Last Updated:
ಪುತ್ತೂರಿನ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ಹದಿನೈದು ವರ್ಷಗಳಿಂದ ನಡೆಯುತ್ತಿರುವ ಅಮರ್ ಅಕ್ಬರ್ ಅಂತೋಣಿ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿದ್ದು, ಸೌಹಾರ್ದತೆಗೂ ಮಾದರಿ.
ದಕ್ಷಿಣ ಕನ್ನಡ: ಕ್ರಿಕೆಟ್ ಇಂದು ವಿಶ್ವದೆಲ್ಲೆಡೆ (World) ಪ್ರಖ್ಯಾತಿ ಹೊಂದಿದ್ದು, ಎಲ್ಲಾ ವಯೋಮಾನದವರನ್ನೂ ಇದು ಆಕರ್ಷಿಸುತ್ತಿದೆ. ಎಲ್ಲೆಡೆ ಓವರ್ ಆರ್ಮ್ ಕ್ರಿಕೆಟ್ (Cricket) ಚಾಲ್ತಿಯಲ್ಲಿದ್ದರೆ, ಕರಾವಳಿ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆ ಮಾತ್ರ ಅಂಡರ್ ಆರ್ಮ್ ಕ್ರಿಕೆಟ್ ಗೆ ಹೆಚ್ಚು ಮಾನ್ಯತೆ ನೀಡುತ್ತದೆ. ಪುತ್ತೂರಿನಲ್ಲಿ ಇಂತಹುದೇ ಒಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಹಳ್ಳಿ ಹುಡುಗರು, ಪೇಟೆ ಕಪ್ (Cup) ಎನ್ನುವ ಹೆಸರಿನಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ಭಾಗಿಯಾಗಲು ಹೊರದೇಶದಲ್ಲಿದ್ದವರೂ (Abroad) ಪುತ್ತೂರಿಗೆ ಬರೋದು ಈ ಪಂದ್ಯಾಟದ ವಿಶೇಷತೆಯಾಗಿದೆ.
ದಕ್ಷಿಣಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಆದರೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವ ಅಂಡರ್ ಆರ್ಮ್ ಪಂದ್ಯಾಟದಲ್ಲಿ ಮಾತ್ರ ಈ ಕೋಮುಘರ್ಷಣೆಯ ಮಾತೇ ಸುಳಿದಾಡೋದಿಲ್ಲ. ಹೌದು, ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಎಲ್ಲಾ ಧರ್ಮದ ಜನರೂ ಸೌಹಾರ್ದತೆಯಿಂದ ಆಡುವ ಒಂದೇ ಪಂದ್ಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಗಳಾಗಿವೆ.
ಇದೇ ರೀತಿಯ ಕ್ರಿಕೆಟ್ ಪುತ್ತೂರಿನ ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ಕಳೆದ ಹದಿನೈದು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅಮರ್ ಅಕ್ಬರ್ ಅಂತೋಣಿ ಟ್ರೋಫಿ ಹೆಸರಿನಲ್ಲಿ ನಡೆಯುತ್ತಿರುವ ಈ ಪಂದ್ಯಾಟದ ವಿಶೇಷವೆಂದರೆ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಇಡೀ ದಕ್ಷಿಣಕನ್ನಡದ ಗ್ರಾಮ ಗ್ರಾಮಗಳ ಕ್ರಿಕೆಟ್ ತಂಡ ಆಗಮಿಸುತ್ತದೆ. ಈ ಬಾರಿ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಒಟ್ಟು 142 ತಂಡಗಳು ಹೆಸರು ನೊಂದಾಯಿಸಿದ್ದರೂ, 48 ತಂಡಗಳನ್ನು ಆಯ್ದುಕೊಳ್ಳಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ಭಾಗಿಯಾಗುವ ತಂಡದಲ್ಲಿ ತಂಡ ನೀಡುವ ಹೆಸರಿನ ಗ್ರಾಮದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದೆ. ಗ್ರಾಮ ಮಟ್ಟದಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡೋದು ಈ ಪಂದ್ಯಾಟ ಆಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೊನಲು-ಬೆಳಕಿನ ಆಟಕ್ಕೆ ಸಹಕಾರ ಬೇಕೆಂದು ಮನವಿ
ಕಳೆದ ಹದಿನೈದು ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ಈ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯದಲ್ಲಿ ಸರಕಾರಿ ನೌಕರರು, ವಕೀಲರು, ವೈದ್ಯರು ಸೇರಿದಂತೆ ಎಲ್ಲಾ ಇಲಾಖೆಗಳ ತಂಡಗಳಿಗೂ ವಿಶೇಷ ಪಂದ್ಯಾಟವನ್ನೂ ನಡೆಸಲಾಗುತ್ತಿದೆ. ಹೊನಲು ಬೆಳಕಿನಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟ ಆಯೋಜಕರಿಗೆ ಸಮಾಜದ ಸಹಕಾರದ ಅನಿವಾರ್ಯತೆಯಿದೆ. ಸಮಾಜ ಸಹಕರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂದ್ಯಾಟ ಆಯೋಜನೆಯನ್ನು ಸ್ಥಗಿತಗೊಳಿಸಲೂ ನಿರ್ಧರಿಸಿರುವುದು ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೂ ಕಾರಣವಾಗಿದೆ.
Dakshina Kannada,Karnataka