Last Updated:
ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆ ಕುರಿತು ತಾಂತ್ರಿಕ ಸಮಿತಿಯು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಕರ್ನಾಟಕ ಒಪ್ಪಿಗೆ, ಕೇರಳ ಮತ್ತು ತಮಿಳುನಾಡು ಭಿನ್ನಾಭಿಪ್ರಾಯ. 90 ದಿನ ನಿಷೇಧದಿಂದ ಮೀನು ಸಂತತಿ ಸಂರಕ್ಷಣೆ.
ದಕ್ಷಿಣ ಕನ್ನಡ: ಏಕರೂಪದ ಚುನಾವಣೆಯಾಯ್ತು ಈಗ ಏಕರೂಪದ ಮೀನುಗಾರಿಕಾ (Fishing) ನಿಷೇಧ ಬಂತಾ? ಅನ್ನೋ ಗುಸುಗುಸು ಕೇಳಿ ಬರ್ತಿದೆ. ಆದರೆ ಇದು ವಿವಾದವಲ್ಲ. ಮೀನುಗಾರರ (Fishermen) ಮನವಿಯ ಮೇಲೆ ತೆಗೆದುಕೊಳ್ಳುತ್ತಿರುವ ತೀರ್ಮಾನ. ಈ ವಿಷಯವಾಗಿ ಮೀನುಗಾರಿಕೆ ನಿಷೇಧದ ಅವಧಿಯನ್ನು ವಿಸ್ತರಿಸುವುದು, ಮೀನು (Fish) ಸಂತತಿ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಭಾರತ (India) ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ರಚಿಸಿರುವ ತಾಂತ್ರಿಕ ಸಮಿತಿಯು ತನ್ನ ವರದಿಯನ್ನು ಡಿಸೆಂಬರ್-ಜನವರಿಯ ಒಳಗೆ ಕೇಂದ್ರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ.
ದೇಶಾದ್ಯಂತ ಮೀನುಗಾರಿಕೆ ನಿಷೇಧದ ಅವಧಿ ವಿಸ್ತರಣೆ ಮಾಡುವ ಕುರಿತು ತಾಂತ್ರಿಕ ಸಮಿತಿಯು, ಸಂಬಂಧಿಸಿದ ಎಲ್ಲ ರಾಜ್ಯಗಳ ಜತೆ ಸಮಾಲೋಚಿಸಿ ವರದಿ ಸಲ್ಲಿಸುವ ಮೊದಲು ಒಮ್ಮತದ ತೀರ್ಮಾನಕ್ಕೆ ಬರಲಿದೆ. ನಿಷೇಧದ ಅವಧಿ ವಿಸ್ತರಿಸುವುದರಿಂದ ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸಲು ನೆರವಾಗಲಿದೆ. ನಿಷೇಧದ ಅವಧಿ ಹೆಚ್ಚಿಸಲು ಈಗಾಗಲೇ ಗುಜರಾತ್ ಒಪ್ಪಿಕೊಂಡಿದೆ. ಕರ್ನಾಟಕವೂ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಿನ್ನಾಭಿಪ್ರಾಯಗಳಿವೆ.
ಮೀನುಗಾರರು ದೇಶಾದ್ಯಂತ ಏಕರೂಪದ ನಿಷೇಧದ ಅವಧಿಗಾಗಿ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ನಿಷೇಧದ ಅವಧಿಯನ್ನು ಹೆಚ್ಚಿಸಲು ಸಿದ್ಧರಿದ್ದಾರೆ ಎಂದು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೊಧನಾ ಸಂಸ್ಥೆಯ ನಿರ್ದೇಶಕ ಡಾ. ಗ್ರೀನ್ಸನ್ ಜಾರ್ಜ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳು ಕೇಂದ್ರ ಸಮಿತಿಯ ಪ್ರಸ್ತಾವನೆಗೆ ಒಪ್ಪಿಕೊಂಡರೆ, ಕರ್ನಾಟಕ ಸರ್ಕಾರ ಮೀನುಗಾರಿಕೆ ನಿಷೇಧ ಅವಧಿಯನ್ನು 61 ದಿನಗಳಿಂದ 90 ದಿನಗಳವರೆಗೆ ವಿಸ್ತರಿಸಲು ಸಿದ್ಧವಾಗಿದೆ. ಆದರೆ ತಮಿಳುನಾಡು ಮತ್ತು ಕೇರಳ ಸರಕಾರ ಈ ಕುರಿತು ತಮ್ಮ ಅಂತಿಮ ನಿರ್ಧಾರವನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಲಿದೆ ಎನ್ನುವ ನಿರ್ಧಾರದ ಮೇಲೆ ನಿಷೇಧದ ಸಮಯ ನಿರ್ಧಾರವಾಗಲಿದೆ.
ಯಾಕಪ್ಪಾ ಈ ತೀರ್ಮಾನವೆಂದರೆ ಮೀನಿನ ಸಂತತಿ ಉಳಿಸಲು, ಈ ಮೀನುಗಾರಿಕೆಯಲ್ಲಿ ಹಲವು ಲೋಪಗಳಿವೆ ಮುಖ್ಯವಾಗಿ ಇದು ವೈಜ್ಞಾನಿಕವಾಗಿಲ್ಲ.ಸಂತತಿ ಬೆಳೆಯುವ ಮುನ್ನವೇ ಕತ್ತರಿ ಹಾಕಿದರೆ ಮುಂದೊಂದು ದಿನಕ್ಕೆ ಮೀನು ಸಿಗುವುದೇ?
ಈಗಾಗಲೇ ಸಮುದ್ರದಲ್ಲಿ ಮೀನುಗಾರರಿಗೆ ಮೀನಿನ ಕೊರತೆ ಎದುರಾಗಿದೆ. ಮೀನುಗಳು ಮೊಟ್ಟೆ ಇಟ್ಟು ಅವುಗಳು ಉಪಯೋಗಕ್ಕೆ ಸಿದ್ಧಗೊಳ್ಳುವ ಮೊದಲೇ ಅವುಗಳನ್ನು ಹಿಡಿಯುವ ಪ್ರಕ್ರಿಯೆಯೂ ಹೆಚ್ಚಾಗಿದ್ದು, ಇದರಿಂದಲೂ ಸಮುದ್ರದಲ್ಲಿ ಮೀನುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.
Dakshina Kannada,Karnataka
July 09, 2025 11:59 AM IST