Last Updated:
ದಕ್ಷಿಣ ಕನ್ನಡದಲ್ಲಿ ಅಕೇಶಿಯಾ ಮರಗಳು ವ್ಯಾಪಕವಾಗಿ ಹಬ್ಬಿ, ನೈಸರ್ಗಿಕ ಸಸ್ಯಗಳನ್ನು ತೆರಮೆಗೆ ಸರಿಸುತ್ತಿವೆ. ಹುಲ್ಲುಗಾವಲು ಪ್ರದೇಶಗಳನ್ನು ಆಕ್ರಮಿಸಿಕೊಂಡು, ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗಿದೆ.
ದಕ್ಷಿಣ ಕನ್ನಡ: ವಿದೇಶಿ ತಳಿಯಾದ ಅಕೇಶಿಯಾ ಮರ (Akeshiya Tree) ಇಂದು ಎಲ್ಲೆಂದರಲ್ಲಿ ಬೆಳೆಯುತ್ತೆ. ದಕ್ಷಿಣ ಕನ್ನಡದ (Dakshina Kannada) ಕೆಲವು ಕಡೆಗಳಲ್ಲಿ ಈ ಅಕೇಶಿಯಾ ಮರಗಳೇ ತುಂಬಿದ ಕಾಡುಗಳನ್ನೂ (Forest) ನೋಡಬಹುದಾಗಿದೆ. ಒಂದು ಕಾಲದಲ್ಲಿ ಅರಣ್ಯ ಅತಿಕ್ರಮಣ ತಡೆಗಟ್ಟಲು ಮತ್ತು ಗ್ರಾಮೀಣ ಜನರಿಗೆ ಸೌದೆ, ಕಟ್ಟಿಗೆ ಒದಗಿಸಲು ಅಕೇಶಿಯ ನಡುತೋಪುಗಳನ್ನು ಅರಣ್ಯ ಇಲಾಖೆ ನೆಟ್ಟು ಬೆಳೆಸಿತ್ತು. ಆದರೆ ಈಗ ಈ ಅಕೇಶಿಯಾ ಗಿಡಗಳನ್ನು ನೆಡುವ ಅಗತ್ಯವಿಲ್ಲ. ಇವುಗಳ ಬೀಜಗಳು ಬಿದ್ದ ಕಡೆಗಳಲ್ಲೆಲ್ಲಾ ಅಕೇಶಿಯಾ ಗಿಡಗಳು ಹುಟ್ಟಿಕೊಳ್ಳುತ್ತಿದ್ದು, ನೈಸರ್ಗಿಕ (Natural) ಮರಗಳನ್ನೂ ಇವುಗಳು ತೆರಮರೆಗೆ ಸರಿಸುವಷ್ಟರ ಹಂತಕ್ಕೆ ಇವುಗಳು ಬೆಳೆದು ನಿಂತಿವೆ.
ಪಶ್ಚಿಮ ಘಟ್ಟಗಳ ಹುಲ್ಲುಗಾವಲು ಪ್ರದೇಶಗಳನ್ನು ಅಕೇಶಿಯ ಮರಗಳು ಆಕ್ರಮಿಸಿಕೊಂಡಿವೆ. ಇದರಿಂದ ಜಿಂಕೆ, ಕಡವೆ ಮುಂತಾದ ವನ್ಯಜೀವಿಗಳಿಗೆ ಆಹಾರವಾದ ಹುಲ್ಲು ದೊರೆಯದೆ, ಅವು ಗ್ರಾಮಾಂತರ ಪ್ರದೇಶಗಳತ್ತ ಬರುತ್ತಿವೆ ಎನ್ನುವ ಒಂದು ವಾದವೂ ಇದೆ. ಇವುಗಳನ್ನು ಹಿಂಬಾಲಿಸಿ ಹುಲಿ, ಚಿರತೆಗಳೂ ನಾಡಿನತ್ತ ಬರುತ್ತಿದ್ದು, ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಅಕೇಶಿಯಾ ಮರಗಳು ಕೇವಲ ಹತ್ತು ವರ್ಷಗಳ ಅಂತರದಲ್ಲಿ ಸುಮಾರು 30 ರಿಂದ 40 ಸೆಂಟಿ ಮೀಟರ್ ಸುತ್ತಳತೆಯ ಮರಗಳಾಗಿ ಬೆಳೆಯುತ್ತವೆ. ಬಡ ಜನರು ತಮ್ಮ ಮನೆಗಳಲ್ಲಿ ಮರದ ಬಾಗಿಲು, ಕಿಟಕಿಗಳನ್ನು ಅಳವಡಿಸಲು ಕಾರಣವಾಗಿದ್ದೂ ಈ ಅಕೇಶಿಯಾ ಮರಗಳೇ. ಬೀಟಿ, ಸಾಗುವಾಣಿ, ಹಲಸು ಹೀಗೆ ಅತ್ಯಂತ ಬೆಲೆ ಬಾಳುವ ಮರಗಳನ್ನು ಬಳಸಿ ಮನೆಗೆ ಬಾಗಿಲು, ಕಿಟಕಿ, ಮಂಚಗಳನ್ನು ಮಾಡುವ ತಾಕತ್ತು ಕೇವಲ ಶ್ರೀಮಂತ ವರ್ಗದಲ್ಲಿ ಮಾತ್ರ ಇದ್ದ ಸಂದರ್ಭದಲ್ಲಿ ಅಕೇಶಿಯಾ ಮರಗಳು ಈ ಬೆಲೆಬಾಳುವ ಮರಗಳಿಗೆ ಪರ್ಯಾಯವಾದ ವ್ಯವಸ್ಥೆಯಾಗಿ ಜನಸಾಮಾನ್ಯನ ಕೈಗೆ ಸಿಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಈ ಅಕೇಶಿಯಾ ಗಿಡಗಳನ್ನು ನೆಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ನಿಲ್ಲಿಸಿವೆ. ಇಂದು ಕೇವಲ ಈ ಹಿಂದೆ ಇದ್ದ ಅಕೇಶಿಯಾ ಮರಗಳಿಂದ ಬಿದ್ದ ಬೀಜಗಳ ಮೂಲಕವೇ ಗಿಡಗಳು ಬೆಳೆಯುತ್ತಿದ್ದು, ಹೊಸದಾಗಿ ಬೀಜ ಬಿತ್ತುವ ಕಾರ್ಯವನ್ನು ಅರಣ್ಯ ಇಲಾಖೆ ನಿಲ್ಲಿಸಿದೆ. ಅಕೇಶಿಯಾ ಗಿಡಗಳ ಹೂವಿನ ವಾಸನೆ ಗ್ರಹಿಸಿದರೆ ಅಸ್ತಮಾ ರೋಗ ಬಾಧಿತರ ರೋಗ ಉಲ್ಬಣಗೊಳ್ಳಲುತ್ತದೆ ಎನ್ನುವ ವಿಚಾರವೂ ಕರಾವಳಿ ಭಾಗದಲ್ಲಿದೆ.
Dakshina Kannada,Karnataka
October 12, 2025 5:39 PM IST