Last Updated:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಾಕಷ್ಟು ಬೇಡಿಕೆ ಇರುವುದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.
ದಕ್ಷಿಣಕನ್ನಡ: ಕರಾವಳಿ ಭಾಗದ ಕೃಷಿಕರ ಪ್ರಮುಖ ಬೆಳೆ ಅಡಿಕೆಯಾದರೂ, ಅಡಿಕೆ ತೋಟದಲ್ಲಿ ಕೃಷಿಕರ ಪ್ರಮುಖ ಉಪಬೆಳೆಯಾಗಿ ಕೊಕ್ಕೋ(Cocoa Crop) ಸ್ಥಾನ ಪಡೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಇರುವುದರಿಂದ ಕೊಕ್ಕೋ ಬೆಲೆಗೆ ಉತ್ತಮ ಭವಿಷ್ಯವಿದೆ. 1960 ರ ದಶಕದಲ್ಲಿ ದಕ್ಷಿಣಕನ್ನಡ ಜಿಲ್ಲೆಗೆ(Dakshina Kannada District) ಪ್ರವೇಶಿಸಿದೆ. ಇದೀಗ ಕೊಕ್ಕೋ ಬೆಳೆಯುವುದರಲ್ಲಿ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯು ಮುಂಚೂಣಿಯಲ್ಲಿದೆ. ಅದರಲ್ಲೂ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಅಗ್ರಸ್ಥಾನದಲ್ಲಿದೆ. ಸುಳ್ಯ ತಾಲೂಕು 4 ನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕೊಕ್ಕೋ ಬೆಳೆಯ ವಿಸ್ತೀರ್ಣವು ಸುಮಾರು 1 ಸಾವಿರ ಹೆಕ್ಟೇರ್, ಪುತ್ತೂರು ತಾಲೂಕಿನಲ್ಲಿ ಸುಮಾರು 280 ಹೆಕ್ಟೇರ್ ವಿಸ್ತೀರ್ಣದಲ್ಲಿ, ಸುಳ್ಯದಲ್ಲಿ ಸುಮಾರು 165 ಹೆಕ್ಟೇರ್ ಪ್ರದೇಶದಲ್ಲಿ ಕೊಕ್ಕೋ ಬೆಳೆಯುವ ಪ್ರಮಾಣ ದಾಖಲಾಗಿತ್ತು. ಆದರೆ ಅಡಿಕೆ ಧಾರಣೆ ಹೆಚ್ಚಳಗೊಂಡ ಬಳಿಕ ತೋಟಗಳಲ್ಲಿದ್ದ ಕೊಕ್ಕೋ ಗಿಡಗಳನ್ನು ಬೆಳೆಗಾರರು ಕಡಿದಿದ್ದಾರೆ. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣ ದೊಡ್ಡಮಟ್ಟದಲ್ಲಿ ಕುಸಿತಗೊಂಡಿದೆ.
50 ದೇಶಗಳಲ್ಲಿ ಕೊಕ್ಕೋ ಬೆಳೆ
ಜಾಗತಿಕವಾಗಿ ಕೊಕ್ಕೋ ಬೆಳೆಯನ್ನು ಸುಮಾರು 50 ದೇಶಗಳಲ್ಲಿ ಬೆಳೆಯಲಾಗುತ್ತಿದ್ದು ಸುಮಾರು 4.25 ಮಿಲಿಯ ಟನ್ ಕೊಕ್ಕೋ ಉತ್ಪಾದನೆಯಾಗುತ್ತಿದೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 18 ಸಾವಿರ ಬನ್ ಕೊಕ್ಕೋ ಬೆಳೆಯುತ್ತಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಕರಾವಳಿ ಭಾಗಗಳಲ್ಲಿ ಇದರ ವಿಸ್ತೀರ್ಣವು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಕೊಕ್ಕೋ ಆಧಾರಿತ ಚಾಕಲೇಟು, ಆಹಾರ ಉತ್ಪನ್ನಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಆಫ್ರಿಕಾದ ರಾಷ್ಟ್ರಗಳಲ್ಲಿ ಕೊಕ್ಕೋ ಬೆಳೆಯು ಕುಸಿಯುತ್ತಿರುವುದರಿಂದ ಕೊಕ್ಕೋ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳು ಭಾರತದತ್ತ ಮುಖ ಮಾಡಿದ್ದವು.
ಇದನ್ನೂ ಓದಿ: Liquor Ban: ಮದ್ಯ ಪ್ರಿಯರಿಗೆ ಬಿಗ್ ಶಾಕ್- ಈ ಜಿಲ್ಲೆಯಲ್ಲಿ 2 ದಿನ ಮದ್ಯ ಮಾರಾಟ ಬಂದ್
ಕೊಕ್ಕೋಗೆ ಮತ್ತಷ್ಟು ಬೇಡಿಕೆ ಏರಿಕೆಯಾಗುವ ಸಾಧ್ಯತೆ
ಕೊಕ್ಕೋಗೆ ಸಂಬಂಧಿಸಿದ ಅಂತಿಮ ಪ್ರಾಡಕ್ಟ್‌ಗಳನ್ನು ಮಾಡುವ ಪ್ರಮುಖ ಸಂಸ್ಥೆ ಕ್ಯಾಂಸ್ಕೋ. ತಿಂಗಳಿಗೆ 500-600 ಮೆಟ್ರಿಕ್ ಟನ್ ಕೊಕ್ಕೋ ಕ್ಯಾಂಪ್ಲೋಗೆ ಬೇಕು. ಅಮುಲ್ ಸೇರಿದಂತೆ ಕೆಲವು ಕಂಪೆನಿಗಳಿಗೆ ಕಚ್ಚಾ ಕೊಕ್ಕೋಗಳನ್ನು ಕ್ಯಾಂಪ್ಲೋ ಒದಗಿಸುತ್ತಿದೆ. ಬೇಕಾದಷ್ಟು ಪ್ರಮಾಣದ ಕೊಕ್ಕೋ ಲಭಿಸದೇ ಇರುವುದರಿಂದ ಆಂಧ್ರಪ್ರದೇಶ, ಕೇರಳದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಕ್ಕೋ ಬೆಳೆಯುವ ಅವಕಾಶವಿದೆ. ಈ ನಿಟ್ಟಿನಲ್ಲಿ ಕ್ಯಾಂಪ್ಲೋ ಪ್ರೋತ್ಸಾಹ, ಬೆಳೆಯುವ ಪೂರಕ ಮಾಹಿತಿಯನ್ನೂ ನೀಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಾಕಷ್ಟು ಬೇಡಿಕೆ ಇರುವುದರಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.
ಕೊಕ್ಕೋ ಬೆಳೆಗೆ ಬೇಕಿದೆ ಇನ್ನಷ್ಟು ಪ್ರೋತ್ಸಾಹ
ದೇಶದಲ್ಲಿ ಉತ್ಪಾದನೆಯಾಗುವ ಕೊಕ್ಕೋ ಬೀಜದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದರಿಂದ ಆಮದಿನ ಪ್ರಮಾಣ ಅಧಿಕವಾಗುತ್ತಿದೆ. ಕೊಕ್ಕೋದ ವ್ಯವಹಾರದಲ್ಲಿ ಶೇ.70 ರಷ್ಟು ಬಹುರಾಷ್ಟ್ರೀಯ ಕಂಪೆನಿಗಳ ಹತೋಟಿಯಲ್ಲಿರುವುದರಿಂದ ಕಂಪೆನಿಗಳ ನಿರ್ಧಾರದಿಂದ ಇದರ ಧಾರಣೆ ನಿರ್ಧಾರವಾಗುತ್ತದೆ. ಇದರಿಂದಾಗಿ ಕೊಳ್ಳೋ ಧಾರಣೆ ಸ್ಥಿರವಾಗಬೇಕಾದರೆ ಕೊಕ್ಕೋ ಬೆಳೆಗೆ ಇನ್ನಷ್ಟು ಪ್ರೋತ್ಸಾಹ ಬೇಕಿದೆ.
ಕರಾವಳಿ ಭಾಗದಲ್ಲಿ ಗುಣಮಟ್ಟದ ಕೊಕ್ಕೋ ಲಭ್ಯ
ಕೊಕ್ಕೋವನ್ನು ಉಪಬೆಳೆಯಾಗಿ ಬೆಳೆದರೆ ಅಡಿಕೆ ಉತ್ಪಾದನೆ ಇಲ್ಲದಿರುವಂತಹ ಸಮಯದಲ್ಲಿ ಇದು ರೈತರಿಗೆ ಜೀವ ತುಂಬುತ್ತದೆ. ಅಡಿಕೆಗೆ ಬೆಲೆ ಏರಿಕೆಯಾದಾಗ ಈ ಬೆಳೆಯ ಕುರಿತು ಹಲವರು ನಿರಾಸಕ್ತಿ ತೋರಿದ್ದರು. ಅಡಿಕೆ ತೋಟದ ಗೊಬ್ಬರವನ್ನು ಈ ಗಿಡಗಳು ಹೀರುತ್ತವೆ ಎಂಬ ಅಭಿಪ್ರಾಯವೂ ಇದೆ. ಆದರೆ, ಅಡಿಕೆಯು ರೋಗಗಳು ಸೇರಿದಂತೆ ಹಲವು ರೀತಿಯ ಅಪಾಯಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಉಪ ಬೆಳೆಯಾಗಿ ಬೆಳೆಯಲು ಕೊಕ್ಕೋ ಪೂರಕವಾಗಿದೆ. ಕರಾವಳಿ ಭಾಗದಲ್ಲಿ ಗುಣಮಟ್ಟದ ಕೊಕ್ಕೋ ಲಭಿಸುತ್ತದೆ. ಸುಲಭದಲ್ಲಿ ಒದಗಿಸಬಹುದಾದ ಒಣ ಕೊಕ್ಕೋದಿಂದ ಬೆಳೆಗಾರರಿಗೆ ಹೆಚ್ಚು ಲಾಭವಿದೆ. ಆದರೆ ಕೊಕ್ಕೋವನ್ನು ವೈಜ್ಞಾನಿಕ ರೀತಿಯಲ್ಲಿ ಉಪ ಬೆಳೆಯಾಗಿ ಬೆಳೆಯಬೇಕು ಎನ್ನುತ್ತಾರೆ ಕೃಷಿ ತಜ್ಞರ ಅಭಿಪ್ರಾಯವಾಗಿದೆ.
Dakshina Kannada,Karnataka
December 05, 2024 1:02 PM IST