Dakshina Kannada: ಕರಾವಳಿಯಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯಲು ಸಿದ್ಧತೆ! | Dakshina Kannnada All set to grow Coffee Crop in coastal districts

Dakshina Kannada: ಕರಾವಳಿಯಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯಲು ಸಿದ್ಧತೆ! | Dakshina Kannnada All set to grow Coffee Crop in coastal districts

Last Updated:

ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಳ್ಳುವ ಕಾಫಿ ಬೆಳೆಯನ್ನು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಪ್ರಾರಂಭಿಸಿದರೆ, ಕೃಷಿಕರು ಕಾಫಿ ಬೋರ್ಡ್ ವ್ಯಾಪ್ತಿಗೆ ಬರಲಿದ್ದಾರೆ. ಕಾಫಿ ಬೋರ್ಡ್ ಮೂಲಕ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಸೇರಿದಂತೆ ಹಲವು ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಇಂದು ಹಲವು ರೀತಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಒಂದು ಕಡೆಯಲ್ಲಿ ಅಡಿಕೆ ಬೆಳೆಗೆ ವರ್ಷಕ್ಕೊಂದರಂತೆ ಅಂಟಿಕೊಳ್ಳುತ್ತಿರುವ ರೋಗಗಳು, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಏರುಪೇರು. ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ವ್ಯಾಪಿಸಿರುವ ಅಡಿಕೆ ಹಳದಿರೋಗ ಇಡೀ ಅಡಿಕೆ ತೋಟವನ್ನೇ ನಾಶ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಅಡಿಕೆಗೆ ಪರ್ಯಾಯವಾಗಿ ಯಾವ ಬೆಳೆಯನ್ನು ಬೆಳೆಯಬಹುದು ಎನ್ನುವ ನಿಟ್ಟಿನಲ್ಲಿ ಹಲವು ರೀತಿಯ ಚರ್ಚೆಗಳು ಕೃಷಿಕ ಮತ್ತು ಕೃಷಿ ಸಂಘಟನೆಗಳ ಮಧ್ಯೆ ನಡೆಯುತ್ತಿದೆ.

ಚಿಕ್ಕಮಗಳೂರು, ಕೊಡಗು ಹಾಗು ಇತರ ಭಾಗಗಳಲ್ಲಿ ಬೆಳೆಯುವ ಕಾಫಿ ಬೆಳೆಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಬೆಳೆಯಲು ಚಿಂತನೆಗಳು ಆರಂಭಗೊಂಡಿದೆ. ಜಿಲ್ಲೆಯ ಹವಾಗುಣಕ್ಕೆ ಕಾಫಿ ಬೆಳೆ ಹೊಂದಿಕೊಳ್ಳುತ್ತಿದ್ದು, ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಕೆಲವು ಕೃಷಿಕರು ಕಾಫಿಯನ್ನು ಬೆಳೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಫಿಯನ್ನು ಜಿಲ್ಲೆಯಲ್ಲಿ ಬೆಳೆಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳ ಫಲವಾಗಿ, ಇದೀಗ ಕೇಂದ್ರ ಕಾಫಿ ಬೋರ್ಡ್‌ನ ಸದಸ್ಯರು ಜಿಲ್ಲೆಗೆ ಭೇಟಿ ನೀಡಿ ಕಾಫಿ ಬೆಳೆದ ತೋಟಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದೆ. ಅಕ್ಟೋಬರ್ 8 ಮತ್ತು 9ರಂದು ಐವರು ಸದಸ್ಯರ ಈ ತಂಡ ಜಿಲ್ಲೆಯ ವಿವಿಧೆಡೆ ಕಾಫಿ ಬೆಳೆದಿರುವ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: Bidar: ಮಹಾರಾಷ್ಟ್ರದ ತುಳಜಾಪುರಕ್ಕೆ ಕರ್ನಾಟಕದ ಭಕ್ತರ ದಂಡು- 250 ಕಿ.ಮೀ ಪಾದಯಾತ್ರೆ

ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಳ್ಳುವ ಕಾಫಿ ಬೆಳೆಯನ್ನು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಪ್ರಾರಂಭಿಸಿದರೆ, ಕೃಷಿಕರು ಕಾಫಿ ಬೋರ್ಡ್ ವ್ಯಾಪ್ತಿಗೆ ಬರಲಿದ್ದಾರೆ. ಕಾಫಿ ಬೋರ್ಡ್ ಮೂಲಕ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಸೇರಿದಂತೆ ಹಲವು ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಆದರೆ ಅಡಿಕೆ ಬೆಳೆಗೆ ಸರಕಾರದ ಅಧೀನದ ಯಾವುದೇ ಮಂಡಳಿಗಳು ಇಲ್ಲದ ಕಾರಣ, ಅಡಿಕೆ ಕೃಷಿಕರು ತಮ್ಮ ಬೆಳೆಯಲ್ಲಾಗುವ ಲಾಭ-ನಷ್ಟಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಆದರೆ ಕಾಫಿ ಬೋರ್ಡ್ ನಂತಹ ಸಂಸ್ಥೆಗಳು ಕೃಷಿಕನಿಗಾಗುವ ನಷ್ಟಕ್ಕೆ ಪರಿಹಾರವನ್ನು ನೀಡುವ ವ್ಯವಸ್ಥೆಯಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರು ಕಾಫಿಯನ್ನು ಬೆಳೆಸಲು ಮುಂದೆ ಬಂದರೆ ಉತ್ತಮ ಎನ್ನುವುದು ಈಗಾಗಲೇ ಕಾಫಿ ಬೆಳೆಯುತ್ತಿರುವ ಕೃಷಿಕರ ಅಭಿಪ್ರಾಯವಾಗಿದೆ.

ತಂಪು ಹವಾಗುಣವಿರುವ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯುವಂತಹ ಗುಣಮಟ್ಟದ ಕಾಫಿ ಬೆಳೆಯನ್ನೇ ಇಲ್ಲೂ ಬೆಳೆಯುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಆ ಜಿಲ್ಲೆಗಳಲ್ಲಿ ಕಾಫಿಗೆ ನೀಡುವ ಮಾರುಕಟ್ಟೆ ಬೆಲೆಯನ್ನು ಜಿಲ್ಲೆಯಲ್ಲಿ ಬೆಳೆಯುವ ಕಾಫಿಗೂ ನೀಡಲಾಗುತ್ತಿದೆ.

ಜಿಲ್ಲೆಗೆ ಭೇಟಿ ನೀಡಿರುವ ಕೇಂದ್ರ ಕಾಫಿ ಬೋರ್ಡ ನ ತಂಡ ಕರಾವಳಿಯಲ್ಲಿ ಕಾಫಿ ಬೆಳೆಗೆ ಬೇಕಾದ ಸೂಕ್ತ ವಾತಾವರಣ ಇದೆ ಎನ್ನುವುದನ್ನು ತಂಡ ಮನದಟ್ಟು ಮಾಡಿದೆ. ಈ ಹಿನ್ನಲೆಯಲ್ಲಿ ತಂಡ ಸಂಗ್ರಹಿಸಿರುವ ವರದಿಯು ಕರಾವಳಿ ಕೃಷಿಕರಿಗೆ ಪೂರಕವಾಗಿರುವ ಸಾಧ್ಯತೆಯಿದ್ದು, ಕಾಫಿ ಬೆಳೆ ಜಿಲ್ಲೆಗೆ ಪ್ರವೇಶಿಸಲು ವೇದಿಕೆ ಸಿದ್ಧವಾಗಿದೆ.