Dakshina Kannada: ವಿದೇಶಿ ಹಣ್ಣುಗಳ ಪ್ರಯೋಗಾಲಯ ದಕ್ಷಿಣ ಕನ್ನಡದ ಈ ಕೃಷಿತೋಟ! | This farm in Dakshina Kannada is a laboratory for foreign fruits!

Dakshina Kannada: ವಿದೇಶಿ ಹಣ್ಣುಗಳ ಪ್ರಯೋಗಾಲಯ ದಕ್ಷಿಣ ಕನ್ನಡದ ಈ ಕೃಷಿತೋಟ! | This farm in Dakshina Kannada is a laboratory for foreign fruits!

Last Updated:

ಮೂರು ತಿಂಗಳಿಗೊಮ್ಮೆ ವಿದೇಶ ಸುತ್ತಿ ಬರುವ ಇವರು ವಿದೇಶದಲ್ಲಿ ಬೆಳೆಯುವ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ಜಿಲ್ಲೆಗೆ ತರುತ್ತಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆಯೇ ಎನ್ನುವ ಪ್ರಶ್ನೆಗೆ ಅಡಿಕೆ ಬೆಳೆಗಾರರಲ್ಲೇ(Nut growers) ಗೊಂದಲವಿದೆ. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಷ್ಟೇ ಹೆಚ್ಚಾಗಿ ಬೆಳೆಯುತ್ತಿದ್ದ ಅಡಿಕೆ, ಇದೀಗ ರಾಜ್ಯದ ಗಡಿದಾಟಿ ಬೇರೆ ರಾಜ್ಯಗಳಲ್ಲೂ ಅಲ್ಲಿನ ಕೃಷಿಕರು ಬೆಳೆಯಲಾರಂಭಿಸಿದ್ದಾರೆ. ಈ ಬೆಳವಣಿಗೆ ಅಡಿಕೆಗೆ ಮಾರುಕಟ್ಟೆಯಲ್ಲಿ(Market) ಬೆಲೆ ಕುಸಿತದ ಸಾಧ್ಯತೆಗೂ ಕಾರಣವಾಗಿದೆ. ಈ ಕಾರಣಕ್ಕಾಗಿ ಕೃಷಿಕರು ಅಡಿಕೆಯ ಬದಲು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಉತ್ತಮ ಆದಾಯ ಗಳಿಸಬಹುದು ಅನ್ನೋದನ್ನು ದಕ್ಷಿಣಕನ್ನಡ ಜಿಲ್ಲೆಯ(Dakshina Kannada District) ಬೆಳ್ತಂಗಡಿ ತಾಲೂಕಿನ ಬಳಂಜ್ ಕೃಷಿಕರೊಬ್ಬರು ತೋರಿಸಿಕೊಟ್ಟಿದ್ದಾರೆ.

ಬಳಂಜ ಫಾರ್ಮ್ ಮೂಲಕ ಖ್ಯಾತಿವೆತ್ತ ಅನಿಲ್ ಬಳಂಜರ ತೋಟದಲ್ಲಿ ದೇಶೀಯ ಹಣ್ಣುಗಳ ಗಿಡಗಳ ಬದಲು ವಿದೇಶೀ ಹಣ್ಣುಗಳ ಗಿಡಗಳೇ ತುಂಬಿ ತುಳುಕುತ್ತಿವೆ. ವಿವಿಧ ರೀತಿಯ ಹಣ್ಣುಗಳನ್ನು ಕೃಷಿಕರು ತಮ್ಮ ತೋಟದಲ್ಲಿ ಬೆಳೆದು, ಅವುಗಳನ್ನು ತಾವೇ ಮಾರುಕಟ್ಟೆಗೆ ಪರಿಚಯಿಸುವ ಕೆಲಸವಾಗಬೇಕು ಎನ್ನುವ ಉದ್ಧೇಶದಿಂದ ಅನಿಲ್ ತಮ್ಮ ತೋಟವನ್ನು ವಿದೇಶೀ ಹಣ್ಣುಗಳ ಪ್ರಯೋಗಾಲಯವನ್ನಾಗಿಯೂ ಮಾಡಿಕೊಂಡಿದ್ದಾರೆ. ಮೂರು ತಿಂಗಳಿಗೊಮ್ಮೆ ವಿದೇಶ ಸುತ್ತಿ ಬರುವ ಇವರು ವಿದೇಶದಲ್ಲಿ ಬೆಳೆಯುವ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ಜಿಲ್ಲೆಗೆ ತರುತ್ತಿದ್ದಾರೆ. ಅಲ್ಲಿನ ಹಣ್ಣಿಗಿರುವ ಬೇಡಿಕೆ, ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಹೀಗೆ ಎಲ್ಲವನ್ನೂ ಅಳೆದು ತೂಗಿದ ಬಳಿಕ ತಮ್ಮ ಫಾರ್ಮ್ ನಲ್ಲಿ ಆ ಗಿಡಗಳನ್ನು ನೆಡುತ್ತಾರೆ. ಗಿಡಗಳು ಬಲಿತು, ಅವುಗಳಿಂದ ಬರುವ ಹಣ್ಣುಗಳು ಕೃಷಿಕನಿಗೆ ಆದಾಯ ತರುವ ಒಂದು ದಾರಿಯಾಗಬಹುದು ಎಂದು ಖಚಿತಪಡಿಸಿಕೊಂಡ ಬಳಿಕವೇ ಅನಿಲ್ ಈ ಗಿಡಗಳಿಂದ ಹೊಸ ಗಿಡಗಳನ್ನು ಬೆಳೆಸಿ ಕೃಷಿಕರಿಗೆ ನೀಡುತ್ತಾರೆ.

ನಮ್ಮ ದೇಶದ ಮಣ್ಣು, ಹವಾಗುಣಕ್ಕೆ ಅನುಗುಣವಾಗಿರುವ ಹಣ್ಣುಗಳ ಗಿಡಗಳನ್ನು ಮಾತ್ರವೇ ಅನಿಲ್ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಥೈಲ್ಯಾಂಡ್, ಬ್ರೆಜಿಲ್, ಮಲೇಶೀಯಾ, ವಿಯೆಟ್ನಾಮ್, ಆಸ್ಟ್ರೇಲಿಯಾ, ಇಂಡೋನೇಷಿಯಾ ಹೀಗೆ ಎಲ್ಲಾ ಕಡೆಗಳಿಗೂ ಹಣ್ಣುಗಳ ಗಿಡಗಳನ್ನು ಹುಡುಕಿ ಹೋಗುವ ಅನಿಲ್ ಅವರ ಬಳಂಜ ಫಾರ್ಮ್ ನಲ್ಲಿ 1500 ಕ್ಕೂ ಮಿಕ್ಕಿದ ವಿದೇಶೀ ಹಣ್ಣುಗಳ ಸಂಗ್ರಹವಿದೆ. ಇವುಗಳಲ್ಲಿ 900 ಕ್ಕೂ ಮಿಕ್ಕಿದ ಹಣ್ಣಿನ ಗಿಡಗಳಲ್ಲಿ ಈಗಾಗಲೇ ಹಣ್ಣುಗಳಾಗಿ, ಎಲ್ಲಾ ಹಣ್ಣುಗಳ ರುಚಿಯನ್ನೂ ಅನಿಲ್ ಕುಟುಂಬ ನೋಡಿದೆ. ಸದ್ಯ ತಮ್ಮ ತೋಟದಲ್ಲಿ ಬೆಳೆಯುವ ಹಣ್ಣುಗಳನ್ನು ಪ್ರಾಣಿ- ಪಕ್ಷಿಗಳಿಗಾಗಿ, ಕೊಮಚ ತಮ್ಮ ಉಪಯೋಗಕ್ಕಾಗಿ, ಉಳಿದವುಗಳನ್ನು ತೋಟಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಮತ್ತು ಹಣ್ಣಿನ ಗಿಡ ಖರೀದಿಸಲು ಉತ್ಸುಕರಾಗಿರುವವರಿಗೆ ನೀಡಲಾಗುತ್ತಿದೆ.

ಸುಮಾರು 35 ಎಕರೆ ಭೂಮಿಯನ್ನು ಹೊಂದಿರುವ ಅನಿಲ್ ತೋಟದಲ್ಲಿ ಯಾವುದು ಇದೆ ಎನ್ನುವುದಕ್ಕಿಂತ, ಯಾವುದು ಇಲ್ಲ ಅನ್ನೋದನ್ನು ಕೇಳಿದರೆ ಸರಿಯಾಗಬಹುದೇನೋ. ಸಾಮಾನ್ಯವಾಗಿ ಕೃಷಿಕರಿಗಾಗಿ ಇಂತಹ ಪ್ರಯೋಗಗಳನ್ನು ಸರಕಾರ ಮತ್ತು ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಮಾಡಬೇಕಿದ್ದರೂ, ಅನಿಲ್ ಮಾತ್ರ ಇದನ್ನು ತನ್ನ ಜವಾಬ್ದಾರಿ ಎನ್ನುವ ಉದ್ಧೇಶದಿಂದ ಮಾಡಿಕೊಂಡು ಬಂದಿದ್ದಾರೆ. ತಮ್ಮ ತೋಟದಲ್ಲಿ ವಿದೇಶೀ ಹಣ್ಣುಗಳನ್ನು ಸಾಕಿ, ಬೆಳೆದ ಬಳಿಕ ಇನ್ನೊಬ್ಬರಿಗೆ ಹಣ್ಣು ಗಿಡಗಳ ನಾಟಿ ಬಗ್ಗೆ ಧೈರ್ಯವನ್ನು ಅನಿಲ್ ಕೃಷಿಕರಿಗೆ ನೀಡಿದ್ದಾರೆ.