಗೆ ತನ್ಮಯರಾಗುತ್ತಾರೆ. ಎಂತಹ ಸಂಕಷ್ಟಗಳಿದ್ದರೂ ಬಿಸಿಲೆಯ ಸೌಂದರ್ಯ ಅದನ್ನೆಲ್ಲಾ‌ ಮರೆಸುವ ಸಾಮರ್ಥ್ಯ ಹೊಂದಿದೆ.

ಪ್ರಕೃತಿಯ ಆರಾಧಕರು ಭೇಟಿ ನೀಡಿ

ಬಿಸಿಲೆ ಘಾಟ್ ರಮ್ಯರಮಣೀಯ, ಮನಸ್ಸಿಗೆ ಅತ್ಯಂತ ಮುದ ನೀಡುವ ತಾಣವಾಗಿರೋದ್ರಿಂದ ಯುವಕರಿಂದ ಹಿಡಿದು‌ ವೃದ್ಧರ ತನಕ ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಪ್ರಕೃತಿಯ ಆರಾಧಕನಿಗೆ ಬಿಸಿಲೆ ಒಂದು ಅದ್ಭುತ ತಾಣವಾಗಿದೆ. ಸೌಂದರ್ಯವನ್ನು ಹೊದ್ದುಕೊಂಡಿರುವ ಬಿಸಿಲೆ ಘಾಟ್ ಮಳೆ ಬಂದರೆ ಸಾಕು ಮಂಜಿನಿಂದ ಆವರಿಸಿ, ಮಳೆ‌ ದೂರವಾದರೆ ಮತ್ತೆ ತೆರೆದುಕೊಳ್ಳುತ್ತದೆ. ಈ ಅಪೂರ್ವ ಕ್ಷಣಕ್ಕಾಗಿ ನೂರಾರು ಮನಸ್ಸುಗಳು ಹಂಬಲಿಸುತ್ತಿರುತ್ತವೆ. ಮನಸ್ಸಿನ ದುಃಖ- ದುಮ್ಮಾನಗಳನ್ನು ದೂರವಾಗಿಸುವ ಒಂದು ಪ್ರಶಾಂತ ತಾಣವಾಗಿಯೂ ಈ ಬಿಸಿಲೆ ಘಾಟ್ ಹೆಸರುವಾಸಿಯಾಗಿದೆ.

ಒಟ್ಟಿನಲ್ಲಿ ಹಾಸನದಿಂದ ಸುಬ್ರಹ್ಮಣ್ಯವನ್ನು ಅತೀ ವೇಗವಾಗಿ ಸಂಪರ್ಕಿಸುವ ಬಿಸಿಲೆ ಘಾಟ್ ಮಳೆಗಾಲದಲ್ಲಿ ಸೌಂದರ್ಯದ ಗಣಿಯಾಗಿದೆ. ಬಿಸಿಲೆಯ ಸೌಂದರ್ಯವನ್ನು ಆಸ್ವಾದಿಸಲು ಮಳೆಗಾಲದ ಕೊನೆಯ ದಿನಗಳಲ್ಲೂ ಪ್ರಕೃತಿಯ ಅದ್ಭುತವನ್ನು ಕಣ್ತುಂಬಿಕೊಳ್ಳಲು ನೀವೂ ಒಮ್ಮೆ ಬಿಸಿಲೆಗೆ ಭೇಟಿ ನೀಡಿ.