Last Updated:
ಅಮೀಶಾ ಆನಂದ್ ದುಬೈ ತಂಡದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಇಂಡೋರ್ ವಿಶ್ವಕಪ್ ಕ್ರಿಕೆಟ್‌ಗೆ ಆಯ್ಕೆಯಾಗಿದ್ದು, ಕೊಲಂಬೋದಲ್ಲಿ ಭಾರತ ಸೇರಿದಂತೆ ಐದು ದೇಶಗಳ ತಂಡಗಳೊಂದಿಗೆ ಆಡಲಿದ್ದಾರೆ.
ಮಂಗಳೂರು: ನೆಟ್ ನಲ್ಲಿ (Net) ಬಿರಿಸಿನ ಪ್ರ್ಯಾಕ್ಟೀಸ್, ಹುರುಪಿನ ಅಂಕಣದಾಚೆ (Ground) ಹೋಗೋ ಹೊಡೆತಗಳು, ವಾಯುವೇಗದ ಎಸೆತ, ಚಿರತೆಯಂತಹ ಚಲನವಲನ! ಇದೆಲ್ಲಾ ನಮ್ಮೂರಿನ ಹುಡುಗಿ ಮಾಡಿದ ಕ್ರಿಕೆಟ್ (Cricket) ಸಾಧನೆಯ ಝಲಕ್. ದುಬೈ (Dubai) ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿರುವ 14 ವರ್ಷದ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬಾಲಕಿಯೊಬ್ಬಳು ಅಂತಾರಾಷ್ಟ್ರೀಯ ಮಹಿಳಾ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಆಯ್ಕೆಯಾಗುವ ಮೂಲಕ ಕರ್ನಾಟಕಕ್ಕೆ ಗರಿಮೆ ತಂದಿದ್ದಾಳೆ.
ಶ್ರೀಲಂಕಾದ ಕೊಲಂಬೊದಲ್ಲಿ ಸೆ.27ರಿಂದ ಅಕ್ಟೋಬರ್ 4 ತನಕ ನಡೆಯಲಿರುವ ಈ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಶ್ರೀಲಂಕಾ, ಭಾರತದ ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಲ್‍ರೌಂಡರ್ ಅಮೀಶಾ ಆನಂದ್ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಳಾಲು ಪಟ್ಟೆ ನಿವಾಸಿ ಆನಂದ್ ಮತ್ತು ವಿನುತಾ ಆನಂದ್ ಅವರ ಪುತ್ರಿ.
ಇಂಡೋರ್ ಕ್ರಿಕೆಟ್ ಕೂಟದ ಅತ್ಯಂತ ಕಿರಿಯ ವಯಸ್ಸಿನ ಈಕೆ ಕರ್ನಾಟಕ ಮೂಲದ ಆಟಗಾರ್ತಿಯಾಗಿದ್ದಾಳೆ. ಈಗಾಗಲೇ ಈಕೆಗೆ ದುಬೈ ಕ್ರಿಕೆಟ್ ಬೋರ್ಡಿನ ಸೀಸನ್ ಬಾಲ್ ಅಂಡರ್ 15, 16 ಮತ್ತು 19 ವಿಭಾಗದ ಪಂದ್ಯಕೂಟದಲ್ಲಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಅಮೇರಿಕಾ ಹಾಗೂ ಒಮನ್ ದೇಶದ ತಂಡಗಳ ವಿರುದ್ಧ ಆಡಿದ ಅನುಭವ ವಿದೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಜೋರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆದ ರೂಟ್‍ಕಪ್ ಪಂದ್ಯಾಟದಲ್ಲಿ ಅಂಡರ್ 16ರ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ದುಬೈ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ದುಬೈ ತಂಡ ರೂಟ್‍ಕಪ್‍ನ್ನು ಗೆದ್ದುಕೊಂಡಿತ್ತು.
ಹಳ್ಳಿಯಿಂದ ವಿದೇಶದ ವೇದಿಕೆಗೆ ಸಾಧನೆಯ ಛಲಾಂಗ್.
ಕ್ರಿಕೆಟಿನೊಂದಿಗೆ ವಾಲಿಬಾಲ್, ಅಥ್ಲೆಟಿಕ್, ಈಜುಗಾರಿಕೆ, ಹಾಡುಗಾರಿಕೆ, ನೃತ್ಯ ಕ್ಷೇತ್ರದಲ್ಲೂ ಮುಂಚೂಣಿ ಸಾಧನೆಯ ಹೆಜ್ಜೆ ಇಟ್ಟಿರುವ ಅಮೀಶಾ ಅವರ ತುಳುನಾಡಿನ ಪ್ರತಿಭೆ. ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ವೇಗದ ಬೌಲರ್ ಆಗಿರುವ ಅಮೀಶಾ ಎಮಿರೇಟ್ಸ್ ಕ್ರಿಕೆಟ್ ಬೋರ್ಡಿನ ಅಧಿಕಾರಿ ಛಾಯಾ ಮುದ್ಗಲ್ ಅವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಹೆಜ್ಜೆ ಇಡುತ್ತಿರುವ ಗ್ರಾಮೀಣ ಬದುಕಿನ ಹಿನ್ನಲೆಯ ಅಮೀಶಾ ಆನಂದ್ ಯಶಸ್ಸು ಸಾಧಿಸಲಿ ಎಂಬ ಹಾರೈಕೆ ಬಜತ್ತೂರಿನ ಜನತೆಯದ್ದಾಗಿದೆ. ಈಗಾಗಲೇ ಕೊಲೊಂಬೋ ತಲುಪಿರುವ ತಂಡಕ್ಕೆ ಕೊಲೊಂಬೋದಲ್ಲಿ ಸ್ವಾಗತವನ್ನೂ ಕೋರಲಾಗಿದೆ.
Dakshina Kannada,Karnataka
September 27, 2025 11:39 AM IST