Last Updated:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿ 2 ದಿನಗಳ ಪಾರಂಪರಿಕ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೇಗಿತ್ತು ಅಂತಾ ನೀವೇ ನೋಡಿ.
ದಕ್ಷಿಣ ಕನ್ನಡ: ಬ್ರಿಟಿಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಆಗಿದ್ದ ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಆವರಣದಲ್ಲಿ (Old DC Office Building) ಪಾರಂಪರಿಕ ಸಪ್ತಾಹ (Heritage Week) ಕಾರ್ಯಕ್ರಮ ನಡೆಸಲಾಗಿದೆ. ಈ ಕಟ್ಟಡದ ಪಾರಂಪರಿಕ ಮತ್ತು ಭವ್ಯ ಇತಿಹಾಸವನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ 2 ದಿನಗಳ ಕಾಲ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು (Dakshina Kannada) (Mangaluru News).
ಬಂಗರಸರ ಕಾಲದಲ್ಲಿ ಅರಮನೆಯಾಗಿದ್ದ ಈ ಕಟ್ಟಡವನ್ನು ಪೋರ್ಚುಗೀಸರು ತಮಗೆ ಬೇಕಾದಂತೆ ನವೀಕರಣ ಮಾಡಿಕೊಂಡಿದ್ದರು. ಬಳಿಕ ಬ್ರಿಟಿಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಆಗಿ ಪರಿವರ್ತನೆಗೊಂಡಿದ್ದ ಈ ಕಟ್ಟಡಕ್ಕೆ ಸುಮಾರು 400 ವರ್ಷಗಳಷ್ಟು ಹಳೆಯ ಇತಿಹಾಸವಿದೆ.
ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿ
ಬ್ರಿಟಿಷರ ಕಾಲದಲ್ಲಿ ಈ ಕಟ್ಟಡ ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಹಿಂದಿನ ಕೆನರಾ ಜಿಲ್ಲೆಯ ಆಡಳಿತದ ಕೇಂದ್ರ ಸ್ಥಾನವಾಗಿತ್ತು. ಸ್ವಾತಂತ್ರ್ಯಾನಂತರವೂ ಜಿಲ್ಲಾಧಿಕಾರಿ ಕಚೇರಿ ಇಲ್ಲಿಯೇ ಕಾರ್ಯಾಚರಿಸುತ್ತಿತ್ತು. ಬಳಿಕ ಈ ಕಟ್ಟಡದ ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಾಣವಾದ ಮೇಲೆ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿದೆ. ಆದ್ರೆ ಹಳೇ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ಸುಭದ್ರ ಸ್ಥಿತಿಯಲ್ಲಿರುವ ಈ ಕಟ್ಟಡವು ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
ಇದನ್ನೂ ಓದಿ: Uttara Kannada: ಪಾಳು ಬಿದ್ದಿದೆ ರಾಣಿ ಬೆಳವಡಿ ಮಲ್ಲಮ್ಮ ಆಡಿ ಬೆಳೆದ ಸ್ಥಳ; ಐತಿಹಾಸಿಕ ಕಲ್ಲಿನ ಅರಮನೆ ರಕ್ಷಿಸುವ ಹೊಣೆ ಯಾರದ್ದು?
ತುಳುನಾಡಿನ ಜನರ ಗತಜೀವನ ನೆನಪಿಸುವ ಫೋಟೋಗಳು
ಈ ಕಟ್ಟಡದ ಪರಂಪರೆ, ಇತಿಹಾಸವನ್ನು ಜನರಿಗೆ ತಿಳಿಸಲು ಪಾರಂಪರಿಕ ಸಪ್ತಾಹ ನಡೆಯಿತು. ಇದರ ಅಂಗವಾಗಿ ತುಳುನಾಡಿನ ಗತಜೀವನವನ್ನು ನೆನಪಿಸುವ, ನೂರಿನ್ನೂರು ವರ್ಷಗಳ ಹಿಂದೆ ಮಿಷನರಿಗಳು ತೆಗೆದ ಫೋಟೋಗಳು ಎಲ್ಲರ ಗಮನ ಸೆಳೆಯಿತು. ಜನಜೀವನ, ಕಲೆ, ಆಚಾರ-ವಿಚಾರ, ಕಸುಬುಗಾರಿಕೆ, ದೇವಾಲಯಗಳು, ಶಿಕ್ಷಣ ವ್ಯವಸ್ಥೆಯ ಫೋಟೋಗಳು ಅಂದು ತುಳುನಾಡು ಹೇಗಿತ್ತು ಎಂಬುದನ್ನು ನೆನಪಿಸುತ್ತಿತ್ತು.
ಪಾರಂಪರಿಕ ಸಪ್ತಾಹದಲ್ಲಿ ತುಳುನಾಡಿನ ವಸ್ತುಗಳು, ವಿಶೇಷ ಕಲಾಕೃತಿಗಳ ಪ್ರದರ್ಶನ, ಚಿತ್ರ ಸ್ಪರ್ಧೆಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಮತ್ತೊಂದೆಡೆ ಮಂಗಳೂರಿನ ಸಂಸ್ಥೆಯೊಂದು ತಾನು ತಯಾರಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳನ್ನು, ಈ ಪಾರಂಪರಿಕ ಕಟ್ಟಡಕ್ಕೆ ಅಳವಡಿಸಿ ಕಟ್ಟಡದ ವೈಭವವನ್ನು ಇಮ್ಮಡಿಗೊಳಿಸಿತ್ತು.
Dakshina Kannada,Karnataka
December 06, 2024 12:11 PM IST