Last Updated:
ದಕ್ಷಿಣ ಕನ್ನಡದ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಸಂಚಾರಿ ವಾಹನದ ಮೂಲಕ ಹೈನುಗಾರರ ಮನೆ ಬಾಗಿಲಿಗೆ ಹಾಲು ಸಂಗ್ರಹಿಸಲು ಆರಂಭಿಸಿದೆ. ಈ ವ್ಯವಸ್ಥೆಯಿಂದ ಹೈನುಗಾರರಿಗೆ ಸಮಯ, ವೆಚ್ಚ ಉಳಿತಾಯವಾಗಿದೆ.
ದಕ್ಷಿಣ ಕನ್ನಡ: ನಸುಕಿನಲ್ಲಿ ಎದ್ದು, ಹಾಲು ಕರೆದು (Milk Production), ಮತ್ತೆ 4 ರಿಂದ 5 ಕಿ.ಮೀ. ದೂರದಲ್ಲಿರುವ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಹಾಕುವುದು ಸಾಮಾನ್ಯ ವಿಷಯವಲ್ಲ. ಉಳಿದ ಕೆಲಸಗಳ ಒತ್ತಡಗಳ ಮಧ್ಯೆ ಹಾಲು ಸಕಾಲದಲ್ಲಿ ಸಂಘಕ್ಕೆ ತಲುಪಿಸುವುದು ಹೈನುಗಾರರಿಗೆ (Dairy Farming) ಸವಾಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೃಷಿಕರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳಿಂದ ಹೈನುಗಾರರನ್ನು ಪಾರು ಮಾಡಲು ದಕ್ಷಿಣ ಕನ್ನಡದ (Dakshina Kananda) ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ (Nelyadi Milk Producers Cooperative Society) ಹೊಸ ವ್ಯವಸ್ಥೆಯನ್ನು ಕಂಡುಕೊಂಡಿದೆ. ಸಂಚಾರಿ ವಾಹನದ ಮೂಲಕ ಹೈನುಗಾರರ ಮನೆ ಬಾಗಿಲಿಗೆ ತೆರಳಿ ಹಾಲು ಖರೀದಿಸಲು ಆರಂಭಿಸಿದೆ.
ದಕ್ಷಿಣ ಕನ್ನಡದಲ್ಲಿ ಹೈನುಗಾರಿಕೆಗೆ ಉತ್ತೇಜನ
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಶಿಫಾರಸ್ಸಿನಂತೆ ಯುನಿಯೂನ್ ಬ್ಯಾಂಕ್ ಅನುದಾನದಲ್ಲಿ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇವಿ ಗೂಡ್ಸ್ ರಿಕ್ಷಾ ಬಂದಿದೆ. ಸಂಘದ ವ್ಯಾಪ್ತಿಯ ನಿಗದಿತ ಸ್ಥಳಗಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹೋಗಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಪ್ರಸ್ತುತ ಕಟ್ಟೆಮಜಲು ಹಾಗೂ ಹಳೆಮುಂಡ್ಲಕ್ಕೆ ತೆರಳಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ಹೈನುಗಾರರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಹೈನುಗಾರರ ಸಮಯ, ವೆಚ್ಚವೂ ಉಳಿಕೆಯಾಗಿದೆ.
ಮನೆಬಾಗಿಲಿಗೆ ಹಾಲು ಖರೀದಿ
ಇವಿ ಗೂಡ್ಸ್ ವಾಹನವನ್ನು ಗ್ರಾಮೀಣ ಪ್ರದೇಶಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಏರು ಪ್ರದೇಶಗಳಿಗೆ ಅನುಕೂಲವಾಗುವಂತೆ ಗೇರ್ ಸಹ ಅಳವಡಿಸಿಕೊಳ್ಳಲಾಗಿದೆ. 550 ಕೆ.ಜಿ. ತನಕ ಇದರಲ್ಲಿ ಸಾಗಾಟ ಮಾಡಬಹುದಾಗಿದೆ. ಲಿಫ್ಟಿಂಗ್ ವ್ಯವಸ್ಥೆಯೂ ಸಹ ಇದೆ. 2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದಲ್ಲಿ ಸುಮಾರು 80 ಕಿ.ಮೀ. ಓಡಾಟ ನಡೆಸಲಿದೆ. ಒಟ್ಟಿನಲ್ಲಿ ಈ ವ್ಯವಸ್ಥೆಯು ಹೈನುಗಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಟ್ಟಿದೆ. ಇದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಇತಿಹಾಸದಲ್ಲಿ ಮೊದಲ ಪ್ರಯೋಗವೂ ಆಗಿದೆ.
ನೆಲ್ಯಾಡಿಯಲ್ಲಿ ಹಾಲು ಸಂಗ್ರಹದ ಹೊಸ ಯುಗ
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಳೆದ ಮಾರ್ಚ್ ತಿಂಗಳಿನಿಂದ ಇವಿ ಗೂಡ್ಸ್ ರಿಕ್ಷಾ ಮೂಲಕ ಹಾಲು ಸಂಗ್ರಹ ಆರಂಭಗೊಂಡಿದೆ. ಇದರಿಂದಾಗಿ ಹಾಲು ಸಂಗ್ರಹದಲ್ಲೂ ಹೆಚ್ಚಳಗೊಂಡಿದೆ. ಈ ಹಿಂದೆ ದಿನದಲ್ಲಿ 1100 ಲೀಟರ್ ಹಾಲು ಸಂಗ್ರಹ ಆಗುತ್ತಿದ್ದು, ವಾಹನ ಬಂದ ಬಳಿಕ ದಿನವೊಂದಕ್ಕೆ 1500 ಲೀಟರ್ ನಷ್ಟು ಹಾಲು ಸಂಗ್ರಹ ಆಗುತ್ತಿದೆ. ಹಾಲು ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಂಘಕ್ಕೆ ಹಾಲು ಪೂರೈಸುವ ಹೈನುಗಾರರ ಸಂಖ್ಯೆಯೂ ಹೆಚ್ಚಳ ಆಗಿದೆ.
Dakshina Kannada,Karnataka
June 21, 2025 12:22 PM IST