Cricket Awards: ನಾಯಕತ್ವ ಕಳೆದುಕೊಂಡರೂ ರೋಹಿತ್ ಶರ್ಮಾಗೆ ವಿಶೇಷ ಪ್ರಶಸ್ತಿ; ಸಂಜು-ವರುಣ್-ಅಯ್ಯರ್​ಗೂ ಸಿಕ್ತು ಅವಾರ್ಡ್ಸ್ / Complete details of the winners of the 27th Annual CEAT Cricket Rating Awards | ಕ್ರೀಡೆ

Cricket Awards: ನಾಯಕತ್ವ ಕಳೆದುಕೊಂಡರೂ ರೋಹಿತ್ ಶರ್ಮಾಗೆ ವಿಶೇಷ ಪ್ರಶಸ್ತಿ; ಸಂಜು-ವರುಣ್-ಅಯ್ಯರ್​ಗೂ ಸಿಕ್ತು ಅವಾರ್ಡ್ಸ್ / Complete details of the winners of the 27th Annual CEAT Cricket Rating Awards | ಕ್ರೀಡೆ

Last Updated:

ಮುಂಬೈನಲ್ಲಿ ನಡೆದ 27ನೇ ವಾರ್ಷಿಕ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

News18News18
News18

ಭಾರತದ (India) ದಿಗ್ಗಜ ಕ್ರಿಕೆಟಿಗರ (Cricketers) ಸಾಲಿನಲ್ಲಿ ರೋಹಿತ್ ಶರ್ಮಾ (Rohit Sharma) ಯಾವಾಗಲೂ ಮುಂದೆ ನಿಲ್ಲುತ್ತಾರೆ. ಎರಡು ವರ್ಷಗಳಲ್ಲಿ ಟೀಮ್ ಇಂಡಿಯಾ (Team India)ವನ್ನು ಎರಡು ಐಸಿಸಿ (ICC) ಟ್ರೋಫಿಗಳಿಗೆ ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು 2024 ರ ಟಿ20 ವಿಶ್ವಕಪ್ (T20 World Cup) ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ (Champions Trophy)ಯನ್ನು ಗೆದ್ದುಕೊಂಡಿತು. ಆದರೆ, ಇತ್ತೀಚೆಗೆ ರೋಹಿತ್ ಅವರನ್ನು ಆಸ್ಟ್ರೇಲಿಯಾ ಪ್ರವಾಸ (Australia tour)ಕ್ಕೂ ಮುನ್ನ ನಾಯಕತ್ವದಿಂದ ಕೆಳಗಿಳಿಸಿ ಶುಭಮನ್ ಗಿಲ್ (Shubman Gill) ಅವರಿಗೆ ಏಕದಿನ ತಂಡದ ಜವಾಬ್ದಾರಿಯನ್ನೂ ನೀಡಲಾಯಿತು. ಇದರ ನಡುವೆ ಕೂಡ ರೋಹಿತ್ ಶರ್ಮಾ ವಿಶೇಷ ಪ್ರಶಸ್ತಿ(Award)ಯನ್ನು ಪಡೆದಿದ್ದಾರೆ. ಈ ಮೂಲಕ ಅಭಿಮಾನಿಗಳ ಸಂತಸಕ್ಕೆ ರೋಹಿತ್ ಶರ್ಮಾ ಕಾರಣವಾಗಿದ್ದಾರೆ.

ಮಂಗಳವಾರ ಅಕ್ಟೋಂಬರ್ 7 ರಂದು 27ನೇ ವಾರ್ಷಿಕ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿಗಳ ಸಮಾರಂಭವನ್ನು ಮುಂಬೈನಲ್ಲಿ ನಡೆಸಲಾಯಿತು. ಪ್ರಪಂಚದಾದ್ಯಂತದ ಕ್ರಿಕೆಟಿಗರು ಮತ್ತು ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ಸಮಾರಂಭದ ಕೇಂದ್ರ ಬಿಂದುವೆಂದರೆ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನತ್ತ ಭಾರತ ತಂಡವನ್ನು ಮುನ್ನಡೆಸಿದ್ದಕ್ಕಾಗಿ 38 ವರ್ಷದ ರೋಹಿತ್ ಶರ್ಮಾ ಅವರನ್ನು ವಿಶೇಷ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.

ಜೂನ್ ತಿಂಗಳ 2024 ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಈ ಐತಿಹಾಸಿ ಗೆಲುವಿನ ನಂತರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತ ಎರಡನೇ ಐಸಿಸಿ ಟ್ರೋಫಿ ಗೆಲುವು ಇದಾಗಿತ್ತು. ರೋಹಿತ್ ಶರ್ಮಾ ಅವರಿಗೆ ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸಂಜು-ವರುಣ್-ಅಯ್ಯರ್​ಗೆ ಅವಾರ್ಡ್ಸ್

ಏಷ್ಯಾ ಕಪ್ ಟೂರ್ನಿಯಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರನ್ನು ಹಿಂದಿಕ್ಕಿ ಸಂಜು ಸ್ಯಾಮ್ಸನ್ ವರ್ಷದ ಪುರುಷರ ಟಿ20 ಬ್ಯಾಟರ್ ಪ್ರಶಸ್ತಿಯನ್ನು ಗೆದ್ದರು. ವರುಣ್ ಚಕ್ರವರ್ತಿ ವರ್ಷದ ಪುರುಷರ ಟಿ20ಐ ಬೌಲರ್ ಪ್ರಶಸ್ತಿಗೆ ಭಾಜನರಾದರು. ಅಂಗ್‌ಕ್ರಿಶ್ ರಘುವಂಶಿ ವರ್ಷದ ಉದಯೋನ್ಮುಖ ಆಟಗಾರ ಮತ್ತು ಹರ್ಷ್ ದುಬೆ ವರ್ಷದ ದೇಶೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದರು. ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಶ್ರೇಯಸ್ ಅಯ್ಯರ್ ಜಿಯೋಸ್ಟಾರ್ ಪ್ರಶಸ್ತಿಯನ್ನು ಪಡೆದರು.

ಟೆಸ್ಟ್ ಕ್ರಿಕೆಟ್​ನಲ್ಲಿ ವಿದೇಶಿಯರ ಸಾಧನೆ

ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ವರ್ಷದ ಪುರುಷರ ಏಕದಿನ ಬ್ಯಾಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಶ್ರೀಲಂಕಾದ ಪ್ರಭಾತ್ ಜಯಸೂರ್ಯ ವರ್ಷದ ಪುರುಷರ ಟೆಸ್ಟ್ ಬೌಲರ್ ಪ್ರಶಸ್ತಿಯನ್ನು ಹಾಗು ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ವರ್ಷದ ಪುರುಷರ ಟೆಸ್ಟ್ ಬ್ಯಾಟರ್ ಎನಿಸಿಕೊಂಡು ಪ್ರಶಸ್ತಿ ಪಡೆದರು.

ವೆಸ್ಟ್ ಇಂಡೀಸ್ ತಂಡದ ಮಾಜಿ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತ ವನಿತೆಯರ ಪ್ರಾಬಲ್ಯ

ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಟೀಮ್ ಇಂಡಿಯಾ ವನಿತೆಯರು ಮೇಲುಗೈ ಸಾಧಿಸಿದ್ದಾರೆ. ಮಹಿಳಾ ವಿಭಾಗದ ಎಲ್ಲಾ ಪ್ರಮುಖ ಪ್ರಶಸ್ತಿಗಳು ಭಾರತ ತಂಡ ಆಟಗಾರ್ತಿಯರು ಗೆದ್ದಿದ್ದಾರೆ. ಸ್ಮೃತಿ ಮಂಧಾನಾ ವರ್ಷದ ಮಹಿಳಾ ಬ್ಯಾಟರ್ ಪ್ರಶಸ್ತಿಯನ್ನು ಗೆದ್ದರೆ, ದೀಪ್ತಿ ಶರ್ಮಾ ವರ್ಷದ ಮಹಿಳಾ ಬೌಲರ್ ಪ್ರಶಸ್ತಿಯನ್ನು ಪಡೆದರು. ಆದಾಗ್ಯೂ, ಇಬ್ಬರೂ ಆಟಗಾರ್ತಿಯರು ಸಮಾರಂಭದಲ್ಲಿ ಹಾಜರಿರಲಿಲ್ಲ. ಭಾರತ ವನಿತೆಯರ ತಂಡವು ಪ್ರಸ್ತುತ ದೇಶದಲ್ಲಿ ಮಹಿಳಾ ವಿಶ್ವಕಪ್ 2025 ಟೂರ್ನಿಯಲ್ಲಿ ನಿರತವಾಗಿದೆ. ಆದ್ದರಿಂದ, ಮಂಧಾನಾ ಮತ್ತು ದೀಪ್ತಿ ಸಮಾರಂಭದಿಂದ ದೂರ ಉಳಿಯಬೇಕಾಯಿತು.

ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

  • ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶೇಷ ಸ್ಮರಣಿಕೆ: ರೋಹಿತ್ ಶರ್ಮಾ
  • ಜೀವಮಾನ ಸಾಧನೆ ಪ್ರಶಸ್ತಿ: ಬ್ರಿಯಾನ್ ಲಾರಾ
  • ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ: ಜೋ ರೂಟ್
  • ಪುರುಷರ ಟಿ20 ಬ್ಯಾಟರ್: ಸಂಜು ಸ್ಯಾಮ್ಸನ್
  • ಪುರುಷರ ಟಿ20ಐ ಬೌಲರ್: ವರುಣ್ ಚಕ್ರವರ್ತಿ
  • ಸಿಇಎಟಿ ಜಿಯೋಸ್ಟಾರ್ ಪ್ರಶಸ್ತಿ: ಶ್ರೇಯಸ್ ಅಯ್ಯರ್
  • ಪುರುಷರ ಏಕದಿನ ಬ್ಯಾಟರ್: ಕೇನ್ ವಿಲಿಯಮ್ಸನ್
  • ಪುರುಷರ ಏಕದಿನ ಬೌಲರ್: ಮ್ಯಾಟ್ ಹೆನ್ರಿ
  • ಪುರುಷರ ಟೆಸ್ಟ್ ಬೌಲರ್: ಪ್ರಭಾತ್ ಜಯಸೂರ್ಯ
  • ಪುರುಷರ ಟೆಸ್ಟ್ ಬ್ಯಾಟರ್: ಹ್ಯಾರಿ ಬ್ರೂಕ್
  • ಸಿಇಎಟಿ ಜೀವಮಾನ ಸಾಧನೆ ಪ್ರಶಸ್ತಿ: ಬಿಎಸ್ ಚಂದ್ರಶೇಖರ್
  • ಮಹಿಳಾ ಕ್ರಿಕೆಟಿಗ: ಸ್ಮೃತಿ ಮಂಧಾನ
  • ಮಹಿಳಾ ಬೌಲರ್: ದೀಪ್ತಿ ಶರ್ಮಾ
  • ಉದಯೋನ್ಮುಖ ಆಟಗಾರ: ಅಂಗ್‌ಕ್ರಿಶ್ ರಘುವಂಶಿ
  • ಉತ್ತಮ ನಾಯಕತ್ವಕ್ಕಾಗಿ ಪ್ರಶಸ್ತಿ: ಟೆಂಬಾ ಬವುಮಾ
  • ಸಿಇಎಟಿ ದೇಶೀಯ ಕ್ರಿಕೆಟಿಗ: ಹರ್ಷ್ ದುಬೆ