Last Updated:
ಪೊಳಲಿ, ಮಳಲಿ, ಕರಿಯಂಗಳ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆಯಲಾಗುವ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಕೃಷಿಕರೇ ಈ ಹಣ್ಣು ಬೆಳೆದು ಮಾರಾಟ ಮಾಡುತ್ತಾರೆ. ಇವರು ವೃತ್ತಿಪರ ಕೃಷಿಕರಲ್ಲ, ಹವ್ಯಾಸವಷ್ಟೇ.
ದಕ್ಷಿಣ ಕನ್ನಡ: ಬೇಸಿಗೆಯ ಧಗೆಗೆ ತಿನ್ನಲು ಕಲ್ಲಂಗಡಿ ಹಣ್ಣು(Watermelon), ಕಲ್ಲಂಗಡಿ ಜ್ಯೂಸ್ ದೊರಕಿದರೆ ಆಹಾ ಅದೆಷ್ಟು ಖುಷಿಯಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ(Polali Rajarajeshwari Jatra Mahotsava) ಕಲ್ಲಂಗಡಿ ಹಣ್ಣೇ ಪ್ರಸಾದವೆಂಬ ಪ್ರತೀತಿಯಿದೆ. ಮಾರ್ಚ್ನಿಂದ ಏಪ್ರಿಲ್ ವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯ ವೇಳೆ ಸಂತೆಯಲ್ಲಿ ಕಲ್ಲಂಗಡಿ ಹಣ್ಣಿನದ್ದೇ ಭರ್ಜರಿ ವ್ಯಾಪಾರ. ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕಲ್ಲಂಗಡಿ ಹಣ್ಣನ್ನು ಎಷ್ಟು ಹಣ ಕೊಟ್ಟಾದರೂ ಖರೀದಿಸುತ್ತಾರೆ.
ಇಲ್ಲಿನ ಕಲ್ಲಂಗಡಿಯನ್ನು ಪುರಾಣದ ರಕ್ತಬೀಜಾಸುರನೆಂದೇ ನಂಬಲಾಗುತ್ತದೆ. ಕಲ್ಲಂಗಡಿಯೊಳಗಿನ ಕೆಂಪು ತಿರುಳು ರಾಕ್ಷಸನ ರಕ್ತವನ್ನು ಸಂಕೇತಿಸಿದರೆ ಅದರೊಳಗಿನ ಬೀಜಗಳು ಬೀಜಾಸುರಾದಿಗಳನ್ನು ಸಂಕೇತಿಸುತ್ತದೆ. ಪೊಳಲಿ, ಮಳಲಿ, ಕರಿಯಂಗಳ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆಯಲಾಗುವ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಕೃಷಿಕರೇ ಈ ಹಣ್ಣು ಬೆಳೆದು ಮಾರಾಟ ಮಾಡುತ್ತಾರೆ. ಇವರು ವೃತ್ತಿಪರ ಕೃಷಿಕರಲ್ಲ, ಹವ್ಯಾಸವಷ್ಟೇ.
ಇದನ್ನೂ ಓದಿ: Dakshina Kannada: ತರಕಾರಿ ಬೆಳೆದು ಮುಖ್ಯಮಂತ್ರಿಗಳ ಗಮನ ಸೆಳೆದ ಸರಕಾರಿ ಶಾಲೆಯ ಮಕ್ಕಳು!
ಹೊರಗಿನ ಕೃಷಿಕರು ಇಲ್ಲಿ ಕಲ್ಲಂಗಡಿ ವ್ಯಾಪಾರಕ್ಕೆ ಬಂದರೆ ಅದು ಮಾರಾಟವಾಗೋಲ್ಲ. ಏಕೆಂದರೆ ಸ್ಥಳೀಯ ತಳಿಯ ಆಕಾರ, ಬಣ್ಣಕ್ಕಿಂತ ಇತರ ತಳಿಯ ಕಲ್ಲಂಗಡಿ ಭಿನ್ನವಾಗಿರುತ್ತದೆ. ಇತರೆಡೆಯ ಕಲ್ಲಂಗಡಿ ಮೊಟ್ಟೆಯಾಕಾರವನ್ನು ಹೋಲುತ್ತಿದ್ದರೆ, ಪೊಳಲಿಯಲ್ಲಿ ಬೆಳೆಯುವ ಕಲ್ಲಂಗಡಿ ಮಾನವನ ತಲೆಯ ಆಕಾರವನ್ನು ಹೋಲುತ್ತದೆ. ಪೊಳಲಿಯ ಜೀವನದಿ ಫಲ್ಗುಣಿ ನದಿಯ ಸುತ್ತಮುತ್ತಲಿನ ಮರಳು, ಮಣ್ಣು, ಕಲ್ಲಂಗಡಿ ಬೆಳೆಯಲು ಉತ್ತಮ ಪ್ರದೇಶವಾಗಿದೆ. ಇಲ್ಲಿನ ಕಲ್ಲಂಗಡಿಯನ್ನು ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆಯಲಾಗುತ್ತದೆ.
ಪೊಳಲಿ ಜಾತ್ರೆ ಯಾವ ದಿನ ಹಾಗೂ ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ ಕಲ್ಲಂಗಡಿ ಬೆಳೆಗೆ ಬೀಜ ಬಿತ್ತಲಾಗುತ್ತದೆ. ಡಿಸೆಂಬರ್ ಅಂತ್ಯದಿಂದ ಜನವರಿ 25ರೊಳಗೆ ಬೀಜ ಹಾಕಲಾಗುತ್ತದೆ. ಬಳ್ಳಿ ಬೆಳೆದು ಮಾರ್ಚ್ ಅಂತ್ಯಕ್ಕೆ ಕಾಯಿ ಬಲಿತು, ಹಣ್ಣುಗಳು ಪೊಳಲಿ ಜಾತ್ರೆಯ ವೇಳೆಗೆ ಮಾರಾಟಕ್ಕೆ ದೊರೆಯುತ್ತದೆ. ವಿಶೇಷವೆಂದರೆ ಪೊಳಲಿ ಜಾತ್ರೆಯ ಹೊರತಾಗಿ ಬೇರೆ ಸಂದರ್ಭ ಬೀಜ ಹಾಕಿದರೂ ಇಲ್ಲಿ ಬಳ್ಳಿ ಬೆಳೆಯೋದಿಲ್ಲ, ಕಾಯಿ ಬಿಡೋದಿಲ್ಲ.
ಒಟ್ಟಿನಲ್ಲಿ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿಕರು ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣನ್ನು ಭಕ್ತರು ಪ್ರಸಾದ ರೂಪದಲ್ಲಿ ಮನೆಗೆ ಒಯ್ಯುತ್ತಿರುವುದು ಇಲ್ಲಿನ ವಿಶೇಷ.
Dakshina Kannada,Karnataka
April 09, 2025 1:37 PM IST