Last Updated:
ಜಾನಕಿಯವರ ಹಳೆಯ ಮನೆಯ ಚಾವಣಿ ಅಲ್ಲಲ್ಲಿ ಕುಸಿದು ಅದರೊಳಗೆ ಪ್ರವೇಶಿಸುವುದೂ ಅಪಾಯಕಾರಿಯಾಗಿತ್ತು. ಜತೆಗೆ, ಮನೆಯ ವಿದ್ಯುತ್ ಸ್ವಿಚ್, ವಯರ್ಗಳೆಲ್ಲಾ ಕಿತ್ತು ಹೋಗಿ ಕರೆಂಟಿಲ್ಲದೆ ಅಂಧಕಾರದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು.
ದಕ್ಷಿಣ ಕನ್ನಡ: ಬಿಸಿಲ ಬೇಗೆಯಿಂದ ರಕ್ಷಣೆ ನೀಡಲು ಕೊಡೆಯ ಬಿಡಿಸಿ ಅದರಡಿ ಮಲಗಿಸಿದ್ದ ಕಂದಮ್ಮ(Baby), ಬಣ್ಣ ಕಳೆದುಕೊಂಡು ಬಿರುಕು ಬಿಟ್ಟ ಗೋಡೆಗಳು, ಕುಸಿದ ಚಾವಣಿ, ವಿದ್ಯುತ್ ಇಲ್ಲದೆ ಚಿಮಿಣಿ ದೀಪದಲ್ಲಿ ರಾತ್ರಿ ಕಳೆಯುವ ದುಸ್ಥಿತಿ, ಒಪ್ಪೊತ್ತಿನ ಊಟಕ್ಕೆ ಕಣ್ಣೀರಾಗುವ ಮನೆ ಮಂದಿ(Family Members). ಇದು ಬಂಟ್ವಾಳ ತಾಲೂಕಿನ(Bantwal Taluk) ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ವತ್ತೂರು ಗ್ರಾಮದ ಎಡ್ತೂರು ಕಲಾಬಾಗಿಲು ನಿವಾಸಿ ಪರಿಶಿಷ್ಟ ಜಾತಿಯ ದಿವಂಗತ ವಿಶ್ವನಾಥ ಅವರ ಪತ್ನಿಯ ವಾಸದ ಮನೆಯ ಮನ ಮಿಡಿಯುವ ದೃಶ್ಯವಾಗಿತ್ತು.
ಎಡ್ತೂರು ಕಲಾಬಾಗಿಲು ನಿವಾಸಿ ಪರಿಶಿಷ್ಟ ಜಾತಿಯ ವಿಶ್ವನಾಥ ಇರ್ವತ್ತೂರು ಗ್ರಾಮ ಪಂಚಾಯತ್ನಲ್ಲಿ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ನಿಧನ ಹೊಂದಿದ್ದರು. ದಿವಂಗತ ವಿಶ್ವನಾಥ ಹರಿಜನ ಅವರ ಪತ್ನಿ ಜಾನಕಿಯವರು ಎರಡು ಮಕ್ಕಳ ತಾಯಿ. ಒಂದು ಗಂಡು, ಒಂದು ಹೆಣ್ಣು. ಇಬ್ಬರಿಗೂ ಮದುವೆ ಆಗಿದೆ. ಜಾನಕಿ ಮತ್ತು ಮಗ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಮಗನ ಅನಾರೋಗ್ಯಕರ ಹವ್ಯಾಸಗಳಿಂದ ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಜಾನಕಿಯ ಮೇಲಿದೆ. ಅವರ ವಾಸದ ಮನೆ ಸೂಕ್ತ ನಿರ್ವಹಣೆ ಇಲ್ಲದೆ ಇನ್ನೇನು ಬೀಳುವ ಸ್ಥಿತಿಯಲ್ಲಿದ್ದು, ಮಕ್ಕಳ ಜೀವನವು ತುಂಬಾ ಸಂಕಷ್ಟಕ್ಕೊಳಗಾಗುವಂತಾಗಿತ್ತು.
ಇದನ್ನೂ ಓದಿ: Job Interview: ಚಿಕ್ಕಮಗಳೂರಿನಲ್ಲಿ ನಾಳೆ ಉದ್ಯೋಗ ಸಂದರ್ಶನ- ಆಸಕ್ತರು ಪಾಲ್ಗೊಳ್ಳಿ
ಜಾನಕಿಯವರ ಹಳೆಯ ಮನೆಯ ಚಾವಣಿ ಅಲ್ಲಲ್ಲಿ ಕುಸಿದು ಅದರೊಳಗೆ ಪ್ರವೇಶಿಸುವುದೂ ಅಪಾಯಕಾರಿಯಾಗಿತ್ತು. ಜತೆಗೆ, ಮನೆಯ ವಿದ್ಯುತ್ ಸ್ವಿಚ್, ವಯರ್ಗಳೆಲ್ಲಾ ಕಿತ್ತು ಹೋಗಿ ಕರೆಂಟಿಲ್ಲದೆ ಅಂಧಕಾರದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಗನ ಪುಟ್ಟ ಮಗುವನ್ನು ಬಿಸಿಲಿನಿಂದ ರಕ್ಷಿಸಲು ಜಾನಕಿಯವರು ಕೊಡೆಯನ್ನು ಬಿಡಿಸಿ ಅದರಡಿಯಲ್ಲಿ ಮಲಗಿಸಿದ್ದರು. ಇದೇ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ, ಬಿಜೆಪಿ ನಾಯಕ ಮೂರ್ಜೆಯ ತುಂಗಪ್ಪ ಬಂಗೇರ ಅವರ ಕಣ್ಣಿಗೆ ಬಿತ್ತು. ಇದನ್ನು ಕಂಡ ತುಂಗಪ್ಪ ಅವರು ಜಾನಕಿಯವರ ಮನೆಯ ದುಸ್ಥಿತಿಗೆ ಕಣ್ಣೀರಾದರು. ಜಾನಕಿಯವರ ಸಂಕಷ್ಟಕ್ಕೆ ಸ್ಪಂದಿಸಿದ ಅವರು ತಡ ಮಾಡದೆ ಅವರಿಗೆ ಹೊಸ ಬದುಕನ್ನು ನೀಡಲು ನಿರ್ಧರಿಸಿದರು.
ತುಂಗಪ್ಪ ಬಂಗೇರ ಅವರು ಜಾನಕಿಯವರ ಮನೆಯ ಅಂಗಳದಲ್ಲೇ ನಿಂತು ಮನೆಯ ಚಾವಣಿಯ ದುರಸ್ತಿ, ವಿದ್ಯುತ್ ಸಂಪರ್ಕದ ದುರಸ್ತಿ ಕಾರ್ಯಗಳನ್ನು ನಡೆಸಿದರು. ಅವರ ಉಸ್ತುವಾರಿಯಲ್ಲೇ ಜಾನಕಿಯವರ ಮನೆ ನಿಶ್ಚಿಂತೆಯಿಂದ ವಾಸ ಮಾಡಲು ಯೋಗ್ಯವನ್ನಾಗಿ ಮಾಡಿಕೊಟ್ಟರು. ಇದಕ್ಕೆ ತಗುಲಿದ ಸಂಪೂರ್ಣ ಖರ್ಚು -ವೆಚ್ಚಗಳನ್ನು ತುಂಗಪ್ಪ ಅವರು ತನ್ನ ಕೈಯಿಂದಲೇ ಭರಿಸಿದರು. ಸುಮಾರು ಒಂದು ಲಕ್ಷ ರೂಪಾಯಿ ಹಣವನ್ನು ಮೇಲ್ಛಾವಣಿ ಮತ್ತು ಇತರೆ ಕೆಲಸಗಳಿಗೆ ಬಳಸಲಾಗಿದೆ. ಜಾನಕಿಯವರ ಮಗನಿಗೆ ದುಶ್ಚಟಗಳನ್ನು ಬಿಟ್ಟು ಉತ್ತಮ ಬದುಕು ನಡೆಸುವ ಪಾಠವನ್ನೂ ಹೇಳಿದ್ದಾರೆ. ಬಡವರ ಸಂಕಷ್ಟಕ್ಕೆ ಸ್ಪಂದಿಸುವ ತುಂಗಪ್ಪ ಬಂಗೇರ ಅವರ ಈ ಕಾರ್ಯ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ.
Dakshina Kannada,Karnataka
January 21, 2025 11:11 AM IST