Dakshina Kannada: ಕರಾವಳಿಯ ಕಲ್ಕುಡ-ಕಲ್ಲುರ್ಟಿ ದೈವಗಳ ಹರಕೆಯ ಕಾರ್ಣಿಕದ ಭೂಮಿ ವಿಟ್ಲದ ಕಡಂಬು ಕ್ಷೇತ್ರ! | Kadambu is famous for this reason in Dakshina Kannada

Dakshina Kannada: ಕರಾವಳಿಯ ಕಲ್ಕುಡ-ಕಲ್ಲುರ್ಟಿ ದೈವಗಳ ಹರಕೆಯ ಕಾರ್ಣಿಕದ ಭೂಮಿ ವಿಟ್ಲದ ಕಡಂಬು ಕ್ಷೇತ್ರ! | Kadambu is famous for this reason in Dakshina Kannada

Last Updated:

ವಾರದ ಪ್ರತೀ ಮಂಗಳವಾರ ಮತ್ತು ಶುಕ್ರವಾರದಂದು ಇಲ್ಲಿ ಕಲ್ಕುಡ-ಕಲ್ಲುರ್ಟಿ ದೈವಗಳ ನರ್ತನ ಸೇವೆಯ ಕೋಲ ನಡೆಯುತ್ತದೆ‌.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ತುಳುನಾಡಿನಲ್ಲಿ ದೈವಾರಾಧನೆ ಎನ್ನುವುದು ಇಲ್ಲಿನ ಜನರ ನರನಾಡಿಗಳಲ್ಲಿ ಬೆಸೆದು ನಿಂತಿದೆ. ತುಳುನಾಡಿನ ಪ್ರತಿಯೊಂದು ಕುಟುಂಬವೂ ವರ್ಷಕ್ಕೆ ಒಂದು ಬಾರಿ ತಮ್ಮ ಕುಟುಂಬಕ್ಕೆ ಸೇರಿದ ದೈವಗಳಿಗೆ ನೇಮ ಅಥವಾ ಕೋಲ‌ ಕೊಡುವ ಸಂಪ್ರದಾಯವನ್ನು ಅನಾದಿ‌ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲವು ಕುಟುಂಬಗಳ ಹರಕೆಯ ರೂಪದಲ್ಲಿ ದೈವಗಳಿಗೆ ಕೋಲ ಕೊಡುವ ಸಂಪ್ರದಾಯವೂ ಇದ್ದು, ಹೀಗೆ ಹರಕೆ ಕೋಲ ತೀರಿಸುವ ಅವಕಾಶವಿರುವ ಪ್ರಮುಖ ದೈವಸ್ಥಾನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಡಂಬು‌ ಕಲ್ಕುಡ-ಕಲ್ಲುರ್ಟಿ ಕ್ಷೇತ್ರವೂ ಒಂದು.

ಅನ್ಯಾಯದ ವಿರುದ್ಧ ಹೋರಾಡಿ ದೈವತ್ವ ಪಡೆದ ತುಳುನಾಡಿನ ಪ್ರಮುಖ ದೈವಗಳಲ್ಲಿ ಕಲ್ಕುಡ- ಕಲ್ಲರ್ಟಿ ದೈವಗಳೂ‌ ಒಂದು. ಅಣ್ಣ-ತಂಗಿಯಾಗಿರುವ ಈ ದೈವಗಳಿಗೆ ಹೆಚ್ಚಾಗಿ ಒಟ್ಟಿಗೇ ನೇಮ ( ನರ್ತನ ಸೇವೆ) ನಡೆಯುತ್ತದೆ. ತುಳುನಾಡಿನ ಹೆಚ್ಚಿನ ಕುಟುಂಬಗಳಲ್ಲಿ ಈ ದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದು, ಈ ದೈವಗಳಿಗೆ ನೇಮ ಅಥವಾ ಕೋಲಗಳು ಇಲ್ಲಿ ಹೆಚ್ಚಾಗಿ ನಡೆಯುತ್ತದೆ. ತಮ್ಮ ಸಂಕಷ್ಟಗಳನ್ನು ದೂರ ಮಾಡಿದರೆ ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ಕೋಲ ಕೊಡುತ್ತೇವೆ ಎನ್ನುವ ಹರಕೆಯನ್ನು ಸಾಮಾನ್ಯವಾಗಿ ಎಲ್ಲಾ ಕುಟುಂಬಗಳು ಪರಿಸ್ಥಿತಿಗೆ ತಕ್ಕಂತೆ ಹೊತ್ತಿರುತ್ತವೆ. ಅಂತಹ ಹರಕೆಯನ್ನು ತೀರಿಸುವ ತುಳುನಾಡಿನ ಪ್ರಮುಖ ದೈವಸ್ಥಾನಗಳಲ್ಲಿ ವಿಟ್ಲದ ಕಡಂಬುವಿನ ಕಲ್ಕುಡ- ಕಲ್ಲುರ್ಟಿ ಕ್ಷೇತ್ರವೂ ಒಂದಾಗಿದೆ.

ಇದನ್ನೂ ಓದಿ: Weekend Trip: ಮಳೆಗಾಲದಲ್ಲಿ ಈ ಫಾರ್ಮ್‌ನ ಸೌಂದರ್ಯಕ್ಕೆ ಸಾಟಿಯಿಲ್ಲ- ಪ್ರಕೃತಿ ಪ್ರೇಮಿಗಳ ಫೇವರಿಟ್‌ ಸ್ಪಾಟ್‌ ಇದು!

ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಭಾರೀ ಕಾರ್ಣಿಕವೂ ನಡೆಯುತ್ತದೆ. ಇದೇ ಕಾರಣಕ್ಕೆ ಇಲ್ಲಿ ಹರಕೆ ಹೊತ್ತು ಐದಾರು ವರ್ಷಗಳ ಬಳಿಕವೇ ಹರಕೆ ಕೋಲ ನೆರವೇರಿಸಲು ಅವಕಾಶ ದೊರೆಯುತ್ತದೆ. ವಾರದ ಪ್ರತೀ ಮಂಗಳವಾರ ಮತ್ತು ಶುಕ್ರವಾರದಂದು ಇಲ್ಲಿ ಕಲ್ಕುಡ-ಕಲ್ಲುರ್ಟಿ ದೈವಗಳ ನರ್ತನ ಸೇವೆಯ ಕೋಲ ನಡೆಯುತ್ತದೆ‌. ಭಾನುವಾರದಂದು ಇಲ್ಲಿ ದೈವಗಳಿಗೆ ಅಗೇಲು ಸೇವೆಯೂ ನಡೆಯುತ್ತದೆ. ವಾರಕ್ಕೆ ಎರಡು ದಿನ ಇಲ್ಲಿ ದೈವಗಳ ಹರಕೆ ಕೋಲ ನಡೆದರೂ, ಇಲ್ಲಿ ಹರಕೆ ಸೇವೆ ತೀರಿಸಲು ಕನಿಷ್ಠ ಪಕ್ಷ ಐದಾರು ವರ್ಷಗಳು ಕಾಯಲೇ ಬೇಕು. ಕ್ಷೇತ್ರದ ಕಾರ್ಣಿಕ ಅಷ್ಟರಮಟ್ಟಿಗೆ ಪ್ರಸಿದ್ಧಿಯಾಗಿರುವ ಕಾರಣ ಇಲ್ಲಿ ವರ್ಷಗಟ್ಟಲೆ ಸೇವೆ ತೀರಿಸಲು ಕಾಯಬೇಕಾಗುತ್ತದೆ.

ತಮಗೆ ಅನ್ಯಾಯವೆಸಗಿದ ಕಾರ್ಕಳದ ಅರಸನ ಅರಮನೆಯನ್ನೇ ಸುಟ್ಟು ಬಂದ ಕಲ್ಕುಡ-ಕಲ್ಲುರ್ಟಿ ಅಲ್ಲಿಂದ ನೇರವಾಗಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಗೆ ಬರುತ್ತಾರೆ‌. ಅಲ್ಲಿಂದ ನೇತ್ರಾವತಿ ನದಿ ದಾಟಿ, ಪುತ್ತೂರಿನ ಕಲ್ಲೇಗದಲ್ಲಿ ನೆಲೆಯಾಗುತ್ತಾರೆ. ಅಲ್ಲಿಂದ ಹೊರಡುವ ಅಣ್ಣ-ತಂಗಿ ದೈವಗಳು ಕಡಂಬುವಿನ ಈ ಕ್ಷೇತ್ರದಲ್ಲಿ ನೆಲೆಯಾಗುತ್ತಾರೆ ಎನ್ನುವ ಇತಿಹಾಸ ಈ ಕ್ಷೇತ್ರದ್ದಾಗಿದೆ. ಹರಕೆಯಲ್ಲಿ ದೈವಗಳ ಸೇವೆಯ ಎಲ್ಲಾ ವಿಧಿವಿಧಾನಗಳನ್ನು ಕಟ್ಟುಕಟ್ಟಲೆಗಳ ಮೂಲಕ ನೆರವೇರಿಸಲಾಗುತ್ತದೆ.