Dakshina Kannada: ಬಂಟ್ವಾಳದ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ವಿಶಿಷ್ಟ ಕಜಂಬು ಉತ್ಸವ, ಇಲ್ಲಿ ಮಕ್ಕಳೇ ಪ್ರಧಾನ! | Kazambu festival is held once a year in Dakshina Kannada district Bantwal

Dakshina Kannada: ಬಂಟ್ವಾಳದ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ವಿಶಿಷ್ಟ ಕಜಂಬು ಉತ್ಸವ, ಇಲ್ಲಿ ಮಕ್ಕಳೇ ಪ್ರಧಾನ! | Kazambu festival is held once a year in Dakshina Kannada district Bantwal

ಸುಮಾರು 800-900 ವರ್ಷಗಳ ಇತಿಹಾಸ ಹೊಂದಿರುವ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರ ವಿಟ್ಲ ಅರಸು ಮನೆತನದ ಡೊಂಬ ಹೆಗ್ಗಡೆ ಅರಸರ ಆಳ್ವಿಕೆಗೆ ಒಳಪಟ್ಟು ನಿರ್ಮಾಣಗೊಂಡಿತ್ತು ಎನ್ನಲಾಗುತ್ತದೆ. ತುಳುನಾಡಿನ ಉಳ್ಳಾಲ್ತಿ ಕ್ಷೇತ್ರದ ಮೊದಲ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಜಂಬು ಉತ್ಸವ ವಿಶೇಷವಾದದ್ದು. ಅಕ್ಕತಂಗಿಯರ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಕ್ಕಳನ್ನು ದೇವಿಯ ಪಾದಕ್ಕೆ ಸ್ಪರ್ಶಿಸುವುದೇ ಕಜಂಬು ಉತ್ಸವದ ವಿಶೇಷತೆಯಾಗಿದೆ.

ಮಕ್ಕಳಿಗೆ ಪುಣ್ಯಸ್ನಾನ ಮಾಡಿಸಿ ದೇವಿ ಪಾದಕ್ಕೆ ಸ್ಪರ್ಶ

ಕೇಪು ಕ್ಷೇತ್ರದ ಪಕ್ಕದಲ್ಲೇ ಹರಿಯುವ ಸಣ್ಣ ಹೊಳೆಯಲ್ಲಿ ಹಸುಗೂಸಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳಿಗೆ ಪುಣ್ಯಸ್ನಾನ ಮಾಡಿಸುತ್ತಾರೆ. ಬಳಿಕ ಆ ಮಕ್ಕಳನ್ನು ದೇವಿಯ ಪಾದಕ್ಕೆ ಸ್ಪರ್ಶಿಸುವ ವಿಶೇಷ ಸೇವೆ ಇದಾಗಿದೆ. ಇಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಗರ್ಭಗುಡಿಯಲ್ಲಿರುವ ದೇವಿಯ ವಿಗ್ರಹದ ಪಾದಕ್ಕೆ ಮಕ್ಕಳನ್ನು ಸ್ಪರ್ಶಿಸಲಾಗುತ್ತದೆ. ಈ ಕ್ಷೇತ್ರದ ಸೀಮೆಗೆ ಒಳಪಡುವ ಮಕ್ಕಳನ್ನು ಕರೆತಂದು ಇಲ್ಲಿ ಕಜಂಬು ಸೇವೆ ಮಾಡಿಸಬೇಕು ಎನ್ನುವ ನಂಬಿಕೆಯಿದ್ದರೂ, ಎಲ್ಲಾ ಕಡೆಯಿಂದಲೂ ಭಕ್ತರು ತಮ್ಮ ಮಕ್ಕಳನ್ನು ಕರೆತಂದು ಈ ಸೇವೆ ಮಾಡಿಸುತ್ತಾರೆ. ಕಜಂಬು ಸೇವೆಗೆ ದಕ್ಷಿಣ ಕನ್ನಡ ಜಿಲ್ಲೆಯೊಂದೇ ಅಲ್ಲದೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಇಲ್ಲಿ ಹರಕೆ ಹೊತ್ತರೆ ಮಕ್ಕಳಾಗುತ್ತೆ!?

ಮಕ್ಕಳಾಗದವರು ತೊಟ್ಟಿಲು ಕೊಂಬು ವಾದ್ಯದಲ್ಲಿ ಕಜಂಬು ಹಾಕುತ್ತೇವೆ ಎಂದು ಇಲ್ಲಿ ಹರಕೆ ಹೇಳಿಕೊಂಡರೆ ಮಕ್ಕಳಾಗುತ್ತದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ದೇವಿಯ ವರಪ್ರಸಾದದಿಂದ ಪ್ರಾಪ್ತವಾದ ಮಕ್ಕಳನ್ನು ದೇವಿಗೆ ಅರ್ಪಿಸಿ ಪಡೆಯುವುದು ಈ ಉತ್ಸವದ ವಾಡಿಕೆಯಾಗಿದೆ. ಹರಕೆಯ ಮಕ್ಕಳು ಜಾತ್ರೆಗೆ ಎರಡು ದಿನ ಮುಂಚಿತವಾಗಿ ವೃತಾಚರಣೆಯಿಂದಿರಬೇಕು. ಹಸುಳೆಯಾದರೆ ತಾಯಿ ವೃತಾಚರಣೆ ಪಾಲಿಸಬೇಕು.

ವೃತಾಚರಣೆ ಪಾಲಿಸಬೇಕು

ಕಜಂಬು ಉತ್ಸವದ ದಿನ ಬೆಳಗ್ಗೆ ಫಲಾಹಾರ, ಮಧ್ಯಾಹ್ನ ನೈವೇದ್ಯದ ಊಟ, ರಾತ್ರಿ ಉಪವಾಸದಿಂದ ಇರಬೇಕು. ಶುಚಿರ್ಭೂತರಾಗಿ ಕ್ಷೇತ್ರಕ್ಕೆ ಬರಬೇಕು. ದೇವಿಗೆ ನಮಸ್ಕರಿಸಿ ನಿಲ್ಲಬೇಕು. ವಿಶೇಷ ಪೂಜೆಯ ಬಳಿಕ ಮಕ್ಕಳನ್ನು ಹರಕೆಯ ನುಡಿಯಂತೆ ಕೊಂಬು ವಾದ್ಯಗಳೊಂದಿಗೆ ಉಳ್ಳಾಲ್ತಿ ಗರ್ಭಗುಡಿಯ ಮೆಟ್ಟಿಲಿಗೆ ಸ್ಪರ್ಶಿಸಲಾಗುತ್ತದೆ. ಮಕ್ಕಳು ಚೀರಾಡಿದರೆ ದೇವಿಗೆ ಕೇಳಿಸುತ್ತದೆ ಎಂಬ ಪ್ರತೀತಿ ಇಲ್ಲಿದೆ.

ಅಕ್ಕ, ತಂಗಿ ರಾಣಿಯರು ಕಲ್ಲಾಗಿಹೋದರು!

ಈ ಕ್ಷೇತ್ರದಲ್ಲಿ ನಡೆಯುವ ದೇವಿಯ ನೆರೆ ಇಳಿಯುವ ಕಾರ್ಯಕ್ರಮವನ್ನು ಮಹಿಳೆಯರು ನೋಡುವಂತಿಲ್ಲ. ಈ ನಿರ್ಬಂಧವನ್ನು ಮೀರಿ ಇಬ್ಬರು ಅಕ್ಕ ತಂಗಿ ರಾಣಿಯರು ನೆರೆ ಇಳಿಯುವ ಕಾರ್ಯಕ್ರಮವನ್ನು ನೋಡಿದ್ದರು. ಪರಿಣಾಮ ಅವರಿಬ್ಬರೂ ಇಲ್ಲಿ ಕಲ್ಲಾಗಿಹೋದರು ಎಂಬ ಐತಿಹ್ಯವಿದೆ. ಈ ಅಕ್ಕತಂಗಿಯರೇ ಮುಂದೆ ಈ ಕ್ಷೇತ್ರದಲ್ಲಿ ಉಳ್ಳಾಲ್ತಿಯಾಗಿ ನೆಲೆಯೂರಿ ಕಾರಣಿಕತೆಯಿಂದ ಮೆರೆದರು ಎಂದು ಹೇಳಲಾಗುತ್ತದೆ.

ಧ್ವಜಸ್ತಂಭದಿಂದ ಮುಂದೆ ಹೋಗುವಂತಿಲ್ಲ

ಸಾಮಾನ್ಯವಾಗಿ ಯಾವುದೇ ಉಳ್ಳಾಲ್ತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ ಮತ್ತು ಉಳ್ಳಾಲ್ತಿ ನೇಮವನ್ನು ಮಹಿಳೆಯರು ನೋಡಬಾರದು. ಕೇಪು ಕ್ಷೇತ್ರದಲ್ಲಿ ವಿಟ್ಲ ಅರಸರ ಆಗಮನವಾದ ಬಳಿಕ ಮಹಿಳೆಯರು ಒಳಪ್ರವೇಶಿಸಬಹುದು. ಆದರೆ ಧ್ವಜಸ್ತಂಭದಿಂದ ಮುಂದುವರಿದು ಒಳಗೆ ಪ್ರವೇಶಿಸುವಂತಿಲ್ಲ.

ಇದನ್ನೂ ಓದಿ: Uttara Kannada: ನುರಿತ ರಿದಂ ಪ್ಯಾಡ್ ಪ್ಲೇಯರ್ ಈ 6 ವರ್ಷದ ಬಾಲಕ; ಡೋಲು ವಾದನದಲ್ಲೂ ಲಿಖಿತ್ ಪಿಳ್ಳೈ ಪರಿಣಿತಿ

ಅಕ್ಕ ತಂಗಿ ರಾಣಿಯರು ಕಲ್ಲಾಗಿ ಹೋಗುವಾಗ ಅವರ ಜೊತೆಗೆ ಬಂದಿದ್ದ ಸೈನಿಕರೂ ಮಾಯವಾಗಿದ್ದರು. ಹೀಗಾಗಿ ದೇವಳದ ನಾಲ್ಕೂ ಮೂಲೆಯಲ್ಲಿ ಈ ಸೈನಿಕರ ಪ್ರತಿನಿಧಿಗಳಾಗಿ ನಲು (ನಲ್ಲೊಳು) ಎಂದು ಕರೆಯಲ್ಪಡುವ ದೈವಮಾಣಿಗಳು ನೆಲೆಯಾಗಿದ್ದಾರೆ. ಈ ನಲುಗಳು ಜಾತ್ರೆಗೆ ಮುನ್ನ ಅರಮನೆಯಲ್ಲಿ ಇಳಿದು ಬಂದು ಜಾತ್ರೋತ್ಸವ ಸುಸೂತ್ರವಾಗಿ ನೆರವೇರಲು ಅರಸರಿಂದ ಪಟ್ಟಿ ತೆಗೆದುಕೊಂಡು ಗ್ರಾಮದಲ್ಲಿ ಸಂಚರಿಸುತ್ತಾರೆ.

ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿ ಯಾವುದೇ ಹಣದ ವ್ಯವಹಾರಗಳಿಗೆ ಅವಕಾಶವಿಲ್ಲ. ಸಂತೆ ವ್ಯಾಪಾರ ನಡೆಯುವುದಿಲ್ಲ. ಕೋಳಿ ಅಂಕವೂ ಯಾವುದೇ ಜೂಜು ಇಲ್ಲದೆ 3 ದಿನಗಳ ಕಾಲ ಕೇಪು ಕೋಳಿ ಅಂಕ ನಡೆಯುತ್ತದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ಭವಿಷ್ಯ/

Dakshina Kannada: ಬಂಟ್ವಾಳದ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ವಿಶಿಷ್ಟ ಕಜಂಬು ಉತ್ಸವ, ಇಲ್ಲಿ ಮಕ್ಕಳೇ ಪ್ರಧಾನ! ಮಕ್ಕಳಾಗದವರಿಗೆ ಭರವಸೆಯ ಬೆಳಕು