Dakshina Kannada: ಬೀಚ್‌ನಲ್ಲಿ ಮೀನಿಗಾಗಿ ಗಾಳ ಹಾಕುವ ಜನರು- ಸಿಕ್ಕರೆ ಮೀನುಸಾರು, ಸಿಗದಿದ್ದರೆ ಡೋಂಟ್ ಕೇರ್! | Dakshina Kannada: People fishing for fish on the beach

Dakshina Kannada: ಬೀಚ್‌ನಲ್ಲಿ ಮೀನಿಗಾಗಿ ಗಾಳ ಹಾಕುವ ಜನರು- ಸಿಕ್ಕರೆ ಮೀನುಸಾರು, ಸಿಗದಿದ್ದರೆ ಡೋಂಟ್ ಕೇರ್! | Dakshina Kannada: People fishing for fish on the beach

Last Updated:

ಹವ್ಯಾಸಕ್ಕಾಗಿ ಗಾಳ ಹಾಕುವ ಇವರು ಮೀನುಗಳನ್ನು ತಮ್ಮ ಗಾಳಕ್ಕೆ ಸಿಲುಕಿಸಿಕೊಳ್ಳಲು ಗಾಳದ ತುದಿಗೆ ಸೀಗಡಿ ಮೀನುಗಳನ್ನು ಪೋಣಿಸಿಡುತ್ತಾರೆ. ಸೀಗಡಿ ಮೀನಿನ ಆಸೆಯಿಂದ ಬಾಯಿ ಹಾಕುವ ಮೀನುಗಳು ಗಾಳಕ್ಕೆ ಸಿಲುಕಿದ ತಕ್ಷಣ ದಾರವನ್ನು ಎಳೆದು ಮೀನನ್ನು ಪಡೆಯೋದು ಇವರ ದೈನಂದಿನ ಕಾಯಕ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ರಜಾ ದಿನಗಳಲ್ಲಿ ಜನ ಹೆಚ್ಚಾಗಿ ಮಾಲ್, ದೇವಸ್ಥಾನ, ಅಮ್ಯೂಸ್ಮೆಂಟ್ ಪಾರ್ಕ್ ಹೀಗೆ ಎಲ್ಲಾ ಕಡೆಗಳಿಗೂ ಭೇಟಿ ನೀಡಿ ಮಜಾ ಮಾಡುತ್ತಾರೆ. ಅದೇ ರೀತಿ ಸಂಜೆ ವೇಳೆಗೆ ಜನ ಹೆಚ್ಚಾಗಿ ಭೇಟಿ ನೀಡೋ ಫೇವರೇಟ್ ಸ್ಪಾಟ್‌(Favorite Spot) ಎಂದರೆ ಅದು ಬೀಚ್(Beach). ಹೌದು, ಬೀಚ್‌ಗೆ ಬರೋರು‌ ಒಂದು ಕಡೆಯಲ್ಲಿ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ನೀರಾಟ ಆಡಿದರೆ, ಇನ್ನು ಕೆಲವರು ವಾಲಿಬಾಲ್, ಕ್ರಿಕೆಟ್ ನಂತಹ ಆಟವನ್ನು ಆಡುತ್ತಾರೆ. ಮಕ್ಕಳು ಹೊಯಿಗೆಯಲ್ಲಿ ಆಟವಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಬೀಚ್‌ಗೆ ಬಂದು ಮೀನು ಹಿಡಿಯಲು ಗಾಳ(Fishing) ಹಿಡಿದು ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ಮೋಟಾರು ಚಾಲಿತ ಫಿಶಿಂಗ್ ರಾಡ್ ಜೊತೆ ಕಡಲ ಕಿನಾರೆಯಲ್ಲೇ ನಿಂತು ಮೀನಿಗಾಗಿ ಗಾಳ ಹಾಕುತ್ತಾರೆ. ಕಡಲಲ್ಲಿ ಕೇವಲ 50 ರಿಂದ 100 ಮೀಟರ್ ನಷ್ಟು ದೂರಕ್ಕೆ ಈ ಫಿಶಿಂಗ್ ರಾಡ್ ನಲ್ಲಿರುವ ನೈಲಾನ್ ದಾರ ತಲುಪುತ್ತದೆ. ಸಣ್ಣಪುಟ್ಟ ಆಹಾರ ಹುಡುಕಿಕೊಂಡು ಕಡಲ ತೀರಕ್ಕೆ ಬರುವ ಮೀನುಗಳು ಈ ಗಾಳಕ್ಕೆ ಸಿಲುಕಿಕೊಂಡರೆ ಗಾಳ ಹಾಕುವವರಿಗೆ ಖುಷಿ, ಸಿಕ್ಕಿಲ್ಲಾ ಅಂದರೆ ಬೇಸರವೇನಿಲ್ಲ. ಸಂಜೆಯಿಂದ ರಾತ್ರಿ ತನಕ ಗಾಳ ಹಾಕುತ್ತಲೇ ಇರುವ ಇವರಿಗೆ ಒಮ್ಮೊಮ್ಮೆ ಭರ್ಜರಿ ಮೀನುಗಳು ಸಿಕ್ಕರೆ, ಕೆಲವು ಸಮಯದಲ್ಲಿ ಒಂದೂ ಮೀನೂ ಸಿಗದ ದಿನಗಳಿವೆ. ಹವ್ಯಾಸಕ್ಕಾಗಿ ಗಾಳ ಹಾಕುವ ಇವರು ಮೀನುಗಳನ್ನು ತಮ್ಮ ಗಾಳಕ್ಕೆ ಸಿಲುಕಿಸಿಕೊಳ್ಳಲು ಗಾಳದ ತುದಿಗೆ ಸೀಗಡಿ ಮೀನುಗಳನ್ನು ಪೋಣಿಸಿಡುತ್ತಾರೆ. ಸೀಗಡಿ ಮೀನಿನ ಆಸೆಯಿಂದ ಬಾಯಿ ಹಾಕುವ ಮೀನುಗಳು ಗಾಳಕ್ಕೆ ಸಿಲುಕಿದ ತಕ್ಷಣ ದಾರವನ್ನು ಎಳೆದು ಮೀನನ್ನು ಪಡೆಯೋದು ಇವರ ದೈನಂದಿನ ಕಾಯಕ.

ಕೆಲವು ವರ್ಷಗಳ ಹಿಂದೆ ಇದ್ದ ಗಾಳ ಹಾಕುವ ವಿಧಾನಕ್ಕೂ, ಈಗ ಬಳಸಲಾಗುವ ವಿಧಾನಕ್ಕೂ ತುಂಬಾ ವ್ಯತ್ಯಾಸಗಳಾಗಿದೆ. ಸರಿಸುಮಾರು ಐದಾರು ವರ್ಷಗಳ ಹಿಂದೆ ನೈಲಾನ್ ಹಗ್ಗದ ಒಂದು ತುದಿಯನ್ನು ತೆಂಗಿನ ಸಿಪ್ಪೆಗೆ ಸುತ್ತಿ, ಹಗ್ಗದ ಇನ್ನೊಂದು ತುದಿಗೆ ಸೀಸ ಮತ್ತು ಕಬ್ಬಿಣದ ಕೊಕ್ಕೆಯಾಕಾರದ ಗಾಳವನ್ನು ಕಟ್ಟಿ ಸಮುದ್ರಕ್ಕೆ ಎಸೆಯುತ್ತಿದ್ದರು. ಗಾಳ ಎಸೆಯುವವನ ದೇಹದ ಸಾಮರ್ಥ್ಯ ಅನುಗುಣವಾಗಿ ಗಾಳ ಸಮುದ್ರದಲ್ಲಿ ದೂರದವರೆಗೂ ಬೀಳುತ್ತಿತ್ತು.

ಆದರೆ ಇಂದು ಗಾಳದ ಆಕಾರದಲ್ಲಿ ಬದಲಾವಣೆಯಾಗಿದ್ದು, ಫಿಶಿಂಗ್ ಸ್ಟಿಕ್ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದ್ದು, ಕಡಲ ಕಿನಾರೆಗೆ ಬಂದು ಸ್ಟಿಕ್‌ನ್ನು ಬೀಸಿದಲ್ಲಿ‌ ಅದರಲ್ಲಿ ಅಳವಡಿಸಲಾದ ನೈಲಾನ್ ದಾರ ಗಾಳದೊಂದಿಗೆ ನೀರಿಗೆ ತಲುಪುತ್ತದೆ. ಗಾಳಕ್ಕೆ ಸಿಕ್ಕ ಮೀನನ್ನು ದಡಕ್ಕೆ ಎಳೆಯೋದೂ ಈ ಸ್ಟಿಕ್ ನಲ್ಲಿ ಸುಲಭವಾದ ಕಾರಣ, ಹೆಚ್ಚಿನ ಫಿಶಿಂಗ್ ಹವ್ಯಾಸಿಗಳು ಇದನ್ನೇ ಬಳಸುತ್ತಿದ್ದಾರೆ.

ಕೊಡ್ಡಾಯಿ, ಮುರು, ಕಾನೆ ಮೊದಲಾದ ಸಣ್ಣ ಗಾತ್ರದ ಮೀನುಗಳು ಈ ಗಾಳಕ್ಕೆ ಸಿಕ್ಕಿ ಹಾಕಿಕೊಳ್ಳುತ್ತವೆ. ಬೀಚ್‌ನಲ್ಲಿ ಟೈಂ ಪಾಸ್ ಜೊತೆಗೆ ಮನೆಯಲ್ಲಿ ಮೀನಿನ ಸಾಂಬಾರಿಗಾಗುವಷ್ಟು ಮೀನು ಸಿಗುತ್ತೆ ಎನ್ನುವ ಲೆಕ್ಕಾಚಾರ ಇವರದು.