Last Updated:
ಪುತ್ತೂರಿನಲ್ಲಿ 55 ಕೋಟಿ ವೆಚ್ಚದ ಹೊಸ ನ್ಯಾಯಾಲಯ ಕಟ್ಟಡ ಸಿದ್ಧವಾಗಿದೆ. ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲು ಶಾಸಕರ ಯೋಜನೆ, ಗ್ರೀನ್ ಸಿಗ್ನಲ್ ಬಾಕಿ. ವಕೀಲರ ಸಂಘದ ಕಟ್ಟಡವೂ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ ಹೊಸ ನ್ಯಾಯಾಲಯ (New Court) ಕಟ್ಟಡ ಸಿದ್ಧಗೊಂಡು ಉದ್ಘಾಟನೆಗೆಗಾಗಿ ಕಾಯುತ್ತಿದೆ. ಸದ್ಯ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಯಾಲಯವು ಉದ್ಘಾಟನೆ ಬಳಿಕ ಬನ್ನೂರಿನ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಶಿಫ್ಟ್ ಆಗಲಿದೆ. 2022 ರಲ್ಲಿ ಈ ಹೊಸ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಕಟ್ಟಡದ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಿದೆ. ಅಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಮೂಲಕ ಸುಮಾರು 50 ಕೋಟಿ (Crore) ವೆಚ್ಚದ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ವೆಚ್ಚದ ವಕೀಲರ ಸಂಘದ ಕಟ್ಟಡ (Building) ಇಲ್ಲಿ ನಿರ್ಮಾಣಗೊಂಡಿದೆ ಮೊದಲ ಹಂತದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ರೂಪಾಯಿ ವೆಚ್ಚದಲ್ಲಿ ವಕೀಲರ ಸಂಘದ ಕಟ್ಟಡವನ್ನು ನಿರ್ಮಿಸುವ ಯೋಜನೆಯಿತ್ತು.
ಅಂದಿನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಇದೇ ನ್ಯಾಯಾಲಯ ಸಂಕೀರ್ಣ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೂ ಅವಕಾಶವಿರಬೇಕು ಎನ್ನುವ ಕಾರಣಕ್ಕೆ ಇದೇ ಕಟ್ಟಡಕ್ಕೆ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಒಟ್ಟು 55 ಕೋಟಿ ರೂಪಾಯಿ ವ್ಯಯಿಸಿ ಈ ಕಟ್ಟಡದ ನಿರ್ಮಾಣವಾಗಿದೆ.
ಬೆಳೆಯುತ್ತಿರುವ ಪುತ್ತೂರು ಜಿಲ್ಲೆಯಾಗುವ ಎಲ್ಲಾ ಅವಕಾಶಗಳನ್ನು ಹೊಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಪುತ್ತೂರಿನಲ್ಲಿ ಮಾಡಲಾಗುತ್ತಿದೆ. ಇದೇ ಮುಂದಾಲೋಚನೆಯ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಬನ್ನೂರಿನಲ್ಲಿ ಈ ನ್ಯಾಯಾಲಯ ಸಂಕೀರ್ಣವನ್ನು ಸಿದ್ಧಪಡಿಸಲಾಗಿದೆ. ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಹೊಸ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕರೆಸಿಕೊಳ್ಳಬೇಕೆನ್ನುವ ಇರಾದೆಯಲ್ಲೂ ಇಂದಿನ ಶಾಸಕ ಅಶೋಕ್ ಕುಮಾರ್ ರೈ ಅವರದ್ದಾಗಿದೆ. ಶಾಸಕರು ಈಗಾಗಲೇ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ, ಮುಖ್ಯಮಂತ್ರಿ ಕಛೇರಿಯಿಂದ ಈವರೆಗೂ ಗ್ರೀನ್ ಸಿಗ್ನಲ್ ದೊರಕದ ಹಿನ್ನಲೆಯಲ್ಲಿ ಕಟ್ಟಡದ ಉದ್ಘಾಟನೆ ಕೊಂಚ ವಿಳಂಬವಾಗುವ ಸಾಧ್ಯತೆಯಿದೆ. ನ್ಯಾಯಾಲಯಕ್ಕೆ ಸಂಪರ್ಕ ಕಲ್ಪಿಸುವ ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.
Dakshina Kannada,Karnataka
July 01, 2025 12:32 PM IST