Last Updated:
ಮೊದಲಿಗೆ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ, ಕೊನೆಗೆ ಬಂದ ಅವಕಾಶ ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದರು.
ದಕ್ಷಿಣ ಕನ್ನಡ: ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ(Puttur Land Development Bank) ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು(College Student) ಬ್ಯಾಂಕ್ ನಿರ್ದೇಶಕಿಯಾಗಿ(Bank Director) ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಈಕೆ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ(Subramanya KSS College) ಅಂತಿಮ ಬಿಬಿಎ ವಿದ್ಯಾರ್ಥಿನಿ. ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಅವರು ಇಲ್ಲಿ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ.
ಕೃಷಿ ಪೂರಕ ವ್ಯವಸ್ಥೆಯ ಈ ಸಹಕಾರಿ ಬ್ಯಾಂಕಿನ ಮೆಟ್ಟಲು ಏರಿದ ಮೊದಲ ಕಾಲೇಜು ವಿದ್ಯಾರ್ಥಿನಿ ಸ್ವಾತಿ ರೈ ಆರ್ತಿಲ. ಕಡಬ ತಾಲೂಕಿನ ಆರ್ತಿಲ ದಿವಂಗತ ಆನಂದ ರೈ ಮತ್ತು ತಾರಾ ರೈ ಅವರ ಪುತ್ರಿಯಾದ ಸ್ವಾತಿ ರೈ ಅವರಿಗೆ ಈ ಅವಕಾಶ ಬಂದಿರುವುದು ಈ ಕುಟುಂಬಕ್ಕೆ ಅತ್ಯಂತ ಸಂತಸ ತಂದಿದೆ. ತಾಯಿ ಮತ್ತು ಅಣ್ಣ ಯತೀಶ್ ರೈ ಜತೆ ವಾಸಿಸುತ್ತಿರುವ ಸ್ವಾತಿ ರೈ ಅವರಿಗೆ ಈ ಅವಕಾಶ ಅಚಾನಕ್ ಆಗಿ ಬಂದಿದೆ.
ಇದನ್ನೂ ಓದಿ: Chikkamagaluru: ಕಾಫಿನಾಡಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಈ ಅವಕಾಶ ಮೊದಲಿಗೆ ಇವರ ತಾಯಿ ತಾರಾ ರೈ ಅವರಿಗೆ ಬಂದಿತ್ತು. ಆದರೆ ಅವರು ತಮ್ಮದೇ ಆದ ಕಾರಣಗಳಿಂದ ಬೇಡ ಎಂದಿದ್ದರು. ಸ್ವಾತಿಯ ಅಣ್ಣ ದೊಡ್ಡಪ್ಪನ ಮಗ ಅಜಿತ್ ರೈ ಅವರು ನೀನೆ ಯಾಕೆ ಈ ಅವಕಾಶ ಬಳಕೆ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಇದರ ಜತೆಗೆ ಚಿಕ್ಕಪ್ಪ ಚೇತನ್ ರೈ, ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್,ಕೆ ಇವರೂ ಮಾನಸಿಕ ಧೈರ್ಯ ತುಂಬಿದರು.
ಮೊದಲಿಗೆ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ, ಕೊನೆಗೆ ಬಂದ ಅವಕಾಶ ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದರು. ಕೃಷಿಕರ ಪರವಾಗಿರುವ ಸಹಕಾರಿ ಸಂಸ್ಥೆಯೊಂದರ ನಿರ್ದೇಶಕಿ ಆಗಿ ಆಯ್ಕೆಯಾಗುವ ಮೂಲಕ ತನ್ನಿಂದಾದ ನೆರವನ್ನು ಕೃಷಿಕರಿಗೆ ಕೊಡಿಸಬಹುದಲ್ವಾ ಎಂಬ ಚಿಂತನೆ ಸ್ವಾತಿಗೆ ಹುಟ್ಟಿಕೊಂಡದ್ದು ಆಕೆಯ ಆಯ್ಕೆಗೆ ನಾಂದಿಯಾಯಿತು.
“ಮೊದಲಿಗೆ ನನಗೆ ಇದೆಲ್ಲಾ ಬೇಡ ಅಂತ ಕಂಡಿತ್ತು. ಕಾಲೇಜು ಇರುವಾಗ ಸಮಸ್ಯೆಯಾಗುತ್ತದೆ ಎಂದುಕೊಂಡೆ. ಆದರೆ ನಂತರ ಬಂದ ಅವಕಾಶ ಬಿಡುವುದು ಬೇಡ. ಇದೊಂದು ಸಂದರ್ಭ ನೋಡೋಣ. ತಿಂಗಳಿಗೆ ಒಮ್ಮೆ ಮೀಟಿಂಗ್ ಇರುತ್ತದೆ. ತೊಂದರೆ ಇಲ್ಲ ಎಂದುಕೊಂಡು ಈ ಅವಕಾಶವನ್ನು ಬಳಿಸಿಕೊಂಡೆ. ಸಾಧ್ಯವಾದಷ್ಟು ರೈತರಿಗೆ ಸಹಾಯ ಮಾಡುವ ಅವಕಾಶ ಬಂದಿದೆ ಎಂದುಕೊಂಡು ಒಪ್ಪಿಗೆ ಕೊಟ್ಟೆ. ಈಗ ಆಯ್ಕೆಯಾಗಿದೆ. ತುಂಬಾ ಖುಷಿಯಾಗಿದೆ” ಎನ್ನುತ್ತಾರೆ ಸ್ವಾತಿ ರೈ ಆರ್ತಿಲ.
Dakshina Kannada,Karnataka
January 27, 2025 7:23 AM IST