Last Updated:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಲ್ಲಿದ್ದ 800 ವರ್ಷ ಇತಿಹಾಸದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಇಂದು ದೇಶದ ಎಲ್ಲೂ ಇಲ್ಲದ ನವಿಲು ಬಸದಿಯಾಗಿ ಬದಲಾಗಿದೆ.
ದಕ್ಷಿಣ ಕನ್ನಡ: ಯಾವ ರೀತಿ ಅಯೋಧ್ಯೆಯ ರಾಮಮಂದಿರಕ್ಕೆ ಸರಿಸಾಟಿಯಾಗಿ ದೇಶದಲ್ಲಿ ಬೇರೆ ಮಂದಿರವಿಲ್ಲವೋ, ಅದೇ ರೀತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದಲ್ಲಿರುವ ಈ ಜೈನ ಬಸದಿಗೆ ಸರಿಸಾಟಿಯಾದ ಬಸದಿ ದೇಶದಲ್ಲೇ ಇಲ್ಲ. ಮೇಲ್ನೋಟಕ್ಕೆ ಈ ಬಸದಿಯ ಮೇಲೆ ನವಿಲೊಂದು ತನ್ನ ಗರಿಗಳನ್ನು ಬಿಡಿಸಿ ಮಲಗಿದಂತೆ ಈ ಬಸದಿ ಕಂಡು ಬರುತ್ತದೆ. ಇದೇ ಕಾರಣಕ್ಕೆ ಬಸದಿಗೆ ನವಿಲು ಬಸದಿ ಎಂದೇ ಕರೆಯಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಲ್ಲಿದ್ದ 800 ವರ್ಷ ಇತಿಹಾಸದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಇಂದು ದೇಶದ ಎಲ್ಲೂ ಇಲ್ಲದ ನವಿಲು ಬಸದಿಯಾಗಿ ಬದಲಾಗಿದೆ. 800 ವರ್ಷಗಳ ಇತಿಹಾಸವಿರುವ ಈ ಜೈನ ಬಸದಿ ವಿಟ್ಲ ಪೇಟೆಯ ಮಧ್ಯೆ ಇದ್ದು, ಜೈನಧರ್ಮೀಯರಿಂದ ಆರಾಧನೆಗೊಳ್ಳುತ್ತಿತ್ತು. ಆದರೆ ಇದೀಗ ಈ ಬಸದಿಯು ವಿನೂತನವಾಗಿ ನಿರ್ಮಾಣಗೊಂಡು ಜನಾಕರ್ಷಣೆಯ ಕೇಂದ್ರಬಿಂದುವಾಗಿಯೂ ಬದಲಾಗಿದೆ. ನವಿಲೊಂದು ತನ್ನ ಗರಿಗಳನ್ನು ಹರಡಿ ಕುಳಿತಿರುವಂತೆ ಈ ಬಸದಿಯ ಮೇಲ್ಛಾವಣಿಯ ವಿನ್ಯಾಸ ಮಾಡಲಾಗಿದೆ. ಯಾವ ರೀತಿ ನವಿಲಿನ ಬಣ್ಣವಿದೆಯೋ, ಅದೇ ರೀತಿ ಬಣ್ಣವನ್ನು ಈ ಮೇಲ್ಛಾವಣಿಗೆ ಬಳಿಯಲಾಗಿದೆ. ಮೇಲ್ಛಾವಣಿಯಲ್ಲಿರುವ ನವಿಲಿನ ಮುಖವನ್ನು ಸುಮಾರು 150 ಕಿಲೋ ತಾಮ್ರ ಬಳಸಿ ನಿರ್ಮಿಸಲಾಗಿದ್ದು, ಉಳಿದಂತೆ ಸಂಪೂರ್ಣ ಮೇಲ್ಛಾವಣಿಯನ್ನು ತಾಮ್ರದ ಹೊದಿಕೆಯ ಮೂಲಕವೇ ಮಾಡಲಾಗಿದೆ.
ಇದನ್ನೂ ಓದಿ: Bisu Parba: ತುಳುನಾಡು ಮತ್ತು ಕೇರಳದಲ್ಲಿ ಬಿಸು ಪರ್ಬದ ಸಂಭ್ರಮ- ದೇವರಿಗೆ ಕಣಿ ಇಡುವ ಮೂಲಕ ಹಬ್ಬ ಆಚರಣೆ!
ಸುಮಾರು ಒಂದು ಕೋಟಿ ರೂಪಾಯಿಗಳನ್ನು ನವಿಲಿನ ವಿನ್ಯಾಸದ ಈ ಬಸದಿಯ ಮೇಲ್ಛಾವಣಿಯಗೆ ವಿನಿಯೋಗಿಸಲಾಗಿದೆ. ಪರಿಸರ ಸ್ನೇಹಿ ಬಣ್ಣಗಳನ್ನು ಮೇಲ್ಛಾವಣಿಗೆ ಬಳಸಲಾಗಿದ್ದು, ಹನ್ನೆರಡು ವರ್ಷಗಳ ಕಾಲ ಈ ಬಣ್ಣ ಬಾಳಿಕೆ ಬರಲಿದೆ. ಸಂಪೂರ್ಣ ನೈಸರ್ಗಿಕ ಕಲ್ಲುಗಳನ್ನು ಬಳಸಿ ಈ ಬಸದಿಯ ಕಲಾಕೃತಿಗಳನ್ನು ಕೆತ್ತಲಾಗಿದ್ದು, ಕಾರ್ಕಳದ ಕಪ್ಪು ಕಲ್ಲು, ತಮಿಳುನಾಡಿನ ಈರೋಡಿನ ಕಲ್ಲು ಮತ್ತು ಇಳಕಲ್ ನ ಕೆಂಪು ಹರಳನ್ನು ಈ ಬಸದಿಯ ನಿರ್ಮಾಣಕ್ಕಾಗಿ ಬಳಸಲಾಗಿದೆ. ಜಿತೇಶ್ ಮತ್ತು ದರ್ಶನ್ ಎನ್ನುವ ಯುವಕರಿಬ್ಬರ ಕಲ್ಪನೆಯಲ್ಲಿ ಈ ವಿನೂತನ ನವಿಲು ಬಸದಿ ರೂಪುಗೊಂಡಿದೆ.
ಅಂದಾಜು ಸುಮಾರು 5 ಕೋಟಿ ರೂಪಾಯಿಗಳನ್ನು ಈ ಬಸದಿ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗಿದೆ. ಎರಡು ವರ್ಷಗಳ ಹಿಂದೆ ಈ ನೂತನ ಬಸದಿಯ ನಿರ್ಮಾಣ ಕಾಮಗಾರಿ ಆರಂಭಗೊಂಡು ಇದೀಗ ಸಂಪೂರ್ಣ ಮುಕ್ತಾಯವಾಗಿದ್ದು, ಭಕ್ತರ ಭೇಟಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅತ್ಯದ್ಭುತವಾದ ಶಿಲ್ಪಕಲೆಗಳನ್ನೂ ಈ ಬಸದಿಯಲ್ಲಿ ವೀಕ್ಷಿಸಬಹುದಾಗಿದ್ದು, ತಿರುಗುವ ಕಂಬ, ಕಲ್ಲಿನಿಂದ ನಿರ್ಮಿಸಿದ ಸಿಂಹದ ಬಾಯೊಳಗೆ ತಿರುಗುವ ಚೆಂಡು ಹೀಗೆ ಎಲ್ಲದರಲ್ಲೂ ವಿನೂತನವಾದ ಕಲ್ಪನೆಗಳನ್ನು ಇಲ್ಲಿ ಅಳವಡಿಸಲಾಗಿದೆ.
ಈ ಬಸದಿಗೆ ನವಿಲು ಬಸದಿ ಎಂದು ಹೆಸರಿಡಲು ಎರಡು ಕಾರಣಗಳಿವೆ ಎನ್ನುತ್ತಾರೆ ಈ ಬಸದಿಯ ನಿರ್ಮಾತೃಗಳಲ್ಲಿ ಒಬ್ಬರಾದ ಜಿತೇಶ್. ಒಂದು ನವಿಲು ನಮ್ಮ ದೇಶದ ರಾಷ್ಟ್ರೀಯ ಪಕ್ಷಿ, ಇನ್ನೊಂದು ಜೈನ ಮುನಿಗಳು ತಮ್ಮ ಕೈಯಲ್ಲಿ ಹಿಡಿಯುವ ನವಿಲುಗರಿಗಳಿಂದ ತಯಾರಿಸಿದ ಪಿಂಚ ಎಂದು ಕರೆಯಲಾಗುವ ಸಾಧನ ಕಾರಣ. ಈ ಸಾಧನದ ಮೂಲಕವೇ ಮುನಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾರೆ, ತಾವು ಕುಳಿತುಕೊಳ್ಳುವಾಗ ಅಥವಾ ಇತರ ಕೆಲಸ ಮಾಡುವ ಸಂದರ್ಭದಲ್ಲಿ ಇರುವೆ ಅಥವಾ ಇತರ ಸಣ್ಣ ಕೀಟಗಳಿಗೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಈ ನವಿಲುಗರಿಯಲ್ಲಿ ನಿರ್ಮಿಸಿದ ಸಾಧನವನ್ನು ಬಳಸಿ ಇರುವೆ, ಕೀಟಗಳನ್ನು ಸರಿಸುತ್ತಾರೆ. ಈ ಎರಡು ಕಾರಣಕ್ಕಾಗಿ ನವಿಲಿಗಿರುವ ಮಹತ್ವವನ್ನು ಈ ಬಸದಿಯ ಮೂಲಕ ತೋರಿಸುವ ಪ್ರಯತ್ನವನ್ನೂ ಮಾಡಲಾಗಿದೆ ಎಂದಿದ್ದಾರೆ.
Dakshina Kannada,Karnataka
April 15, 2025 12:16 PM IST