Last Updated:
ಗಿರೀಶ್ ಭಾರಧ್ವಜ್, ದಕ್ಷಿಣ ಕನ್ನಡದ ಸುಳ್ಯದ ನಿವಾಸಿ, 160 ತೂಗು ಸೇತುವೆಗಳನ್ನು ನಿರ್ಮಿಸಿ, ಹಳ್ಳಿಗಳ ಸಂಪರ್ಕ ಕಲ್ಪಿಸಿದ ಸಾಧಕ. ತೂಗುಸೇತುವೆ ಸರದಾರ ಎಂದೇ ಖ್ಯಾತಿ ಪಡೆದ ಅವರು, ವಯಸ್ಸಿನ ಕಾರಣ ನಿವೃತ್ತಿ ಹೊಂದಿದ್ದಾರೆ.
ದಕ್ಷಿಣ ಕನ್ನಡದ ದಟ್ಟ ಕಾಡು, ಭೋರ್ಗರೆವ ನೀರು, ಮುರಿದ ಸೇತುವೆ (Bridge)ಅದನ್ನು ಸರಿಮಾಡೋ ಹೀರೋ . ಇದ್ಯಾವುದೋ ಚಿಗುರಿದ ಕನಸು ಕಾದಂಬರಿಯ ಅಥವಾ ಸಿನೆಮಾದ ಕಥೆ ಅಲ್ಲ. ಇವರು ದೇಶಾದ್ಯಂತ ಹೇರಳ ತೂಗು ಸೇತುವೆ ನಿರ್ಮಿಸಿದ ಸಾಧಕರಾದ ಗಿರೀಶ್ ಭಾರದ್ವಜ್. ತೂಗುಸೇತುವೆಯ ಸರದಾರ ಎಂದೇ ಖ್ಯಾತಿವೆತ್ತ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯದ ನಿವಾಸಿ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಗಿರೀಶ್ ಭಾರಧ್ವಜ್ ತಮ್ಮ ತೂಗುಸೇತುವೆ ನಿರ್ಮಾಣದ ಜವಾಬ್ದಾರಿಯಿಂದ ನಿವೃತ್ತರಾಗಿದ್ದಾರೆ. ದೇಶದಾದ್ಯಂತ ಸುಮಾರು 160 ತೂಗುಸೇತುವೆಗಳನ್ನು ನಿರ್ಮಿಸಿ ಹಲವು ಹಳ್ಳಿಹಳ್ಳಿಗಳನ್ನು ಬೆಸೆದ ಕೀರ್ತಿಗೆ ಪಾತ್ರರಾಗಿರುವ ಗಿರೀಶ್ ಭಾರಧ್ವಜ್ ತನ್ನ ವಯಸ್ಸಿನ ಕಾರಣಕ್ಕಾಗಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಗಿರೀಶ್ ಭಾರಧ್ವಜ್ (Girish Bhardwaj) ತಾವೇ ಸ್ವತಹ ಸುಮಾರು 130 ತೂಗು ಸೇತುವೆಯ ಜವಾಬ್ದಾರಿ ಹೊತ್ತು ನಿರ್ಮಿಸಿದ್ದು, ದೇಶದ ಹಳ್ಳಿ (Village) ಹಳ್ಳಿಯಲ್ಲೂ ಇಂದಿಗೂ ಇವರು ನಿರ್ಮಿಸಿರುವ ತೂಗು ಸೇತುವೆಗಳು ಇವರ ಹೆಸರನ್ನ ಹೇಳುತ್ತಿವೆ.
ಪ್ರವಾಸೋದ್ಯಮ, ಮೂಲಸೌಕರ್ಯ ಇಲಾಖೆ, ಹಲವು ಅಭಿವೃದ್ಧಿ ಪ್ರಾಧಿಕಾರಗಳ ಮುಖಾಂತರ ಈ ತೂಗುಸೇತುವೆಗಳ ನಿರ್ಮಾಣವನ್ನು ಗಿರೀಶ್ ಭಾರಧ್ವಜ್ ಮಾಡಿದ್ದಾರೆ. ಅತ್ಯಂತ ಹೆಚ್ಚಿನ ಸಂಖ್ಯೆಯ ಕುಗ್ರಾಮಗಳನ್ನೇ ಹೊಂದಿರುವ ಭಾರಧ್ವಜರ ಸುಳ್ಯದಲ್ಲೇ ಅವರು ಮೊದಲ ತೂಗುಸೇತುವೆಯನ್ನು ನಿರ್ಮಾಣ ಮಾಡಿದ್ದರು. ಹಳ್ಳಿಗಾಡಿನಲ್ಲಿರುವ ಜನರಿಗೆ ಮೂಲಸೌಕರ್ಯವೆನ್ನೋದೇ ಕನಸಿನ ಮಾತು. ಅದರಲ್ಲೂ ಗ್ರಾಮ ಗ್ರಾಮಗಳ ಮಧ್ಯೆ ಹರಿಯುವ ಹಳ್ಳ-ತೋಡುಗಳಿದ್ದಲ್ಲಿ, ಅಂಥ ಗ್ರಾಮಗಳು ಮಳೆಗಾಲದಲ್ಲಿ ಅಕ್ಷರಶಃ ದ್ವೀಪವಾಗಿ ಬದಲಾಗುತ್ತದೆ. ಇಂಥ ಕಡೆಗಳಲ್ಲಿ ಶಾಶ್ವತ ಸೇತುವೆ ನಿರ್ಮಾಣವು ಕಷ್ಟಸಾಧ್ಯವಾಗುವ ಕಾರಣಕ್ಕೆ ತೂಗುಸೇತುವೆಗಳೇ ಗ್ರಾಮದ ಜನರಿಗೆ ನೆರವಾಗೋದು. ತನ್ನದೇ ತಂತ್ರಜ್ಞಾನವನ್ನು ಬಳಸಿಕೊಂಡು ಗಿರೀಶ್ ಭಾರಧ್ವಜ್ ತೂಗುಸೇತುವೆಯನ್ನು ಪರಿಚಯಿಸಿದ್ದರು.
ಸುಳ್ಯದ ಪಯಸ್ವಿನಿ ನದಿಗೆ ಇವರು ಕಟ್ಟಿದ ತೂಗುಸೇತುವೆ ಹಲವು ಗ್ರಾಮಗಳನ್ನು ಸುಳ್ಯ ನಗರಕ್ಕೆ ತೆರೆದುಕೊಳ್ಳುವಂತೆ ಮಾಡಿತ್ತು. ಆ ಬಳಿಕ ಹಲವು ಸರಕಾರದ ಅನುದಾನಗಳನ್ನು ಬಳಸಿಕೊಂಡು ದೇಶದಾದ್ಯಂತ ತೂಗುಸೇತುವೆ ಕಾಮಗಾರಿ ಕೈಗೆತ್ತಿಕೊಂಡ ಭಾರಧ್ವಜ ಹಲವು ಹಳ್ಳಿಗಳ ಸಂಪರ್ಕ ಸೇತುವೆಯಾದವರು. ಈ ಕಾರಣಕ್ಕಾಗಿಯೇ ಇವರನ್ನು “ತೂಗುಸೇತುವೆ ಸರದಾರ” ಎಂದೇ ಗುರುತಿಸಿಕೊಳ್ಳಲಾಯಿತು.
33 ತೆಲಂಗಾಣ, 30 ಕೇರಳ, 3 ಒರಿಸ್ಸಾ, 16 ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲಾ ಭಾಗದಲ್ಲಿ ಭಾರಧ್ವಜ್ ತೂಗುಸೇತುವೆಯನ್ನು ಮಾಡಿದ್ದಾರೆ. 130 ತೂಗುಸೇತುವೆಗಳು ಸ್ವತಃ ಗಿರೀಶ್ ಭಾರಧ್ವಜ್ ನೇತೃತ್ವದಲ್ಲಿ ತೂಗುಸೇತುವೆ ನಿರ್ಮಾಣಗೊಂಡರೆ ಉಳಿದ 30 ತೂಗುಸೇತುವೆಗಳನ್ನು ಅವರ ಮಗ ಮುಂದುವರಿಸಿದ್ದಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೂಗುಸೇತುವೆ ನಿರ್ಮಿಸುವಂತೆ ಯಾವುದೇ ಬೇಡಿಕೆಗಳು ಬರುತ್ತಿಲ್ಲ. ಆಯಾಯಾ ರಾಜ್ಯಗಳಲ್ಲಿ ಸರಕಾರಗಳು ಬದಲಾದ ಕಾರಣಕ್ಕಾಗಿ ತೂಗುಸೇತುವೆಯಂತಹ ಅಭಿವೃದ್ಧಿ ಕಾಮಗಾರಿಗಳೂ ನಿಂತು ಹೋಗಿವೆ.
ತೂಗುಸೇತುವೆ ಯೋಜನೆಯನ್ನು ಗಿರೀಶ್ ಭಾರಧ್ವಜ್ ಯಾವುದೇ ಲಾಭದ ಉದ್ಧೇಶದಿಂದ ಆರಂಭಿಸಿದವರಲ್ಲ. ಹಳ್ಳಿಯ ಜನ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಈ ತೂಗುಸೇತುವೆ ನಿರ್ಮಿಸಲು ಮುಂದಾಗಿದ್ದೆ. ಈ ಯೋಜನೆಯಲ್ಲಿ ನನಗೆ ಯಾವುದೇ ಲಾಭವೂ ಇಲ್ಲ. ಅಲ್ಲದೆ ನಮ್ಮ ವರ್ಕ್ ಶಾಪ್ ನ ಸಿಬ್ಬಂದಿಗಳಿಗೂ ಉದ್ಯೋಗವೂ ಆಗುತ್ತದೆ ಎನ್ನುವ ಕಾರಣಕ್ಕಾಗಿ ತೂಗುಸೇತುವೆ ನಿರ್ಮಾಣಕ್ಕಾಗಿ ದೇಶದೆಲ್ಲೆಡೆ ಹೊರಟಿದ್ದೆ. ಇತ್ತೀಚಿನ ದಿನಗಳಲ್ಲಿ ತೂಗುಸೇತುವೆ ನಿರ್ಮಾಣದ ಬೇಡಿಕೆ ನಿಂತಿದೆ ಎನ್ನುತ್ತಾರೆ ಗಿರೀಶ್ ಭಾರಧ್ವಜ್.
Dakshina Kannada,Karnataka
July 08, 2025 12:08 PM IST