ನೂರಾರು ಬಗೆಯ ತಿಂಡಿ-ತಿನಿಸು, ಪಲ್ಯ-ಪದಾರ್ಥ, ಸಿಹಿ ಪರಮಾನ್ನವಿರುವ ತುಳುನಾಡಿನ ಆಹಾರಗಳಲ್ಲಿ ನಾವೀಗ ತುಳುವರ ಸಾಂಪ್ರದಾಯಿಕ ತಿನಿಸು ಒತ್ತು ಶ್ಯಾವಿಗೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಒತ್ತು ಶ್ಯಾವಿಗೆಯನ್ನು ತುಳುವಿನಲ್ಲಿ ಸೇಮೆದಡ್ಯ, ನೂಕಡ್ಯ, ಸೇಮಿಗೆ ಎಂದು ಕರೆಯಲಾಗುತ್ತದೆ. ಈ ಒತ್ತು ಶ್ಯಾವಿಗೆಯನ್ನು ತಯಾರಿಸುವ ಉಪಕರಣಕ್ಕೆ ‘ಸೇಮೆದಡ್ಯದ ಮಣೆ’ ಎಂದು ತುಳುವಿನಲ್ಲಿ ಕರೆಯುತ್ತಾರೆ. ಸದ್ಯ ಒತ್ತು ಶ್ಯಾವಿಗೆಯೂ ಅದನ್ನು ತಯಾರಿಸುವ ಉಪಕರಣವೂ ಆಧುನಿಕ ಕಾಲಘಟ್ಟಕ್ಕೆ ಸರಿಯಾಗಿ ಸಾಕಷ್ಟು ಬದಲಾವಣೆ ಕಾಣುತ್ತಾ ಬಂದಿದೆ.
ಶ್ಯಾವಿಗೆ ಮಣೆಯ ಪರಿಕರದಲ್ಲಿನ ಬದಲಾವಣೆ
ಆಧುನಿಕ ಕಾಲಘಟ್ಟದಲ್ಲಿ ಒತ್ತು ಶ್ಯಾವಿಗೆ ಮಣೆಯು ಗಾತ್ರ, ಆಕಾರ, ಭೌತಿಕವಾಗಿ ಬಹಳಷ್ಟು ಬದಲಾವಣೆಯಾಗಿದೆ. ಅಂದರೆ ಹಿಂದೆ ಶ್ಯಾವಿಗೆ ಮಣೆಯನ್ನು ಮರ ಅಥವಾ ಕಬ್ಬಿಣದಿಂದ ಹಳ್ಳಿಯ ಬಡಗಿಯೋ, ಕಮ್ಮಾರನೋ ಮಾಡಿಕೊಡುತ್ತಿದ್ದ. ಕೊಂಚ ಆಧುನಿಕ ಸ್ಪರ್ಶತೆಯಿಂದ ಕಂಚಿಗೆ ಬದಲಾದ ಈ ಉಪಕರಣ ಸದ್ಯ ನಮಗೆ ಸ್ಟೈನ್‌ಲೆಸ್ ಸ್ಟೀಲ್‌ನಲ್ಲೂ ದೊರಕುತ್ತದೆ. ಕಾಲಗತಿಗೆ ತಕ್ಕಂತೆ ಇಲ್ಲಿ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಯ ಹಿಂದೆ ‘ಭೌತಿಕ ಸಂಸ್ಕೃತಿ’ ಮತ್ತು ‘ಆಹಾರ ಸಂಸ್ಕೃತಿ’ ಬದಲಾದದ್ದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ಅಂದರೆ ಒತ್ತು ಶ್ಯಾವಿಗೆ ಮಣೆಯ ರಚನೆ, ವಿನ್ಯಾಸ, ಬಳಕೆ ಎಲ್ಲದರಲ್ಲೂ ಬದಲಾವಣೆಯಾಗಿದೆ. ಹಿಂದೆ ಜೋರಾಗಿ ಒತ್ತುವ(Press) ಮಣೆ ಇತ್ತು. ಆಮೇಲೆ ತಿರುಗುವ ಮಾದರಿಯ ಮಣೆ ಬಳಕೆಗೆ ಬಂತು. ಅದರಲ್ಲೂ ಸ್ಟೇರಿಂಗ್ ಮಾದರಿ, ಹ್ಯಾಂಡಲ್ ಮಾದರಿಯನ್ನು ಕಾಣಬಹುದು.
ಇದನ್ನೂ ಓದಿ: Chikkamagaluru Power Cut: ನಾಳೆ ಚಿಕ್ಕಮಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್!
ಮಾಡುವ ವಿಧಾನ
ಒತ್ತು ಶ್ಯಾವಿಗೆ ಸಾಕಷ್ಟು ಶ್ರಮ ಹಾಕಿ ಮಾಡಬೇಕಾದ ತಿನಿಸು. ಇದನ್ನು ವೇಗವಾಗಿ ಮಾಡಲು ಸಾಧ್ಯವಿಲ್ಲ. ಕುಚ್ಚಲಕ್ಕಿ ಅಥವಾ ಅರೆ ಬೆಳ್ತಿಗೆ ಅಕ್ಕಿಯಲ್ಲಿ ಶ್ಯಾವಿಗೆ ಮಾಡಲಾಗುತ್ತದೆ. ಮೊದಲು ಅಕ್ಕಿಯನ್ನು ನೆನೆಸಿಡಬೇಕು. ನೆನೆಸಿಟ್ಟ ಈ ಅಕ್ಕಿಯನ್ನು ಕಡುಬು ಮಾಡುವ ಮಾದರಿಯಲ್ಲಿ ಗಟ್ಟಿಯಾಗಿ ಅರೆಯಬೇಕು. ಅರೆದಿರುವ ಅಕ್ಕಿ ಹಿಟ್ಟನ್ನು ನಮ್ಮಲ್ಲಿನ ಒತ್ತುಶ್ಯಾವಿಗೆಯ ಮಣೆಯ ಪರಸೆಯ ಗಾತ್ರಕ್ಕೆ ತಕ್ಕಂತೆ ಉಂಡೆ ಮಾಡಬೇಕು. ಈ ಉಂಡೆಯನ್ನು ಗೋಸಂಪಿಗೆ(ದೇವ ಕಣಗಿಲೆ) ಅಥವಾ ಸಂಪಿಗೆ ಎಲೆಯಲ್ಲಿ ಮುಚ್ಚಿ ಇಡ್ಲಿ ಮಾಡುವ ಹಬೆ ಪಾತ್ರೆಯಲ್ಲಿ ಬೇಯಿಸಬೇಕು.
ಬೆಂದ ಅಕ್ಕಿಹಿಟ್ಟಿನ ಉಂಡೆಯನ್ನು ಒತ್ತು ಶ್ಯಾವಿಗೆ ಮಣೆಯ ಪರಸೆಯೊಳಗೆ ಹಾಕಿ ಒತ್ತಬೇಕು. ಆಗ ಪರಸೆಯ ಅಡಿಯ ಸಣ್ಣ ರಂಧ್ರಗಳಿಂದ ಹಿಟ್ಟು ಶ್ಯಾವಿಗೆಯಾಗಿ ಹೊರಬರುತ್ತದೆ. ಅಕ್ಕಿ ಹಿಟ್ಟಿನ ಉಂಡೆ ತಣ್ಣಗಾದಲ್ಲಿ ಬಹಳಷ್ಟು ಪರಿಶ್ರಮ ಹಾಕಿ ಒತ್ತಬೇಕಾಗುತ್ತದೆ. ಆದ್ದರಿಂದ ಉಂಡೆ ಬಿಸಿಬಿಸಿ ಇದ್ದಾಗಲೇ ಶ್ಯಾವಿಗೆಯನ್ನು ಒತ್ತಬೇಕು. ಅದಕ್ಕಾಗಿ ಅಕ್ಕಿಹಿಟ್ಟಿನ ಉಂಡೆಯ ಹಬೆ ಪಾತ್ರೆಯನ್ನು ಸಣ್ಣ ಉರಿಯಲ್ಲಿ ಒಲೆಯಲ್ಲಿ ಉರಿಸುತ್ತಿರಬೇಕು.
ವಿಶೇಷವೆಂದರೆ, ಶ್ಯಾವಿಗೆಯನ್ನು ಚಟ್ನಿಯಲ್ಲೂ, ಸಾರು ಸಾಂಬಾರು ಹಾಕಿಯೂ ತಿನ್ನಬಹುದು. ಕೋಳಿ, ಮಾಂಸದ ಸಾರನ್ನು ಜೊತೆಸೇರಿಸಿ ತಿನ್ನಬಹುದು. ಸಿಹಿಯಾದ ಕಾಯಿ ಹಾಲು ಹಾಕಿಯೂ ತಿನ್ನಲು ಯೋಗ್ಯ. ಆದ್ದರಿಂದ ಶ್ಯಾವಿಗೆ ಸಸ್ಯಹಾರಿ, ಮಾಂಸಹಾರಿ ಹಾಗೂ ಸಿಹಿಯ ಜೊತೆ ಸೇರಿಸಿ ತಿನ್ನಲು ಸೊಗಸಾದ ತಿಂಡಿ.
ಹಿಂದೆ ಹೇಳಿದಂತೆ ಶ್ಯಾವಿಗೆ ಬಹಳ ಪರಿಶ್ರಮ ಬೇಡುವ ತಿಂಡಿ. ಆದ್ದರಿಂದ ಮನೆಯೊಡತಿ ಒಬ್ಬಳೇ ಮಾಡುವಂಥದ್ದಲ್ಲ. ಆದ್ದರಿಂದ ಶ್ಯಾವಿಗೆ ತಯಾರಿಗೆ ಮನೆಯೊಡೆಯನ ಕೈಯೂ ಸೇರಬೇಕು. ಹಿಂದೆ ಶ್ಯಾವಿಗೆ ಬರೀ ತಿನಿಸು ಅಷ್ಟೇ ಆಗಿರಲಿಲ್ಲ. ಕೂಡು ಕುಟುಂಬ ಅಂದರೆ ಅವಿಭಕ್ತ ಕುಟುಂಬದ ನಾಲ್ಕು ಮನಸ್ಸು ಬೆಸೆಯಲು, ಬಾಂಧವ್ಯ ಬೆಳೆಯಲು ಕೊಂಡಿಯಾಗಿತ್ತು. ಶ್ಯಾವಿಗೆಯ ಅಕ್ಕಿ ಅರೆಯಬೇಕಾದರೆ ದೊಡ್ಡ ಒರಲುಗಲ್ಲನ್ನು ತಿರುವಲು ಎರಡು ಕೈ ಬೇಕಿತ್ತು. ಅವಿಭಕ್ತ ಕುಟುಂಬದ ಮಹಿಳೆಯರು ಅಕ್ಕಿ ಅರೆಯುವಾಗ ಎರಡು ಮನಸ್ಸು, ತಮ್ಮ ಮಾನಸಿಕ ತುಮುಲಗಳನ್ನು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಒಬ್ಬರ ಮಾತಿಗೆ ಮತ್ತೊಬ್ಬರು ಕಿವಿಯಾಗುತ್ತಿದ್ದರು. ಅದೇ ರೀತಿ ಒತ್ತು ಶ್ಯಾವಿಗೆಯನ್ನು ಮನೆಯ ಗಟ್ಟಿಮುಟ್ಟಾದ ಯುವಕರೇ ಆಗಬೇಕಿತ್ತು. ಪರಸೆಯಿಂದ ಹೊರಬರುವ ಶ್ಯಾವಿಗೆಯನ್ನು ಹಿಡಿಯಲು ಹೆಂಗಸರು ಬೇಕು.
ಆದರೆ ಇಂದು ಮನೆ ತುಂಬಾ ಜನವಿಲ್ಲ. ಒಬ್ಬರ ಮಾತಿಗೆ ಮತ್ತೊಬ್ಬರು ಕಿವಿಯಾಗುವ ಮನಸ್ಸೂ ಇಲ್ಲ. ಹಾಗೆಯೇ ಜನರ ತಿನ್ನುವ ವಿಧಾನವೂ ಬದಲಾಗಿದೆ. ಜೊತೆಗೆ ಪರಿಶ್ರಮ ಪಟ್ಟು ತಮ್ಮ ಆಹಾರವನ್ನು ತಾವೇ ಸಿದ್ಧಪಡಿಸುವಷ್ಟು ವ್ಯವಧಾನವೂ, ಪುರುಸೋತ್ತು ಇಲ್ಲ. ಆದ್ದರಿಂದ ಶ್ಯಾವಿಗೆ ಮಣೆಯು ಭೌತಿಕವಾಗಿ ಗಾತ್ರ, ಆಕಾರದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಇಂದು ಮಾರುಕಟ್ಟೆಯಲ್ಲಿ ರೆಡಿಮೆಡ್ ಶ್ಯಾವಿಗೆ ಸಿಗುವಷ್ಟು ಕಾಲ ಮುಂದುವರಿದಿದೆ. ಆದರೆ ಹಳೆಯ ಸಾಂಪ್ರದಾಯಿಕ ಶೈಲಿಯ ಶ್ಯಾವಿಗೆಯ ಗಾತ್ರ, ಆಕಾರ, ರುಚಿ ಮಾತ್ರ ಇಲ್ಲದೆ ಕೇವಲ ಅವಶೇಷವನ್ನಷ್ಟೇ ಕಾಣಲು ಸಾಧ್ಯ.
Dakshina Kannada,Karnataka
April 05, 2025 5:20 PM IST