Last Updated:
ಮಂಗಳೂರು ಸಂಜೀವಿನಿ ಆಯುರ್ವೇದಿಕ್ ಕ್ಲಿನಿಕ್ನಲ್ಲಿ ಡಾ.ಮೀರಾ ರಾಡಿಷ್ ಮೈಕ್ರೋಗ್ರೀನ್ಗಳನ್ನು ಬೆಳೆಸಿ, ಕ್ಯಾನ್ಸರ್, ಫ್ಯಾಟಿ ಲಿವರ್, ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಪೌಷ್ಟಿಕ ಆಹಾರವಾಗಿ ನೀಡುತ್ತಿದ್ದಾರೆ.
ದಕ್ಷಿಣ ಕನ್ನಡ: ಮೈಕ್ರೋಗ್ರೀನ್(Microgreen) ಅಂದರೆ ಏನಪ್ಪ ಅಂಥ ನೀವೊಮ್ಮೆ ಯೋಚಿಸಬಹುದು? ರೋಗತಡೆಗೆ ರಾಮಬಾಣ ಎಂದಾಗ ಮತ್ತೂ ಸ್ವಲ್ಪ ಚಿಂತಿಸಬಹುದು. ಅದಕ್ಕಾಗಿಯೇ ನಾವು ನಿಮ್ಮನ್ನು ಮೈಕ್ರೋಗ್ರೀನ್ ಬೆಳೆಯುವ ಸ್ಥಳಕ್ಕೆ ಕರೆದೊಯ್ದು, ಆಯುರ್ವೇದಿಕ್ ತಜ್ಞೆಯ(Ayurvedic Expert) ಮಾತಿನಿಂದಲೇ ಅದರ ಬಳಕೆ, ಉಪಯೋಗವನ್ನು ತಿಳಿಸಿಕೊಡುತ್ತೇವೆ.
ಹೌದು… ಇದು ಮಂಗಳೂರು ನಗರದ ಮಲ್ಲಿಕಟ್ಟೆಯ ಲೋಬ್ ಲೇನ್ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಕ್ಲಿನಿಕ್ನ ಒಂದು ಕೋಣೆ. ಆಯುರ್ವೇದಿಕ್ ವೈದ್ಯೆ ಡಾ.ಮೀರಾ ಈ ಕೋಣೆಯಲ್ಲಿ ಮೈಕ್ರೋಗ್ರೀನ್ ಅನ್ನು ಬೆಳೆಸುತ್ತಿದ್ದಾರೆ. ಇವರು ರಾಡಿಷ್ ಪಿಂಕ್, ರಾಡಿಷ್ ವೈಟ್, ಬೊಕ್ಚಾಯ್, ಮಸ್ಟರ್ಡ್ ಗ್ರೀನ್ ಮತ್ತು ಬ್ರೊಕೊಲಿ ಎಂಬ ಐದು ಮೈಕ್ರೋಗ್ರೀನ್ಗಳನ್ನು ಬೆಳೆಸುತ್ತಿದ್ದಾರೆ. ಈ ಪೌಷ್ಟಿಕ ಗಿಡಮೂಲಿಕೆಗಳನ್ನು ತಮ್ಮ ಕ್ಲಿನಿಕ್ಗೆ ಬರುವ ರೋಗಿಗಳಿಗೆ ಆಹಾರದ ಭಾಗವಾಗಿ ನೀಡುತ್ತಿದ್ದಾರೆ.
ಕ್ಯಾನ್ಸರ್ ಕೋಗಕ್ಕೆ ಪರಿಹಾರ ಕಂಡುಕೊಳ್ಳಲು ಪೂರಕ ಆಹಾರವಾಗಿ ಏನಾದರೂ ಮಾಡಬೇಕೆಂದು ಡಾ.ಮೀರಾ ಯೋಚಿಸುತ್ತಿದ್ದಾಗ ಅವರಿಗೆ ಮೈಕ್ರೋಗ್ರೀನ್ಗಳ ಬಗ್ಗೆ ಮಾಹಿತಿ ದೊರಕಿತ್ತು. ಕ್ಯಾನ್ಸರ್, ಫ್ಯಾಟಿ ಲಿವರ್ನಿಂದ ಕೊಲೆಸ್ಟ್ರಾಲ್ವರೆಗಿನ ಸಮಸ್ಯೆಗಳನ್ನು ನಿಯಂತ್ರಿಸಲು ಮೈಕ್ರೋಗ್ರೀನ್ಗಳು ಉಪಯುಕ್ತವೆಂದು ತಿಳಿದುಬಂತು. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ರುಚಿಕರವಲ್ಲದಿದ್ದರೂ ಆರೋಗ್ಯಕರ ಆಹಾರ. ಶ್ರೀಮಂತರು ಮಾತ್ರ ಸೇವಿಸುತ್ತಿದ್ದ ಇದರ ಲಾಭ ಜನಸಾಮಾನ್ಯರಿಗೂ ದೊರೆಕಬೇಕೆಂದು ಆರಂಭಿಸಿದೆ. ಮೈಕ್ರೋಗ್ರೀನ್ಗಳ ಮೂಲಕ ಆಯುರ್ವೇದದ ಸಾಂಪ್ರದಾಯಿಕ ತತ್ವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಿ, ಕ್ಯಾನ್ಸರ್, ಫ್ಯಾಟಿ ಲಿವರ್ ಮತ್ತು ಕೊಲೆಸ್ಟ್ರಾಲ್ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಡಾ.ಮೀರಾ.
ಮೈಕ್ರೋಗ್ರೀನ್ಗಳೆಂದರೆ ಎಳೆಯ ಗಿಡಮೂಲಿಕೆಗಳು. ಇದನ್ನು ಮೊಳಕೆಯಿಂದ 7–21 ದಿನಗಳೊಳಗೆ, 1–3 ಇಂಚು ಎತ್ತರಕ್ಕೆ ಬೆಳೆದಾಗ ಕೊಯ್ಯಲಾಗುತ್ತದೆ. ಕ್ಲಿನಿಕ್ ಕೋಣೆಯ ಸಣ್ಣ ಸ್ಥಳಗಳಲ್ಲಿ ಬೆಳೆಸಲು ಬೇಕಾದ ವಾತವರಣ ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಮೈಕ್ರೋಗ್ರೀನ್ಗಳು ಮೊಳಕೆಕಾಳಿಗಿಂತ ಭಿನ್ನವಾಗಿರುತ್ತವೆ. ಇವುಗಳನ್ನು ಸಲಾಡ್ಗಳಂತೆ, ಆಹಾರದ ಅಲಂಕಾರಕ್ಕೆ ಬಳಸಿ ಸುಲಭವಾಗಿ ಸೇವಿಸಬಹುದು. ಮೈಕ್ರೋಗ್ರೀನ್ಗಳು ಪಕ್ವಗೊಂಡ ಗಿಡಗಳಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತವೆ ಎಂದು ಡಾ.ಮೀರಾ ಹೇಳುತ್ತಾರೆ.
Dakshina Kannada,Karnataka
May 26, 2025 11:40 AM IST