Last Updated:
ರಸ್ತೆ ಅಪಘಾತದವಾದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ನೆರವಾಗುತ್ತದೆ. ಆದರೆ ಸಮುದ್ರ, ನದಿಯಲ್ಲಿ ಅವಘಡ ಸಂಭವಿಸಿದರೆ ಏನ್ಮಾಡೋದು? ಅನ್ನೋ ಮೀನುಗಾರರಿಗೆ ಇನ್ಮುಂದೆ ಈ ಚಿಂತೆ ಬೇಡ. ಕಾರಣ ಅವಘಡ ಆದ ತಕ್ಷಣ ಸೈರನ್ ಹಾಕಿ, ನೀರನಲ್ಲೇ ಆಂಬ್ಯುಲೆನ್ಸ್ ಬರಲಿದೆ.
ಮಂಗಳೂರು: ಇಲ್ನೋಡಿ ನದಿಯ ಮಧ್ಯೆ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ. ತಕ್ಷಣ ರಕ್ಷಣೆಗೆ ಬಂದ ಬೋಟ್ ಆಂಬ್ಯುಲೆನ್ಸ್ ಕ್ಷಣ ಮಾತ್ರದಲ್ಲೇ ಆ ವ್ಯಕ್ತಿಯನ್ನ ರಕ್ಷಿಸಿದೆ. ಅಯ್ಯೋ ಇದು ನಿಜವಲ್ಲ. ಬದಲಿಗೆ ಬೋಟ್ ಆ್ಯಂಬುಲೆನ್ಸ್ನ (Boat Ambulance) ಅಣಕು ಕಾರ್ಯಚರಣೆ. ಇನ್ನು ರಾಜ್ಯದಲ್ಲಿ ಸೀ ಆಂಬ್ಯುಲೆನ್ಸ್ಗೆ (Sea Ambulance) ಬೇಡಿಕೆ ಇದ್ರೂ ಸರ್ಕಾರ ಮಾತ್ರ ಈಡೇರಿಸಿಲ್ಲ. ಹೀಗಾಗಿ ಉಳ್ಳಾಲದ ನಾಡದೋಣಿ ಹಾಗೂ ಗಿಲಿನೆಟ್ ಮೀನುಗಾರರ ಸಂಘದಿಂದ (Boat and Gill Net Fishing Association) ಬೋಟ್ ಆಂಬ್ಯುಲೆನ್ಸ್ ತಯಾರಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರಿನಲ್ಲಿ (Mangaluru) ಸಿದ್ಧವಾದ ಬೋಟ್ ಆಂಬ್ಯುಲೆನ್ಸ್ ಆಗಿದೆ.
ನದಿ ಹಾಗೂ ಸಮುದ್ರದಲ್ಲಿ ಬೋಟ್ ಅಥವಾ ದೋಣಿ ಮಗುಚಿದಾಗ, ಬೆಂಕಿ ಅವಘಡ ಸಂಭವಿಸಿದಾಗ ಮೀನುಗಾರರನ್ನು ರಕ್ಷಿಸೋದು ದೊಡ್ಡ ಸವಾಲಾಗಿದೆ. ಎಷ್ಟೋ ಬಾರಿ ಮೀನುಗಾರರೇ ಹರಸಾಹಸ ಪಟ್ಟು ಮೀನುಗಾರರ ಜೀವ ಉಳಿಸಿದ್ದಾರೆ. ಇನ್ನೆಷ್ಟೋ ಬಾರಿ ದಡಕ್ಕೆ ಕರೆ ತರುವಷ್ಟರಲ್ಲಿ ಸಾಕಷ್ಟು ಮೀನುಗಾರರ ಉಸಿರು ನಿಂತ ಘಟನೆಯೂ ನಡೆದಿದೆ. ಹೀಗಾಗಿ ಮೀನುಗಾರರ ರಕ್ಷಣೆಗೆಂದೇ ಬೋಟ್ ಆಂಬ್ಯುಲೆನ್ಸ್ ತಯಾರಿಸಲಾಗಿದೆ.
ಇದು ನೋಡೋಕೆ ಸಾಮಾನ್ಯ ಬೋಟ್ನಂತೆ ಇದೆ. ಆದರೆ ಇದರಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸ್ಟ್ರೆಚರ್, ಆಮ್ಲಜನಕ ವೈದ್ಯಕೀಯ ಉಪಕರಣ, ಲೈಫ್ ಜಾಕೆಟ್ ವ್ಯವಸ್ಥೆ ಇದೆ. ದುರಂತದ ಸಂಭವಿಸಿದಾಗ ಬೋಟ್ ಆಂಬ್ಯುಲೆನ್ಸ್ ಮೈಕ್ನಲ್ಲಿ ಅನೌನ್ಸ್ ಮಾಡಿ ಸೈರನ್ ಹಾಕುತ್ತಾ ಬಂದ್ರೆ ಇತರೆ ಬೋಟ್ಗಳು ದಾರಿ ಮಾಡಿಕೊಡುತ್ತದೆ. ಇದರಿಂದ ತಕ್ಷಣ ಅಪಾಯದಲ್ಲಿ ಇರುವವರನ್ನು ದಡಕ್ಕೆ ಸಾಗಿಸಲು ಸುಲಭ ಆಗುತ್ತೆ ಅಂತಾರೆ ಬೋಟ್ ಆಂಬ್ಯುಲೆನ್ಸ್ ಮಾಲೀಕರು.
ಉಳ್ಳಾಲದಲ್ಲಿ ಬೋಟ್ ಆ್ಯಂಬುಲೆನ್ಸ್ ಸೇವೆ
ಈ ಬಗ್ಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಬೋಟ್ ಆಂಬ್ಯುಲೆನ್ಸ್ ಮಾಲೀಕ ಹನೀಫ್, ಸಮುದ್ರದಲ್ಲಿ ಮೀನುಗಾರಿಕೆ ಮಾಡುವವರು ಬಡವರು ಇರ್ತಾರೆ. ಈ ಮೊದಲು ಅವರನ್ನು ರಕ್ಷಣೆ ಮಾಡಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಮೂರು ವರ್ಷಗಳ ಹಿಂದೆ ನಮಗೆ ಈ ಯೋಚನೆ ಬಂತು, ಈಗ ಇದು ಲಭ್ಯವಾಗಿದೆ. ನಮ್ಮ ಯೋಜನೆ ಶುರುವಾದ ಬಳಿಕ ಸರ್ಕಾರ ಕೂಡ ಇದಕ್ಕೆ 7 ಕೋಟಿ ರೂಪಾಯಿಯನ್ನು ಮೂರು ಆ್ಯಂಬುಲೆನ್ಸ್ ಗಾಗಿ ಸೀಮಿತವಾಗಿ ನೀಡಿತ್ತು, ಆದರೆ ಇದುವರೆಗೂ ಆ್ಯಂಬುಲೆನ್ಸ್ ಬಂದಿಲ್ಲ. ಶೀಘ್ರವೇ ಅವು ಕೂಡ ಮೀನುಗಾರರ ಸೇವೆ ಸಿಗಲಿದೆ ಎಂಬ ವಿಶ್ವಾಸವಿದೆ. ಸರ್ಕಾರದೊಂದಿಗೆ ನಾವು ಇರ್ತೇವೆ ಎಂದು ಹೇಳಿದ್ದಾರೆ.
ಇನ್ನು, ಬೋಟ್ ಆಂಬ್ಯುಲೆನ್ಸ್ ರಕ್ಷಣೆಗೆ ಬರುವಾಗಲೇ, ನಮ್ಮೂರ ಧ್ವನಿ ಅನ್ನೋ ಆಂಬ್ಯುಲೆನ್ಸ್ಗೆ ಮಾಹಿತಿ ನೀಡ್ತಾರೆ. ಆಗ ದಡಕ್ಕೆ ಬರುತ್ತಿದ್ದಂತೆ ರಕ್ಷಣೆ ಮಾಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ.
ಒಟ್ನಲ್ಲಿ ಸರ್ಕಾರದ ಸೀ ಆ್ಯಂಬುಲೆನ್ಸ್ಗೆ ಕಾಯದೇ ಮೀನುಗಾರರೇ ಬೋಟ್ ಆಂಬ್ಯುಲೆನ್ಸ್ ಸಿದ್ಧಪಡಿಸಿರೋದು ಶ್ಲಾಘನೀಯ. ಮುಂದೆ ಸರ್ಕಾರ ಆರ್ಥಿಕ ನೆರವು ನೀಡಿದಲ್ಲಿ ಮತ್ತಷ್ಟು ಹೈಟೆಕ್ ಬೋಟ್ ಆಂಬ್ಯುಲೆನ್ಸ್ ತಯಾರು ಮಾಡಬಹುದಾಗಿದೆ. (ವರದಿ: ಕಿಶನ್ ಶೆಟ್ಟಿ, ನ್ಯೂಸ್ 18, ಮಂಗಳೂರು)
Bangalore [Bangalore],Bangalore,Karnataka
Feb 09, 2026 11:17 AM IST