Last Updated:
ದಕ್ಷಿಣ ಕನ್ನಡದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು ಕಸ ಎಸೆಯುವವರ ವಿರುದ್ಧ ಬ್ಯಾನರ್ ವಾರ್ ಆರಂಭಿಸಿದ್ದಾರೆ. ಕಟು ಶಬ್ದಗಳಿಂದ ಕೂಡಿದ ಬ್ಯಾನರ್ ಗಳು ಕಸ ಎಸೆಯುವವರ ಮೇಲೆ ಪ್ರಭಾವ ಬೀರಿವೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಕಸದ (Garbage) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು (State Government) ಕಸ ವಿಲೇವಾರಿ ಮಾಡಲೆಂದೇ ಆಯಾ ಗ್ರಾಮ ಪಂಚಾಯತ್ ಮತ್ತು ಇತರ ಸ್ಥಳೀಯ ಆಡಳಿತಗಳಿಗೆ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಕೆಲವು ಗ್ರಾಮ ಪಂಚಾಯತ್ ಗಳು ಪ್ರಾಮಾಣಿಕ ನೆಲೆಯಲ್ಲಿ ಪ್ರಯತ್ನಿಸುತ್ತಿದೆ. ಈ ಕಸಗಳನ್ನು ರಸ್ತೆ ಬದಿಯಲ್ಲೇ ಎಸೆಯುವ ವಿಘ್ನ ಸಂತೋಷಿಗಳೂ ಕೂಡ ಜಿಲ್ಲೆಯಲ್ಲಿ ಸಾಕಷ್ಟು ಜನರಿದ್ದಾರೆ. ಈ ರೀತಿಯ ವ್ಯಕ್ತಿಗಳು ರಸ್ತೆ ಬದಿಗೆ ಕಸ ಎಸೆಯಬೇಡಿ ಎಂದಲ್ಲಿ ಎರಡು ಪಟ್ಟು ಜಾಸ್ತಿ ಕಸ ಎಸೆಯುತ್ತಾರೆ. ಸಿಸಿ ಕ್ಯಾಮಾರಾ ಅಳವಡಿಸಿದಲ್ಲಿ ಅದನ್ನು ಹಾಳುಗೆಡವಿ ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆಯುತ್ತಾರೆ.
ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ಇಂತಹ ವ್ಯಕ್ತಿಗಳು ಕಸ ಎಸೆಯುವುದನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಉಪಟಳದಿಂದ ಬೇಸತ್ತ ಸಾರ್ವಜನಿಕರು ಇದೀಗ ಈ ವ್ಯಕ್ತಿಗಳ ವಿರುದ್ಧ ಬ್ಯಾನರ್ ವಾರ್ ಆರಂಭಿಸಿದ್ದಾರೆ. ಸ್ಥಳೀಯ ಆಡಳಿತಗಳು ರಸ್ತೆ ಬದಿಯಲ್ಲಿ ಕಸ ಎಸೆಯಬೇಡಿ ಎಂದು ಸೌಮ್ಯ ರೀತಿಯ ಬ್ಯಾನರ್ ಹಾಕಿದರೆ, ಕೆಲವು ಕಡೆಗಳಲ್ಲಿ ಸ್ಥಳೀಯರು ಅತ್ಯಂತ ಖಾರವಾಗಿಯೇ ಬ್ಯಾನರ್ ಅಳವಡಿಸಲು ಆರಂಭಿಸಿದ್ದಾರೆ.
ನೇರವಾಗಿ ಕಸ ಎಸೆಯುವವನ ಹೃದಯಕ್ಕೇ ತಾಗುವಂತಹ ಕೆಲವು ಶಬ್ದಗಳನ್ನು ಈ ಬ್ಯಾನರ್ ನಲ್ಲಿ ಅಳವಡಿಸುವ ಟ್ರೆಂಡ್ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಇದೀಗ ಆರಂಭಗೊಂಡ ಈ ಬ್ಯಾನರ್ ವಾರ್ ಎಷ್ಟು ಪ್ರಭಾವಶಾಲಿಯಾಗಿ ಮೂಡಿಬಂದಿದೆ ಎಂದರೆ ಇಂತಹ ಬ್ಯಾನರ್ ಹಾಕಿದ ಕಡೆಗಳಲ್ಲಿ ಕಸ ಎಸೆಯುವ ಪ್ರಕ್ರಿಯೆ ಭಾಗಶಃ ಯಶಸ್ವಿಯಾಗಿದೆ. ಬ್ಯಾನರ್ ನೋಡಿದ ಕಸ ಎಸೆಯುವ ವ್ಯಕ್ತಿಗೆ ಚೂರಿಯಿಂದ ಇರಿಯುವಂತಹ ಶಬ್ದಗಳು ಈ ಬ್ಯಾನರ್ ನಲ್ಲಿ ಇರುವ ಕಾರಣದಿಂದಲೇ ಕಸ ಎಸೆಯುವ ವ್ಯಕ್ತಿಗಳು ತಬ್ಬಿಬ್ಬಾಗುತ್ತಿದ್ದಾರೆ.
Dakshina Kannada,Karnataka
July 04, 2025 3:17 PM IST