ಸ್ವಾತಂತ್ರ್ಯಪೂರ್ವದಲ್ಲಿ ರಫ್ತು ಹೆಚ್ಚು ಕಡಿಮೆ ಬೇರೆ ದೇಶಗಳಲ್ಲಿ ನೆಲೆಸಿದ್ದ ಭಾರತೀಯರ ಬಳಕೆಗೆ ಮಾತ್ರ ಸೀಮಿತ ಆಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶ ಆದ್ದರಿಂದ,ವಿದೇಶೀ ಮಾರುಕಟ್ಟೆಯಲ್ಲಿ ಇವಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಂದು ಇಡಿ ಅಡಿಕೆ,ಹೋಳು ಅಡಿಕೆ, ಹುಡಿ ಅಡಿಕೆ ಇತ್ಯಾದಿಗಳು ರಫ್ತು ಆಗುತ್ತಿದೆ. ಈ ರಫ್ತಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.ಈ ರಫ್ತು ಹೆಚ್ಚಾಗಿ ಖಾಸಗಿ ವಲಯದಿಂದಲೇ ಆಗುತ್ತಿದ್ದು,ಇಲ್ಲಿ ಸಹಕಾರಿ ಸಂಸ್ಥೆಗಳ ಪಾಲು ಕಡಿಮೆ.
ಲಭ್ಯ ಅಂಕಿ ಅಂಶಗಳ ಪ್ರಕಾರ ಕಳೆದ ಸಾಲಿನಲ್ಲಿ ಸುಮಾರು ಹನ್ನೊಂದು ಸಾವಿರದ ಎಂಟುನೂರು ಟನ್ ಅಡಿಕೆ ದೇಶದಿಂದ ರಫ್ತು ಆಗಿ ಸುಮಾರು ನಾನೂರು ಕೋಟಿ ವಿದೇಶಿ ವಿನಿಮಯ ದೊರಕಿದೆ.ಈ ಪ್ರಮಾಣ ಅದಕ್ಕಿಂತ ಮೊದಲಿನ ವರ್ಷದಲ್ಲಿ ಆರು ಸಾವಿರ ಟನ್ ಆಗಿತ್ತು.ಇದರೊಂದಿಗೆ ಮೌಲ್ಯ ವರ್ಧಿತ ಉತ್ಪನ್ನಗಳ ರಫ್ತು ಸುಮಾರು ಎರಡು ಸಾವಿರ ಟನ್ ಆಗಿದ್ದು, ಇದು ಬರೀ ಸರಕಾರದ ಅಂಕಿ ಅಂಶಗಳು, ಇನ್ನೂ ಲೆಕ್ಕಕ್ಕೆ ಸಿಗದೇ ಇರುವ ಪ್ರಮಾಣದಲ್ಲಿ ಇವುಗಳ ರಫ್ತು ಮಾಡಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ಅಡಿಕೆಯ ರಫ್ತನ್ನು ಶ್ರೀಲಂಕಾ,ಭಾರತ,ಇಂಡೋನೇಷಿಯಾ, ಥೈಲ್ಯಾಂಡ್, ಮ್ಯಾನ್ಮಾರ್, ಚೀನಾ, ಸಿಂಗಾಪೂರ್, ಮಲೇಶಿಯ, ಇತ್ಯಾದಿ ರಾಷ್ಟ್ರಗಳು ಕೈಗೊಳ್ಳುತ್ತಿವೆ. ಭಾರತದಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಅಡಿಕೆಯನ್ನು ವಿವಿಧ ರೂಪಗಳಲ್ಲಿ ರಫ್ತು ಮಾಡುತ್ತಿದ್ದು,ಇದರ ಪ್ರಮಾಣ ರಾಷ್ಟ್ರದಿಂದ ರಾಷ್ಟ್ರಕ್ಕೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ನಮ್ಮಲ್ಲಿನ ವಿವಿಧ ರೂಪದ ಅಡಿಕೆಗೆ ಇಂಗ್ಲೆಂಡ್, ನೇಪಾಳ, ಸೌದಿಅರೇಬಿಯಾ, ಸಿಂಗಾಪುರ, ಮಾಲ್ಡೀವ್ಸ್, ದಕ್ಷಿಣ ಆಫ್ರಿಕಾ ಮುಖ್ಯ ಗ್ರಾಹಕರಾಗಿದ್ದು, ಇವುಗಳೊಂದಿಗೆ ರಷ್ಯಾ, ಆಸ್ಟ್ರೇಲಿಯಾ, ಟಾಂಜಾನಿಯಾ, ಫಿಲಿಫೈನ್ಸ್, ಸಂಯುಕ್ತ ಅರಬ್ ರಾಷ್ಟ್ರಗಳು, ಅಮೇರಿಕಾ,ಮಾಲ್ವಿ, ಕೆನಡಾ, ಬಾಂಗ್ಲಾ, ಶ್ರೀಲಂಕಾ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
ದೇಶದಿಂದ ಇಡಿ ಅಡಿಕೆ ಮುಖ್ಯವಾಗಿ ದಕ್ಷಿಣ ಆಫ್ರಿಕಾ,ಸಂಯುಕ್ತ ಅರಬ್ ಸಂಸ್ಥಾನ, ಇಂಗ್ಲೆಂಡ್, ನೇಪಾಳ,ಕೆನಡಾ, ಅಮೇರಿಕಾ,ಜಪಾನ್, ಮಲ್ವಿ,ಫ್ರಾನ್ಸ್,ಸ್ಪೇನ್ ಇತ್ಯಾದಿ ರಾಷ್ಟ್ರಗಳಿಗೆ ಮಾಡಲಾಗುತ್ತದೆ.ಒಟ್ಟಾರೆಯಾಗಿ ಭಾರತದಿಂದ ಸುಮಾರು ಮೂವತ್ತೈದು ರಾಷ್ಟ್ರಗಳಿಗೆ ಈ ರಫ್ತು ಆಗುತ್ತಿದೆ. ಇಲ್ಲಿ ಕೆಲವು ಸಾಂಪ್ರದಾಯಿಕ ರಾಷ್ಟ್ರಗಳನ್ನು ಬಿಟ್ಟು ಉಳಿದ ರಾಷ್ಟ್ರಗಳು ಆಗೊಮ್ಮೆ ಈಗೊಮ್ಮೆ ಆಮದು ಮಾಡಿಕೊಳ್ಳುತ್ತವೆ. ಇದರೊಂದಿಗೆ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳ ಲಭ್ಯತೆಯಿಂದಾಗಿ ಇಡಿ ಅಡಿಕೆಯ ಬೇಡಿಕೆ ಹಂತ ಹಂತವಾಗಿ ಕುಸಿಯುತ್ತಿದೆ.
ಅಡಿಕೆಯನ್ನು ಮೂಲ ವಸ್ತುವನ್ನಾಗಿ ಬಳಸಿ ತಯಾರಾಗುವ ವಿವಿಧ ರೀತಿಯ ಮೌಲ್ಯ ವರ್ಧಿತ ಉತ್ಪನ್ನಗಳಾದ ಪಾನ್ ಮಸಾಲ,ಗುಟ್ಕಾ,ಸುಗಂಧ ಸುಪಾರಿ,ಸಿಹಿ ಸುಪಾರಿ ಇತ್ಯಾದಿಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.ಈ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಇವಕ್ಕೆ ಇಂದು ಇರುವ ಮುಖ್ಯ ಗ್ರಾಹಕ ರಾಷ್ಟ್ರಗಳೆಂದರೆ ಸಂಯುಕ್ತ ಅರಬ್ ರಾಷ್ಟ್ರಗಳು, ಇಂಗ್ಲೆಂಡ್, ಕೆನಡಾ, ಅಮೇರಿಕಾ,ದಕ್ಷಿಣ ಆಫ್ರಿಕಾ, ಸೌದಿಅರೇಬಿಯಾ, ನೇಪಾಳ, ಮೆಕ್ಸಿಕೋ, ಬಲ್ಗೇರಿಯಾ, ಕುವೈಟ್,ಕೀನ್ಯಾ ಮತ್ತು ಶ್ರೀಲಂಕಾ. ಇವುಗಳ ಪೈಕಿ ಅರಬ್ ರಾಷ್ಟ್ರಗಳು ಮತ್ತು ಇಂಗ್ಲೆಂಡ್ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ.ಇಲ್ಲಿ ಸಿಹಿಮತ್ತು ಸುಗಂಧ ಸುಪಾರಿಗಳಿಗೆ ಸುಮಾರು 58 ರಾಷ್ಟ್ರಗಳಲ್ಲಿ ಬೇಡಿಕೆ ಇದೆ.
ಈ ರೀತಿಯ ಉತ್ಪನ್ನಗಳಿಗೆ ಥಾಯ್ಲೆಂಡ್, ಸಿಂಗಾಪೂರ್, ಮಲೇಶಿಯ ಹಾಗೂ ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರಗಳಲ್ಲಿ ಅಧಿಕ ಬೇಡಿಕೆ ಇದೆ.ಒಟ್ಟಾಗಿ 2015-16 ರ ಸಮಯದಲ್ಲಿ ಸಿಹಿ ಮತ್ತು ಸುಗಂಧ ಸುಪಾರಿ ರಫ್ತಿನ ಪ್ರಮಾಣ ಸುಮಾರು ಮುನ್ನೂರ ಅರುವತ್ತಮೂರು ಟನ್ ಇದ್ದದು ಈಗ ಇದು ಸುಮಾರು ಮೂರು ಸಾವಿರ ಟನ್ ಆಗಿದೆ.ಇನ್ನು ಪಾನ್ ಮಸಾಲ ಮತ್ತು ಗುಟ್ಟಾದ ರಫ್ತಿನ ಪ್ರಮಾಣ ಇದೇ ಅವಧಿಯಲ್ಲಿ ಸುಮಾರು ಒಂದು ಸಾವಿರದ ನಲ್ವತ್ತು ಟನ್ ಇಂದ ಸುಮಾರು ಎರಡೂವರೆ ಸಾವಿರ ಟನ್ ಗೆ ಏರಿದೆ ಎನ್ನುತ್ತಾರೆ ಅಡಿಕೆಯ ಬಗ್ಗೆ ಸಂಶೋಧನೆ ನಡೆಸಿರುವ ಆರ್ಥಿಕ ತಜ್ಞರಾದ ವಿಘ್ನೇಶ್ವರ ವರ್ಮುಡಿ.
ದೇಶದಲ್ಲಿ ಅಡಿಕೆಯ ಉತ್ಪಾದನೆ ಹೆಚ್ಚಾದ ಪ್ರಮಾಣಕ್ಕೆ ಅನುಗುಣವಾಗಿ ರಫ್ತು ಹೆಚ್ಚಾಗಿಲ್ಲ.ಇದಕ್ಕೆ ಮುಖ್ಯ ಕಾರಣ ಆಂತರಿಕ ಬಳಕೆ ಹೆಚ್ಚಾಗುತ್ತಾ ಹೋಗಿರುವುದು. ವಿದೇಶದಲ್ಲಿ ಮೂಲ ರೂಪದ ಅಡಿಕೆಗೆ ಇರುವ ಬೇಡಿಕೆ ನಿಧಾನ ಗತಿಯಲ್ಲಿ ಏರಿದರೆ,ಮೌಲ್ಯ ವರ್ಧಿತ ಉತ್ಪನ್ನಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ.
Dakshina Kannada,Karnataka
July 16, 2025 2:23 PM IST