2 ಲಕ್ಷ ಹೂಗಳಿಂದ ಅರಳಿದ ಕಲಾಕೃತಿಗಳು
ಕಣ್ಮನ ಸೆಳೆಯುವ ಬಣ್ಣಬಣ್ಣದ ಹೂಗಳು, ಹೂಗಳಿಂದಲೇ ನಿರ್ಮಾಣವಾದ ಐಫೆಲ್ ಟವರ್, ಕಂಬಳದ ಕೋಣ, ರಾಷ್ಟ್ರಧ್ವಜ..ಇದು ಕಂಡು ಬಂದಿದ್ದು ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ತೋಟಗಾರಿಕೆ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ. ಇಲ್ಲಿ 2 ಲಕ್ಷ ಹೂಗಳಿಂದಲೇ ತಯಾರಿಸಲಾದ 22 ಅಡಿ ಎತ್ತರ ಹಾಗೂ 12ಅಡಿ ಅಗಲದ ಐಫೆಲ್ ಟವರ್, ವಿವಿಧ ಕಲಾಕೃತಿಗಳು ಗಮನ ಸೆಳೆದವು.
ಇದನ್ನೂ ಓದಿ: Chikkamagaluru: ಚಿಕ್ಕಮಗಳೂರಿನಲ್ಲಿ ನಡೆಯಿತು ಯಶಸ್ವಿ ರಾಮನಾಮ ಜಪಯಾತ್ರೆ!
ಹೂಗಳನ್ನು ಕಂಡು ಫಿದಾ ಆದ ಜನರು!
ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಆಯೋಜಿಸಲಾಗಿತ್ತು. ಸಾಲ್ವಿಯ, ಸೇವಂತಿಗೆ, ಚೆಂಡುಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೂನಿಯಾ, ಟೊರಿನೋ ಮುಂತಾದ ಹೂವುಗಳನ್ನು ಬಳಸಿಕೊಂಡು ಅಲ್ಲಲ್ಲಿ ವೈವಿಧ್ಯಮಯ ಜೋಡಣೆ ಜನಾಕರ್ಷಣೀಯವಾಗಿತ್ತು. ಸುಮಾರು 20,000 ಸಂಖ್ಯೆಯ 30ಕ್ಕೂ ಅಧಿಕ ವಿವಿಧ ಜಾತಿಯ ಹೂಗಳು ಇಲ್ಲಿದ್ದವು.
ಜೊತೆಗೆ ತರಕಾರಿ ತೋಟ ಎಲ್ಲರನ್ನೂ ಕೈಬೀಸಿ ಕರೆಯುತ್ತಿತ್ತು. ಬಳ್ಳಿ ತುಂಬಾ ಪಡುವಲಕಾಯಿ, ಹೀರೇಕಾಯಿ, ಹಾಗಲಕಾಯಿ ಆಹಾ ಎನ್ನುವಂತಿದ್ದರೆ, ಬಸಳೆ, ನೆಲಬಸಳೆ, ಹರಿವೆ, ಹೂಕೋಸು, ನವಿಲುಕೋಸು, ಮೆಣಸು, ಬದನೆ, ಬೆಂಡೆ, ಕೊತ್ತಂಬರಿ ಸೊಪ್ಪು ಎಲ್ಲವೂ ತರಕಾರಿ ಪ್ರಿಯರನ್ನು ಆಕರ್ಷಿಸಿತ್ತು.
ತೋಟಗಾರಿಕೆ ಇಲಾಖೆ ಒಂದು ಗಿಡವನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡುತ್ತಿದೆ. ಅಲಸಂದೆ, ಬೆಂಡೆಕಾಯಿ, ಹೀರೆಕಾಯಿ, ಸೋರೆಕಾಯಿ, ಕುಂಬಳಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿಗಳ ಗಿಡಗಳು ಲಭ್ಯವಿದ್ದವು. ಒಟ್ಟಿನಲ್ಲಿ ಮಂಗಳೂರಿನ ಜನತೆ ಫಲಪುಷ್ಪ ಪ್ರದರ್ಶನದಲ್ಲೊಂದು ರೌಂಡು ಹೊಡೆದು ಎಂಜಾಯ್ ಮಾಡಿದರು.
Dakshina Kannada,Karnataka
January 27, 2025 3:11 PM IST