Last Updated:
ಜಾತ್ರೋತ್ಸವದ ಸುಮಾರು 9 ದಿನ ಮಹಾಲಿಂಗೇಶ್ವರ ಸ್ವಾಮಿ ಪುತ್ತೂರು ನಗರದಾದ್ಯಂತ ಒಟ್ಟು ಸುಮಾರು 50 ಕಿಲೋಮೀಟರ್ ಸಂಚರಿಸಿ ಭಕ್ತನ ಮನೆ ಬಾಗಿಲಿಗೆ ತೆರಳುತ್ತಾರೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಅತ್ಯಂತ ದೊಡ್ಡ ಜಾತ್ರೆ ಎಂದು ಹೆಸರುವಾಸಿಯಾಗಿರುವ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ(Mahotabhara Mahalingeshwara Temple) ವಾರ್ಷಿಕ ಜಾತ್ರೋತ್ಸವದ ಸಂಭ್ರಮ ಮನೆ ಮಾಡಿದೆ. 10 ದಿನಗಳ ಕಾಲ ನಡೆಯುವ ಈ ಜಾತ್ರೋತ್ಸವದಲ್ಲಿ ಭಕ್ತರು ದೇವರನ್ನು ಕಾಣಲು ಕ್ಷೇತ್ರದ ಕಡೆ ಆಗಮಿಸುವಂತೆ ದೇವರೂ ಭಕ್ತನ ಮನೆ ಬಾಗಿಲಿಗೆ ತೆರಳುವ ವಿಶಿಷ್ಟ ಆಚರಣೆಯೂ ಈ ಕ್ಷೇತ್ರದಲ್ಲಿದೆ.
ಜಾತ್ರೋತ್ಸವದ ಸುಮಾರು 9 ದಿನ ಮಹಾಲಿಂಗೇಶ್ವರ ಸ್ವಾಮಿ ಪುತ್ತೂರು ನಗರದಾದ್ಯಂತ ಒಟ್ಟು ಸುಮಾರು 50 ಕಿಲೋಮೀಟರ್ ಸಂಚರಿಸಿ ಭಕ್ತನ ಮನೆ ಬಾಗಿಲಿಗೆ ತೆರಳುತ್ತಾರೆ. ಅಲ್ಲದೇ ಜಾತ್ರೋತ್ಸವದ ಕೊನೆಯ ಭಾಗವಾದ ಅವಭೃತ ಸ್ನಾನಕ್ಕಾಗಿ ದೇವರು ಕ್ಷೇತ್ರದಿಂದ ಸುಮಾರು 14 ಕಿಲೋಮೀಟರ್ ಸಂಚರಿಸಿ ದಾರಿಯುದ್ದಕ್ಕೂ ಭಕ್ತರಿಗೆ ದರ್ಶನ ನೀಡುವುದು ಇಲ್ಲಿನ ವಿಶೇಷತೆಯಾಗಿದೆ.
ಇದನ್ನೂ ಓದಿ: Dakshina Kannada: 29 ದಿನಗಳ ಕಾಲ ನಡೆದ ಅದ್ದೂರಿ ಪೊಳಲಿ ಜಾತ್ರೋತ್ಸವಕ್ಕೆ ತೆರೆ!
ಕ್ಷೇತ್ರದಲ್ಲಿ ಸಂಜೆಯ ದೇವರ ಬಲಿ ನಡೆದ ಬಳಿಕ ದೇವರ ಉತ್ಸವ ಮೂರ್ತಿ ಹೊತ್ತ ಬ್ರಹ್ಮವಾಹಕರು, ಪರಿಚಾರಕರು, ಗ್ಯಾಸ್ ಲೈಟ್ ಹಿಡಿಯುವವರು, ಕೊಂಬು, ನಗಾರಿ, ಚೆಂಡೆ ಹೀಗೆ ಹಲವು ಪ್ರಚಾರದ ವಾದ್ಯಗಳೊಂದಿಗೆ, ಮೆರವಣಿಗೆಯ ಮೂಲಕ ದೇವರು ಭಕ್ತರ ಬಾಗಿಲಿಗೆ ತೆರಳುತ್ತಾರೆ. ಪ್ರತಿದಿನ ಸುಮಾರು 6 ಕಿಲೋಮೀಟರ್ ಕ್ರಮಿಸುವ ದೇವರು ಮೊದಲೇ ನಿಗದಿಪಡಿಸಿದ ಸ್ಥಳಕ್ಕೆ ಭೇಟಿ ನೀಡಿ ಭಕ್ತರಿಗೆ ದರ್ಶನ ನೀಡುತ್ತಾರೆ. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಸ್ವಾಮಿ 200 ಕ್ಕೂ ಮಿಕ್ಕಿದ ಸಾರ್ವಜನಿಕ ಕಟ್ಟೆಗಳಿಗೆ ಭೇಟಿ ನೀಡಿ ಕಟ್ಟೆಪೂಜೆಯನ್ನೂ ನೆರವೇರಿಸುತ್ತಾರೆ.
ಪ್ರತಿದಿನವೂ ರಾತ್ರಿ 1 ರಿಂದ 2 ಗಂಟೆ ತನಕ ತನ್ನ ನಗರ ಪ್ರದಕ್ಷಿಣೆಯನ್ನು ಮಾಡುವ ಸ್ವಾಮಿ ಬಳಿಕ ವಿಶ್ರಾಂತಿ ಪಡೆಯುತ್ತಾರೆ. ಬೆಳಗ್ಗಿನ ವೇಳೆ ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದರೆ, ಸಂಜೆ ಬಳಿಕ ದೇವರೇ ಭಕ್ತರ ಬಳಿಗೆ ತೆರಳುವುದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಒಂದು ವಿಶೇಷತೆಯಾಗಿದೆ. ಇದೇ ಕಾರಣಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವರನ್ನು ಹತ್ತೂರ ಒಡೆಯ, ಪುತ್ತೂರ ಮುತ್ತು ಎನ್ನುವ ಹೆಸರಿನಲ್ಲಿ ಸಂಬೋಧಿಸುತ್ತಾರೆ.
Dakshina Kannada,Karnataka
April 13, 2025 5:18 PM IST