Last Updated:
ದಕ್ಷಿಣ ಕನ್ನಡ ಜಿಲ್ಲೆಯ ಕೊಂಬಾರು ಗ್ರಾಮಕ್ಕೆ ಹೈಕೋರ್ಟ್ ಆದೇಶದ ಮೇರೆಗೆ ರಸ್ತೆ ಮತ್ತು ಸೇತುವೆ ನಿರ್ಮಾಣ, ಗ್ರಾಮಸ್ಥರ ಹೋರಾಟಕ್ಕೆ ಯಶಸ್ಸು.
ದಕ್ಷಿಣ ಕನ್ನಡ: ಸಾಮಾನ್ಯವಾಗಿ ಸರಕಾರಿ ಕಾಮಗಾರಿಗಳ(Government works) ಉದ್ಘಾಟನೆ ನಡೆಯುವಾಗ ಆ ಭಾಗದ ಬಿಳಿ ಕಾಲರ್ ನ ಜನಪ್ರತಿನಿಧಿಗಳು(Representatives), ಅವರ ಕೆಲವು ಬೆಂಬಲಿಗರು ಎದುರಿಗೇ ನಿಂತು ಫೋಸ್ ಕೊಡೋದು ಸಹಜ. ಆದರೆ ಇಲ್ಲೊಂದು ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿರಲಿಲ್ಲ, ಕೇವಲ ಜನ(People) ಮಾತ್ರ ಇದ್ದರು. ಈ ಜನರ ಮುಖದಲ್ಲಿ ಧನ್ಯತೆಯ ಭಾವವಿತ್ತು, ದೊಡ್ಡದೊಂದು ಯುದ್ಧ ಗೆದ್ದ ಗೆಲುವಿನ ಮುಗುಳ್ನಗೆಯಿತ್ತು.
ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಗ್ರಾಮದ ಸಿರಿಬಾಗಿಲಿನ ಕಟ್ಟೆ, ಬಿರ್ಮೆರೆ ಗುಂಡಿ ಮತ್ತು ಮೆಟ್ಟತ್ತಾರು ಗ್ರಾಮದ ಜನರ ಜನರ ಸದ್ಯದ ಲುಕ್. ಸ್ವಾತಂತ್ರ್ಯ ಸಿಕ್ಕ ಬಳಿಕ ಈ ಭಾಗದ ಜನ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡದ ದಿನಗಳಿಲ್ಲ. ಪ್ರತೀ ಬಾರಿಯೂ ಈ ಭಾಗದ ಜನ ತಮಗೊಂದು ಸುವ್ಯಸ್ಥಿತ ರಸ್ತೆ ಕೊಡಿ, ಸೇತುವೆ ಕೊಡಿ ಎಂದು ಜನಪ್ರತಿನಿಧಿಗಳ, ಅಧಿಕಾರಿಗಳ ಮನೆ ಬಾಗಿಲಿನಿಂದ ಹಿಡಿದು ಕಚೇರಿಗೆ ಅಲೆದಾಟ ನಡೆಸಿದ್ದರು. ಆದರೆ ಈ ಭಾಗದ ಜನರಿಗೆ ಭರವಸೆ ಮಾತ್ರ ಸಿಕ್ಕಿದ್ದಲ್ಲದೆ, ಬೇಡಿಕೆಯು ಯಾವತ್ತೂ ಈಡೇರಿಕೆಯಾಗಿರಲಿಲ್ಲ. ಕೊನೆಗೆ ಈ ಭಾಗದ ಜನರಿಗೆ ತೋಚಿದ್ದು ನ್ಯಾಯಾಲಯದ ಮೊರೆ ಹೋಗುವ ವಿಚಾರ.
ಊರಿನಲ್ಲಿ ಸೇತುವೆ, ರಸ್ತೆ ನಿರ್ಮಾಣ ಆಗಲೇಬೇಕು, ಇದಕ್ಕಾಗಿ ಹೋರಾಟ ನಡೆಯಬೇಕು ಎಂದು “ಫಲಾನುಭವಿ ಸನ್ಮಿತ್ರ ಬಳಗ ಕೊಂಬಾರು” ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ತಂಡದಲ್ಲಿದ್ದ ಗುಣವಂತ ಕಟ್ಟೆ, ಮಂಜುನಾಥ ಕಟ್ಟೆ, ಭುವನೇಶ್ವರ ಅಮ್ಟೂರು ಈ 3 ಮಂದಿ ಸೇರಿಕೊಂಡು 2006 ರಲ್ಲಿ “ನಮ್ಮ ಗ್ರಾಮಕ್ಕೆ ಸೇತುವೆ ಮತ್ತು ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು” ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿಕೆ ಸಲ್ಲಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.
ಅದರ ಫಲವಾಗಿ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಸರ್ಕಾರ ಕೊಂಬಾರು ಗ್ರಾಮದ ಮೆಟ್ಟತ್ತಾರು ಸೇತುವೆಗೆ 1 ಕೋಟಿ ರೂಪಾಯಿ, ಬಿರ್ಮೆರೆ ಗುಂಡಿ ಕಿರು ಸೇತುವೆಗೆ 50 ಲಕ್ಷ ರೂಪಾಯಿ, ಸಿರಿಬಾಗಿಲು-ಮಣಿಭಾಂಡ-ಕೋಟಿಗುಡ್ಡೆ ಕಟ್ಟೆ ತನಕ 1.25 ಕಿ.ಮೀ ರಸ್ತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ 81.50 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದು, ಅದರಂತೆ 2 ಸೇತುವೆ ಮತ್ತು ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಮಗಾರಿಗಳು ಈಗಾಗಲೇ ಲೋಪಾರ್ಪಣೆಗೊಂಡಿದ್ದು, ಕರ್ನಾಟಕ ಹೈಕೋರ್ಟು ನ್ಯಾಯಾಧೀಶರಾಗಿರುವ ರಾಜೇಶ್ ರೈ ಕಲ್ಲಂಗಳ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ರಸ್ತೆ ಮತ್ತು ಸೇತುವೆ ನಿರ್ಮಾಣದಿಂದಾಗಿ ಕುಗ್ರಾಮದ ಸುಮಾರು 25 ಕ್ಕೂ ಮಿಕ್ಕಿದ ಕುಟುಂಬಗಳು ಎದುರಿಸುತ್ತಿದ್ದ ಸಮಸ್ಯೆಗೆ ಇದೀಗ ಮುಕ್ತಿ ದೊರೆತಿದೆ.
ಚುನಾವಣೆ ಬಂದ ಸಂದರ್ಭದಲ್ಲಿ ಈ ಭಾಗಕ್ಕೆ ಭೇಟಿ ನೀಡಿ ಭರವಸೆಯನ್ನೇನೋ ನೀಡುತ್ತಾರೆ. ಆದರೆ ಭರವಸೆಗಳೆಲ್ಲಾ ಹುಸಿಯಾದಾಗ ನ್ಯಾಯಾಯಲವೊಂದೇ ದಾರಿ ಎಂದು ಈ ಗ್ರಾಮದ ಜನರ ಕನಸು ಕೊನೆಗೂ ನನಸಾಗಿದ್ದು, ಸರಕಾರ ಸ್ಪಂದಿಸದಿದ್ದಾಗ ಜನತೆಯ ಮುಂದೆ ಇನ್ನೊಂದು ದಾರಿಯೂ ಇದೆ ಅನ್ನೋದನ್ನು ಈ ಭಾಗದ ಜನ ತೋರಿಸಿಕೊಟ್ಟಿದ್ದಾರೆ.
Dakshina Kannada,Karnataka