Last Updated:
Chinnaswamy Stadium: ಈ ಪ್ರಕರಣದ ವಿಚಾರಣೆ ವೇಳೆ, ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ, “ನಮ್ಮ ಪೊಲೀಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೇವಕರಂತೆ ವರ್ತಿಸಿದರು” ಎಂದು ಗಂಭೀರ ಆರೋಪ ಮಾಡಿದೆ.
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಹೊರಗೆ ನಡೆದ ಕಾಲ್ತುಳಿತ ದುರಂತ ಬೆಂಗಳೂರನ್ನು (Bengaluru) ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಸರ್ಕಾರ (Karnataka Government) ಮತ್ತು ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ (IPS Officer) ನಡುವೆ ದೊಡ್ಡ ಕಾನೂನು ಸಮರವೇ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆ ವೇಳೆ, ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ, “ನಮ್ಮ ಪೊಲೀಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೇವಕರಂತೆ ವರ್ತಿಸಿದರು” ಎಂದು ಗಂಭೀರ ಆರೋಪ ಮಾಡಿದೆ.
ಜೂನ್ 4ರ ದುರಂತದ ನಂತರ, ಕರ್ತವ್ಯ ಲೋಪದ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ವಿಕಾಶ್ ಕುಮಾರ್ ವಿಕಾಶ್ ಸೇರಿದಂತೆ ಕೆಲವರನ್ನು ಸರ್ಕಾರ ಅಮಾನತು ಮಾಡಿತ್ತು. ಈ ಅಮಾನತು ಆದೇಶವನ್ನು ವಿಕಾಶ್ ಕುಮಾರ್ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ (CAT) ಪ್ರಶ್ನಿಸಿದ್ದರು. ಅಲ್ಲಿ ಅವರಿಗೆ ಗೆಲುವಾಗಿ, ಅಮಾನತು ಆದೇಶ ರದ್ದಾಗಿತ್ತು.
ಆದರೆ, CAT ಆದೇಶವನ್ನು ಒಪ್ಪದ ರಾಜ್ಯ ಸರ್ಕಾರ, ಈಗ ಕರ್ನಾಟಕ ಹೈಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿದೆ. “ವಿಕಾಶ್ ಕುಮಾರ್ ಅವರ ಅಮಾನತನ್ನು ರದ್ದುಗೊಳಿಸಿದ CAT ಆದೇಶವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ” ಎಂದು ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು, ಅಂದಿನ ಘಟನೆಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು.
ಸರ್ಕಾರದ ವಾದದ ಪ್ರಕಾರ, ಅಂದು ಪೊಲೀಸರು ಸಾರ್ವಜನಿಕರ ಸುರಕ್ಷತೆಗಿಂತ ಹೆಚ್ಚಾಗಿ ಆರ್‌ಸಿಬಿ ತಂಡದ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದ್ದರು. ಅಡ್ವೊಕೇಟ್ ಜನರಲ್ ಶೆಟ್ಟಿ ಅವರು ನ್ಯಾಯಾಲಯದಲ್ಲಿ ಹೇಳಿದ್ದೇನು ಎಂಬುದನ್ನು ಗಮನಿಸಿ:
“ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯದ ಟಾಸ್ ಆಗುವುದಕ್ಕಿಂತ ಮುಂಚೆಯೇ, ಒಂದು ವೇಳೆ ಆರ್‌ಸಿಬಿ ಗೆದ್ದರೆ ವಿಜಯೋತ್ಸವ ಆಚರಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಆರ್‌ಸಿಬಿ ಕಡೆಯಿಂದ ಅರ್ಜಿ ಬಂದಿತ್ತು. ನಮ್ಮ ಪೊಲೀಸ್ ಅಧಿಕಾರಿಗಳು ಆ ಅರ್ಜಿಯನ್ನು ಪರಿಶೀಲಿಸಿ, ಜನದಟ್ಟಣೆಯನ್ನು ಅಂದಾಜಿಸಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಆರ್‌ಸಿಬಿಯ ಸೇವಕರಂತೆ ವರ್ತಿಸಿದರು,” ಎಂದು ಸರ್ಕಾರ ನೇರವಾಗಿ ಆರೋಪಿಸಿದೆ.
ಪಂದ್ಯ ಆರಂಭವಾಗುವ ಮೊದಲೇ ವಿಜಯೋತ್ಸವದ ಬಗ್ಗೆ ಯೋಜನೆ ರೂಪಿಸಿ, ಅದಕ್ಕೆ ಪೊಲೀಸರು ಯಾವುದೇ ಅಡ್ಡಿಪಡಿಸದೆ ಸಹಕರಿಸಿದ್ದು ದೊಡ್ಡ ಕರ್ತವ್ಯ ಲೋಪ. ಈ ಅಸಡ್ಡೆಯೇ ಕಾಲ್ತುಳಿತಕ್ಕೆ ಕಾರಣವಾಯಿತು ಎಂಬುದು ಸರ್ಕಾರದ ವಾದದ ತಿರುಳು. ಅಷ್ಟೇ ಅಲ್ಲ, ವಿಕಾಶ್ ಕುಮಾರ್ ಮತ್ತು ಇತರ ಅಧಿಕಾರಿಗಳ ಅಮಾನತು ಆದೇಶಕ್ಕೆ ಕೇಂದ್ರ ಸರ್ಕಾರವೂ ಅನುಮೋದನೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಬೆಂಗಳೂರು ಹಿಂದೆಂದೂ ಕಂಡರಿಯದ ಈ ದುರಂತದ ಹೊಣೆಯನ್ನು ಯಾರು ಹೊರಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಒಂದು ಕಡೆ ಅಮಾನತುಗೊಂಡಿರುವ ಅಧಿಕಾರಿಯ ವೃತ್ತಿಜೀವನ, ಇನ್ನೊಂದು ಕಡೆ ಸಾರ್ವಜನಿಕರ ಸುರಕ್ಷತೆಯ ದೊಡ್ಡ ಪ್ರಶ್ನೆ.
ಆರ್‌ಸಿಬಿಯಂತಹ ಪ್ರಭಾವಿ ಸಂಸ್ಥೆಯ ಕಾರ್ಯಕ್ರಮಕ್ಕೆ ಪೊಲೀಸರು ಮಣೆ ಹಾಕಿದ್ದು ನಿಜನಾ? ಈ ಪ್ರಕರಣದಲ್ಲಿ ಹೈಕೋರ್ಟ್ ಯಾವ ತೀರ್ಮಾನಕ್ಕೆ ಬರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
Bangalore,Karnataka
July 17, 2025 1:39 PM IST