Last Updated:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತ್ತೊಂದೆಡೆ ಚಂಪಾಷಷ್ಠಿಯ ಪ್ರಮುಖ ದಿನಗಳಲ್ಲಿ ಪ್ರತಿನಿತ್ಯ ನಡೆಯುವ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ದಕ್ಷಿಣ ಕನ್ನಡ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 12ರವರೆಗೆ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದೆ (Kukke Subrahmanya). ಹೀಗಾಗಿ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ನವೆಂಬರ್ 25ರಿಂದ ಡಿಸೆಂಬರ್ 12ರವರೆಗೆ ಇರುವುದಿಲ್ಲ (Champa Shasti Festival). ಡಿಸೆಂಬರ್ 13ರಿಂದ ಸರ್ಪ ಸಂಸ್ಕಾರ ಸೇವೆಯು ಎಂದಿನಂತೆ ನಡೆಯಲಿದೆ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ವೇಳೆ ಕೆಲವು ಸೇವೆಗಳು ಎಂದಿನಂತೆ ಇರಲಿದ್ದು ಮತ್ತೆ ಕೆಲವು ಸೇವೆಗಳು ಲಕ್ಷ ದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಇರುವುದಿಲ್ಲ (Dakshina Kannada News).
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾಷಷ್ಠಿ ಜಾತ್ರೆಯ ಪ್ರಯುಕ್ತ ನವೆಂಬರ್ 30ರಂದು ಲಕ್ಷ ದೀಪೋತ್ಸವ, ಡಿಸೆಂಬರ್ 5ರ ಚೌತಿ, ಡಿಸೆಂಬರ್ 6ರ ಪಂಚಮಿಯಂದು ಸಂಜೆ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಡಿಸೆಂಬರ್ 7ರ ಚಂಪಾಷಷ್ಠಿಯಂದು ಮಧ್ಯಾಹ್ನದ ಪ್ರಾರ್ಥನೆ ಸೇವೆ ಇರುವುದಿಲ್ಲ.
ಚಂಪಾಷಷ್ಠಿಯ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆಯ ಸೇವೆಗಳು ಇರುವುದಿಲ್ಲ. ಇನ್ನು, ಲಕ್ಷ ದೀಪೋತ್ಸವ, ಚೌತಿ, ಪಂಚಮಿ, ಚಂಪಾಷಷ್ಠಿ ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನವಾದ ಡಿಸೆಂಬರ್ 12ರಂದು ಪಂಚಾಮೃತ ಅಭಿಷೇಕ ಸೇವೆ ನಡೆಯುವುದಿಲ್ಲ. ನವೆಂಬರ್ 27ರಿಂದ ಡಿಸೆಂಬರ್ 12ರವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.
ನ.27ರಿಂದ ಡಿ.12ರವರೆಗೆ ಚಂಪಾಷಷ್ಠಿ ಜಾತ್ರೆ
ಚಂಪಾಷಷ್ಠಿ ಜಾತ್ರೋತ್ಸವವು ನವೆಂಬರ್ 27ರಿಂದ ಡಿಸೆಂಬರ್ 12ರವರೆಗೆ ನಡೆಯಲಿದ್ದು, ಈ ವೇಳೆ ಪ್ರಧಾನ ದಿನಗಳಾದ ಲಕ್ಷ ದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷ ಸೇವೆ, ಕಾರ್ತಿಕ ಪೂಜೆ, ಮಹಾಪೂಜೆ, ತುಲಾಭಾರ ಸೇವೆ, ನಾಗಪ್ರತಿಷ್ಠೆ ಮೊದಲಾದ ಸೇವೆಗಳು ಎಂದಿನಂತೆ ನೆರವೇರಲಿದೆ. ಸರ್ಪ ಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿಸೆಂಬರ್ 12ರವರೆಗೆ ನಡೆಯುವುದಿಲ್ಲ.
ಇದನ್ನೂ ಓದಿ: Mysuru: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೈಸೂರಿನ ಜೋಡಿ-ಸರಳ ಸಮಾರಂಭಕ್ಕೆ ಎಲ್ಲರ ಮೆಚ್ಚುಗೆ
ನ.26ರಂದು ಮಧ್ಯಾಹ್ನ 2ರವರೆಗೆ ದೇವರ ದರ್ಶನ ಸ್ಥಗಿತ
ನವೆಂಬರ್ 26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರಣ ಭಕ್ತಾದಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. ನವೆಂಬರ್ 26ರ ಮಧ್ಯಾಹ್ನ 2 ಗಂಟೆಯ ನಂತರ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ.
ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ಸೇವೆಗಳು ಇರುವುದಿಲ್ಲ. ಹೀಗಾಗಿ ನವೆಂಬರ್ 26ರಿಂದ ಡಿಸೆಂಬರ್ 12ರವರೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕುಕ್ಕೆಗೆ ಹೋಗುವವರಿದ್ದರೆ ಮೊದಲೇ ಖಚಿತಪಡಿಸಿಕೊಂಡು ಹೋಗುವುದು ಒಳ್ಳೆಯದು.
Dakshina Kannada,Karnataka
November 25, 2024 4:44 PM IST