Last Updated:
ಅಜಿಲಮೊಗರು ಜುಮ್ಮಾ ಮಸೀದಿಯ ಉರೂಸ್‌ನಲ್ಲಿ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಹೆಸರಿನಲ್ಲಿ ಮಾಲಿದಾ ಪ್ರಸಾದ ಹಂಚಲಾಗುತ್ತದೆ, ಇದು ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರತೀಕ.
ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಕೋಮು ಗಲಭೆಯ (Riot) ಹಣೆಪಟ್ಟಿಯನ್ನು ಉಳಿದ ಭಾಗದ ಜನರು ನೀಡಿದ್ದಾರೆ. ಆದರೆ ಅವರಿಗೆ ಅಲಿಭೂತ (Muslim Demi God) ಗೊತ್ತಿಲ್ಲ, ಬಬ್ಬರ್ಯ ಗೊತ್ತಿಲ್ಲ ಹಾಗೆಯೇ ಹೀಗೊಂದು ಸಾಮರಸ್ಯದ ಕಥೆಯೂ (Story) ಗೊತ್ತಿಲ್ಲ! ಕೋಮುಸಂಘರ್ಷ ದ.ಕ.ಜಿಲ್ಲೆಗೆ ಕೆಟ್ಟ ಹೆಸರು ನೀಡಿದಷ್ಟು ಇಲ್ಲಿನ ಕೋಮುಸಾಮರಸ್ಯ (Communal Harmony) ಸುದ್ದಿಯಾಗುವುದಿಲ್ಲ, ಸದ್ದು ಮಾಡುವುದಿಲ್ಲ. ಅಜಿಲಮೊಗರು ಉರೂಸ್ ಕೂಡಾ ಇಂತಹದ್ದೇ ಕೋಮು ಸೌಹಾರ್ದತೆಗೆ ಸಾಕ್ಷಿಯೆನಿಸಿದೆ.
ಬಂಟ್ವಾಳದ ಅಜಿಲಮೊಗರು ಜುಮ್ಮಾ ಮಸೀದಿಯಲ್ಲಿ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾರ ಹೆಸರಿನಲ್ಲಿ ಮಾಲಿದಾ ಉರೂಸ್ ನಡೆಯುತ್ತದೆ. ಈ ಉರೂಸ್‌ನಲ್ಲಿ ನೀಡುವ ಮಾಲಿದಾ ಎಂಬ ವಿಶೇಷ ಹರಕೆಯ ಪ್ರಸಾದವೇ ಕೋಮು ಸೌಹಾರ್ದತೆಯ ಕೊಂಡಿಯೆನಿಸಿದೆ.
ಮಾಲಿದಾ ಎಂದರೆ ಅಕ್ಕಿ, ಬೆಲ್ಲ ಮತ್ತು ತುಪ್ಪ ಮಿಶ್ರಿತ ಸಿಹಿಯಾದ ಪಾಕದಿಂದ ದಪ್ಪವಾಗಿ ತಯಾರಿಸಿದ ವಿಶೇಷ ಅಕ್ಕಿರೊಟ್ಟಿ. ಇದನ್ನು ಒನಕೆಯಿಂದ ಕುಟ್ಟಿ ಪುಡಿ ಪ್ರಸಾದವಾಗಿ ಹಂಚಲಾಗುತ್ತದೆ. ಇದು ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾರಿಗೆ ಪ್ರಿಯವಾದ ಸಿಹಿತಿಂಡಿ.
ಮಾಲಿದಾವನ್ನು ಮಸೀದಿಯಿಂದಲೇ ತಯಾರಿಸಿ ಪ್ರಸಾದವಾಗಿ ಹಂಚಲಾಗುತ್ತದೆ. ಎರಡನೇ ಹಂತದಲ್ಲಿ ಊರ, ಪರವೂರಿನ ಮುಸ್ಲಿಮರಲ್ಲದೆ, ಹಿಂದೂಗಳು ತಮ್ಮ ಮನೆಯಲ್ಲಿ ತಯಾರಿಸಿ ತಂದ ಮಾಲಿದಾವನ್ನು ಮಸೀದಿಗೆ ಹರಕೆಯಾಗಿ ಸಲ್ಲಿಸುತ್ತಾರೆ. ಇದನ್ನು ಮಸೀದಿಯಲ್ಲಿಟ್ಟು ಉರೂಸ್‌ಗೆ ಬಂದ ಹಿಂದೂ-ಮುಸ್ಲಿಂ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.
ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅಪಘಾನಿಸ್ತಾನ- ಪರ್ಷಿಯನ್ ಗಡಿ ಪ್ರದೇಶದ ರಾಜ್ಯವೊಂದರ ರಾಜರಾಗಿದ್ದರು. ಲೌಕಿಕ ಬದುಕು ತ್ಯಜಿಸಿದ ಅವರು ವಿಶ್ವ ಸಂಚಾರ ನಡೆಸುತ್ತಾ ಅಜಿಲಮೊಗರುವಿಗೆ 800 ವರ್ಷಗಳ ಹಿಂದೆ ಬಂದಿದ್ದರು. ಬಳಿಕ ಅವರು ಇಲ್ಲಿಯೇ ಮಸೀದಿಯನ್ನು ಸ್ಥಾಪಿಸಿದ್ದರು. ಈ ಮಸೀದಿಯೇ ಕೋಮು ಸೌಹಾರ್ದತೆಯ ಕೊಂಡಿಯಾಗಿದೆ.
ಇದು ಹೆಣ್ಮಕ್ಳಿಗೆ ತವರು ಮನೆಯ ಹಬ್ಬ
ಮಾಲಿದ ಪ್ರಸಾದವನ್ನು ಒಂದು ವರ್ಷಗಳವರೆಗೆ ಶೇಖರಿಸಿಡಲಾಗುತ್ತದೆ. ರೋಗರುಜಿನಗಳು, ಸಂಕಷ್ಟಗಳು ಎದುರಾದರೆ ಪಲ್ಲಿ ಶೇಖ್‌ರನ್ನು ನೆನೆದು ಈ ಪ್ರಸಾದವನ್ನು ಸ್ವೀಕರಿಸಿದರೆ ಸಾಕು ರೋಗ, ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಹಿಂದೂ-ಮುಸ್ಲಿಂ ಭಕ್ತರ ನಂಬಿಕೆ. ಇಲ್ಲಿನ ಉರೂಸ್ ಮುಸ್ಲಿಮರಿಗೆ ಮಾತ್ರವಲ್ಲ ಎಲ್ಲಾ ಧರ್ಮೀಯರಿಗೂ ಹಬ್ಬವಾಗಿದೆ. ಅಜಿಲಮೊಗರುವಿನಿಂದ ಮದುವೆಯಾಗಿ ಪತಿ ಮನೆಗೆ ಹೋಗಿರುವ ಹಿಂದೂ ಮಹಿಳೆಯರು ಉರೂಸ್ ಸಂದರ್ಭ ತವರು ಮನೆಗೆ ಬರುವುದಿದೆ. ಇಂತಹ ವಿಶೇಷಗಳೇ ದ.ಕ.ಜಿಲ್ಲೆಯ ಕೋಮುಸೌಹಾರ್ದತೆಯ ಸೌಂದರ್ಯವೆನಿಸಿದೆ.
Dakshina Kannada,Karnataka
December 09, 2025 11:46 AM IST