Last Updated:
17 ವರ್ಷಗಳ ಹಿಂದೆ ಮುಲ್ಕಿಯಲ್ಲಿ ನಡೆದ ಕಂಬಳದಲ್ಲಿ ಜೂನಿಯರ್ ವಿಭಾಗದಲ್ಲಿ ಮೊದಲ ಬಾರಿಗೆ ಕಂಬಳದ ಕರೆಗೆ ಇಳಿದ ಕುಟ್ಟಿ ಮೊದಲ ಓಟದಲ್ಲೇ ಬಹುಮಾನದ ನಾಗಾಲೋಟವನ್ನು ಆರಂಭಿಸಿತು. ಇದಾದ ಬಳಿಕ ಸತತ ಎರಡು ವರ್ಷಗಳ ಕಾಲ ಜೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕುಟ್ಟಿ ಪಡೆದುಕೊಂಡಿತ್ತು.
ದಕ್ಷಿಣ ಕನ್ನಡ: ಕಂಬಳ ಲೋಕದ ಲೆಜೆಂಡ್ ಕೋಣ “ಚಾಂಪಿಯನ್ ಕುಟ್ಟಿ”(Champion Kutty) ವಿದಾಯ ಹೇಳಿದ್ದಾನೆ. ಕಳೆದ 17 ವರ್ಷಗಳಿಂದ ಕಂಬಳ ಕ್ಷೇತ್ರವನ್ನು(Kambala) ಆಳಿದ ಸೋಲಿಲ್ಲದ ಸರದಾರ ಅಂತಾನೇ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದ ನಂದಳಿಕೆ ಶ್ರೀಕಾಂತ ಭಟ್ ಅವರ ನೆಚ್ಚಿನ ಕೋಣ(Buffalo) ಚಾಂಪಿಯನ್ ಕುಟ್ಟಿ ಕಂಬಳ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾನೆ. ಕಂಬಳದ ಕರೆಯಲ್ಲಿ ಗಾಂಭೀರ್ಯ ಓಟದ ಮೂಲಕ ಕಂಬಳ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ಕುಟ್ಟಿ ಕೊನೆಯ ಓಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಗೌರವದ ವಿದಾಯ(Farewell) ಹಾಡಿದ್ದಾನೆ.
17 ವರ್ಷಗಳ ಹಿಂದೆ ಮುಲ್ಕಿಯಲ್ಲಿ ನಡೆದ ಕಂಬಳದಲ್ಲಿ ಜೂನಿಯರ್ ವಿಭಾಗದಲ್ಲಿ ಮೊದಲ ಬಾರಿಗೆ ಕಂಬಳದ ಕರೆಗೆ ಇಳಿದ ಕುಟ್ಟಿ ಮೊದಲ ಓಟದಲ್ಲೇ ಬಹುಮಾನದ ನಾಗಾಲೋಟವನ್ನು ಆರಂಭಿಸಿತು. ಇದಾದ ಬಳಿಕ ಸತತ ಎರಡು ವರ್ಷಗಳ ಕಾಲ ಜೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕುಟ್ಟಿ ಪಡೆದುಕೊಂಡಿತ್ತು. ಬಾರಿ ಕೋಪ ಸ್ವಭಾವದ ಕುಟ್ಟಿ ಕೋಣ ಅಭಿಮಾನಿಗಳಿಂದಲೇ ಚಾಂಪಿಯನ್ ಕುಟ್ಟಿ ಅಂತ ಬಿರುದನ್ನ ಪಡೆದುಕೊಂಡಿತ್ತು.. ಭಾರೀ ಕೋಪಿಷ್ಠ ಕೋಣವಾದ ಕುಟ್ಟಿಯನ್ನು ಹಿಡಿಯೋದು ಮತ್ತು ಅದನ್ನ ನಿಯಂತ್ರಣಕ್ಕೆ ತರೋದು ಐದು, ಹತ್ತು ಮಂದಿ ಜನರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮೊದಲು ಬಾರ್ಕೂರು ಶಾಂತರಾಮ ಶೆಟ್ಟಿ ಅವರ ಬಳಿ ಇದ್ದ ಕೋಣ ನಂದಳಿಕೆ ಶ್ರೀಕಾಂತ ಭಟ್ ಅವರ ಕೊಟ್ಟಿಗೆಯನ್ನು ಸೇರಿತ್ತು. ನಂದಳಿಕೆ ತಂಡಕ್ಕೆ ಬಂದ ಬಳಿಕ ಕುಟ್ಟಿ ಹಿಂತಿರುಗಿ ನೋಡಲೇ ಇಲ್ಲ. ಹಲವಾರು ಬಹುಮಾನವನ್ನು ಪಡೆದ ಬಳಿಕ ಚಾಂಪಿಯನ್ ಕುಟ್ಟಿಯಾಗಿ ಬದಲಾಯಿತು.
ಇದನ್ನೂ ಓದಿ: Dakshina Kannada: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಈ ಬಾರಿ ಮುತ್ತು ಬೆಳೆದ ಕೆರೆಯ ಪಕ್ಕದಲ್ಲೇ ಅನ್ನದಾನ!
ಯಾವುದೇ ಕೋಣಗಳ ಜೊತೆಗೆ ಕುಟ್ಟಿಯನ್ನ ಕಟ್ಟಿ ಓಡಿಸಿದರೂ ಬಹುಮಾನವನ್ನು ತಂದು ಕೊಡುವಂತಹ ಚಾಕಚಕ್ಯತೆ ಕುಟ್ಟಿಗೆ ಇದೆ. ಕುಟ್ಟಿಯನ್ನು ಓಡಿಸಿದ ನಾಲ್ವರು ಓಟಗಾರರು ಕೂಡ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸತತ 17 ವರ್ಷಗಳ ಕಾಲ ಕಂಬಳ ಕ್ಷೇತ್ರದ ಅನಭಿಷಕ್ತ ದೊರೆಯಾಗಿ ಮೆರೆದ ಚಾಂಪಿಯನ್ ಕುಟ್ಟಿ ತನ್ನ ಕೊನೆಯ ಓಟದಲ್ಲೂ ಚಿನ್ನದ ಪದಕವನ್ನು ಗಳಿಸಿ ರಾಜ ಮರ್ಯಾದೆಯೊಂದಿಗೆ ನಿವೃತ್ತಿಯಾಗಿದ್ದಾನೆ.
ಉಪ್ಪಿನಂಗಡಿಯಲ್ಲಿ ನಡೆದ ಹಗ್ಗ ಹಿರಿಯ ವಿಭಾಗದಲ್ಲಿ ಭಾಗವಹಿಸಿದ ಚಾಂಪಿಯನ್ ಕುಟ್ಟಿ ತನ್ನ ಕೊನೆಯ ಓಟದಲ್ಲೂ ಚಿನ್ನದ ಪದಕವನ್ನು ಗೆದ್ದಿದ್ದಾನೆ. ಕೋಣದ ಮಾಲಕ ನಂದಳಿಕೆ ಶ್ರೀಕಾಂತ ಭಟ್ ಅವರು ಚಾಂಪಿಯನ್ ಕುಟ್ಟಿಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಅನಾರೋಗ್ಯದಿಂದ ಮತ್ತು ಸರಿಯಾದ ಜೊತೆ ಇಲ್ಲದೆ ಪದಕವನ್ನು ಕಾಣದ ಕುಟ್ಟಿ ತನ್ನ ಕೊನೆಯ ಓಟದಲ್ಲಿ ಚಿನ್ನವನ್ನು ಗೆದ್ದಿರೋದು ಅಸಂಖ್ಯಾತ ಅಭಿಮಾನಿಗಳಿಗೆ ಖುಷಿ ತಂದಿದೆ.
ತನ್ನ ನೆಚ್ಚಿನ ಕೋಣ ಚಿನ್ನವನ್ನು ಗೆದ್ದ ಖುಷಿಯಲ್ಲಿ ಕಂಬಳ ಕೋಣದ ಮಾಲಕ ನಂದಳಿಕೆ ಶ್ರೀಕಾಂತ ಭಟ್ಟವರು ಸುಮಾರು ಮೂರು ಕ್ವಿಂಟಾಲ್ ಕಲ್ಲಂಗಡಿ ಹಣ್ಣನ್ನು ಕಂಬಳದಲ್ಲಿ ನಡೆದಿದ್ದ ಎಲ್ಲಾ ಜನರಿಗೆ ನೀಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.
Dakshina Kannada,Karnataka
March 25, 2025 5:05 PM IST