Children’s Library: ಈ ಗ್ರಂಥಾಲಯಕ್ಕೆ ಆಕರ್ಷಣೆ ಆಗುತ್ತಿದ್ದಾರೆ ಮಕ್ಕಳು, ಇದರ ವಿಶೇಷತೆ ಏನು ಅಂತ ನೋಡಿ! | Children’s Activities | ದಕ್ಷಿಣ ಕನ್ನಡ

Children’s Library: ಈ ಗ್ರಂಥಾಲಯಕ್ಕೆ ಆಕರ್ಷಣೆ ಆಗುತ್ತಿದ್ದಾರೆ ಮಕ್ಕಳು, ಇದರ ವಿಶೇಷತೆ ಏನು ಅಂತ ನೋಡಿ! | Children’s Activities | ದಕ್ಷಿಣ ಕನ್ನಡ

Last Updated:

ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಾವಿತ್ರಿ ರಾಮ್ ಕಣೆಮರಡ್ಕ ನೇತೃತ್ವದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ನೂತನ ಚಟುವಟಿಕೆಗಳು, ಪುಸ್ತಕ ದೇಣಿಗೆ, ಪ್ರಶಸ್ತಿ, ಉಮಾ ಮಹದೇವನ್ ಮೆಚ್ಚುಗೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ರಜೆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದ ಮಕ್ಕಳೆಲ್ಲ ಈಗ ಸನಿಹದ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Library) ಪುಸ್ತಕ ಓದಲು ಬರುತ್ತಿದ್ದಾರೆ. ಮೊಬೈಲ್ (Mobile) ಗೇಮ್ ಆಡುತ್ತಿದ್ದ ಮಕ್ಕಳು ಇದೇ ಗ್ರಂಥಾಲಯದಲ್ಲಿ ಚೆನ್ನೆಮಣೆ ಆಟದ ಮೋಡಿಗೆ ಆಕರ್ಷಿತರಾಗುತ್ತಿದ್ದಾರೆ. ಗ್ರಂಥಾಲಯದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಹೇಳಿಕೊಡುವ ಪ್ರತಿಯೊಂದು ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಇದೇ ಮಕ್ಕಳು ಸಭಾ ಕಂಪನಕ್ಕೊಳಗಾಗದೆ ವೇದಿಕೆ ಏರಿ ಎರಡು ಮಾತು ಆಡುವಷ್ಟು ಸಾಮರ್ಥ್ಯಪಡೆದಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು, ಸರ್ಕಾರ ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ದಕ್ಷಿಣ ಕನ್ನಡದ (Dakshina Kannada) ಮಂಡೆಕೋಲು (Mandekolu) ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಗ್ರಂಥಾಲಯದ ನೂತನ ಕಾರ್ಯಚಟುವಟಿಕೆಗಳಿಂದ.

ಪುಸ್ತಕ ಆಯ್ದು ಓದುತ್ತಾರೆ

ಇಲ್ಲಿ ಶಾಲೆ ಬಿಟ್ಟೊಡನೆಯೇ ಮಕ್ಕಳು ಗ್ರಂಥಾಲಯಕ್ಕೆ ಬಂದು ಪುಸ್ತಕ ಆಯ್ದು ಓದುತ್ತಾರೆ. ಒಂದಷ್ಟು ಮಕ್ಕಳು ಚದುರಂಗದಾಟದಲ್ಲಿ ತನ್ಮಯರಾಗುತ್ತಾರೆ. ಇವಿಷ್ಟೇ ಅಲ್ಲದೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಅಭಿನಯ ಗೀತೆ, ರಸಪ್ರಶ್ನೆ, ಕತೆ ಓದಿ ಸಾರಾಂಶ ಹೇಳುವ ಚಟುವಟಿಕೆ, ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಮುಂತಾದ ಕಾರ್ಯಚಟುವಟಿಕೆಗಳಿಗೆ ಇಲ್ಲಿ ಒತ್ತು ನೀಡಲಾಗಿದ್ದು, ಮಾದರಿ ಗ್ರಂಥಾಲಯವಾಗಿ ಮಾರ್ಪಡಿಸುವ ಕೆಲಸ ಇಲ್ಲಿನ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ರಾಮ್ ಕಣೆಮರಡ್ಕ ಮಾಡುತ್ತಿದ್ದಾರೆ. ಇತ್ತೀಚೆಗೆ ಗ್ರಂಥಾಲಯದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಏರ್ಪಡಿಸಿದ್ದ ನೃತ್ಯದ ವೀಡಿಯೊ ತುಣುಕು ವೀಕ್ಷಿಸಿದ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಿ ಸಾವಿತ್ರಿ ಅವರ ಕಾರ್ಯಚಟುವಟಿಕೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸೇವಾ ಪುರಸ್ಕಾರ ಪ್ರಶಸ್ತಿ

ಸಾವಿತ್ರಿ ದೇವಚಳ್ಳದಲ್ಲಿದ್ದಾಗ ರಾಜ್ಯ ಗ್ರಂಥಾಲಯ ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿ ದೊರಕಿತ್ತು. ಅಲ್ಲಿನ ಗ್ರಂಥಾಲಯ ರಾಜ್ಯದಲ್ಲಿ ಮೊದಲ ಡಿಜಿಟಲೀಕೃತ ಗ್ರಂಥಾಲಯವಾಗಿ ಮಾರ್ಪಾಡಾಗಿತ್ತು. ಮಕ್ಕಳನ್ನು, ಸಾರ್ವಜನಿಕರನ್ನು ಗ್ರಂಥಾಲಯದ ಕಡೆ ಆಕರ್ಷಿತರಾಗುವಂತೆ ಮಾಡಲು ಹತ್ತು ಹಲವು ಕಾರ್ಯಕ್ರಮ ಮಂಡೆಕೋಲಿನಲ್ಲಿ ಸಾವಿತ್ರಿ ಆಯೋಜಿಸುತ್ತಿದ್ದಾರೆ. ‘ತಾಯಿಗೊಂದು ಪುಸ್ತಕ’ ಎಂಬ ಪರಿಕಲ್ಪನೆಯ ಯೋಜನೆಯಡಿ ಮಗು ಗ್ರಂಥಾಲಯದಿಂದ ಪುಸ್ತಕ ಪಡೆದುಕೊಂಡು ಮನೆಯಲ್ಲಿ ತಾಯಿಗೆ ಕೊಟ್ಟು ಓದಿಸಿ, ಮಗುವಿಗೆ ಮನನ ಮಾಡಿಸುವ ಕಾರ್ಯ ಮಾಡುತ್ತಿದ್ದಾರೆ.

ಉಚಿತವಾಗಿ ನೋಂದಣಿ

ಸರ್ಕಾರದ ನಿರ್ದೇಶನದಂತೆ ಓದುವ ಬೆಳಕು ಯೋಜನೆಯಡಿ ವ್ಯಾಪ್ತಿಯ ಪ್ರತಿ ಶಾಲೆಯ ಮಕ್ಕಳನ್ನು ಗ್ರಂಥಾಲಯಕ್ಕೆ ಉಚಿತವಾಗಿ ನೋಂದಣಿ ಮಾಡುವ ಪ್ರಕ್ರಿಯೆಯೂ ನಡೆಯುತ್ತಿವೆ. ಊರಿನ ಜ್ಞಾನಿಗಳ ಹಾಗೂ ಹಿರಿಯರ ಸೇವೆ ಪಡೆದುಕೊಂಡು ಗ್ರಂಥಾಲಯದಲ್ಲೇ ಇಂಗ್ಲಿಷ್ ಹಾಗೂ ಹಿಂದಿ ಕಲಿಕಾ ತರಗತಿ ವಾರಕ್ಕೆರಡು ಬಾರಿ ಮಾಡುವ ಯೋಚನೆ ಕಾರ್ಯಗತಗೊಳಿಸುವ ಪ್ರಯತ್ನ ನಡೆಯುತ್ತಿದೆ.

ದಾನಿಗಳಿಂದ ಪುಸ್ತಕ ದೇಣಿಗೆ

ಗ್ರಂಥಾಲಯದಲ್ಲಿ ಆಯೋಜಿಸಲಾಗುತ್ತಿರುವ ವಿನೂತನ ಕಾರ್ಯಕ್ರಮಗಳಿಂದ ಪ್ರೇರಣೆಗೊಂಡು ದಾನಿಗಳು 500 ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ದೇಣಿಗೆ ನೀಡಿದ್ದಾರೆ. ಕೆಲವರು ಚೆಸ್ ಬೋರ್ಡ್ ಗಡಿಯಾರ ಮುಂತಾದ ವಸ್ತುಗಳನ್ನೂ ನೀಡಿದ್ದಾರೆ. ದೂರದ ಪೇರಾಲು, ಮೈತಡ್ಕ ಕಡೆಯಿಂದಲೂ ಗ್ರಂಥಾಲಯಕ್ಕೆ ಬಂದು ಪುಸ್ತಕ ಕೊಂಡು ಓದುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಸಾವಿತ್ರಿ ರಾಮ್.

ಕಟ್ಟಡ ನಿರ್ಮಾಣಕ್ಕೆ ಅನುದಾನ

ಪ್ರಸ್ತುತ ಗ್ರಾಪಂ ಕಟ್ಟಡದಲ್ಲಿ ಈ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭವಾಗಲಿವೆ. ಸ್ವಂತ ಕಟ್ಟಡ ನಿರ್ಮಾಣದ ಬಳಿಕ ಗ್ರಂಥಾಲಯ ಅಭಿವೃದ್ಧಿಗೆ ಹಲವು ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆಯನ್ನೂ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Cycle Balance: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದವರ ಮೋಡಿ, ವರ್ಷಕ್ಕೊಮ್ಮೆ ಬರುವ ಇವರಿಗಾಗಿ ಕಾಯ್ತಾರೆ!

ಗ್ರಂಥಾಲಯಕ್ಕೆ ಪುಸ್ತಕ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪುಸ್ತಕಗಳನ್ನು ಓರಣವಾಗಿ ಕಾಪಿಡಲು ಸರಿಯಾದ ವ್ಯವಸ್ಥೆಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮಗಳಿಂದ ಗ್ರಂಥಾಲಯದ ಕಡೆ ಆಕರ್ಷಿತರಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕ ವ್ಯವಸ್ಥೆಗಳನ್ನೂ ಪೂರೈಸುವಂತಾದರೆ ಮಾದರಿ ಗ್ರಂಥಾಲಯವಾಗಿ ಗುರುತಿಸಿಕೊಂಡಿದ್ದು, 8 ಸಾವಿರ ಪುಸ್ತಕಗಳ ಭಂಡಾರ ಇಲ್ಲಿದೆ.