Last Updated:
ಮಂಗಳೂರು ಕೂಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಬಳಿಕ ಎನ್‌ಎಚ್ ಅಧಿಕಾರಿಗಳು ತಡವಾಗಿ ಗುಂಡಿ ಮುಚ್ಚಿದ್ದಾರೆ, ಜನರ ಆಕ್ರೋಶ ಹೆಚ್ಚುತ್ತಿದೆ.
ಮಂಗಳೂರು: ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಆಗಿದೆ ಮಂಗಳೂರಿನ (Mangaluru) ಎನ್.ಎಚ್. ಅಧಿಕಾರಿಗಳ ಕಥೆ. ದರೋಡೆ (Theft) ಹಾಕಿದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ಮಂಗಳೂರು ನಗರದ ಕೂಳೂರಿನ ಭೀಕರ ಅಪಘಾತದ ಬಳಿಕ ರಸ್ತೆ ಗುಂಡಿಯ (Pot Hole) ದುರಸ್ತಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮಂಗಳೂರು ನಗರದ ಕೂಳೂರಿನಲ್ಲಿ ರಸ್ತೆ ಗುಂಡಿಗೆ ದ್ವಿಚಕ್ರ ಚಾಲಕಿ ಬಿದ್ದು ಲಾರಿ ಹರಿದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತ ಎನ್‌ಎಚ್ ಅಧಿಕಾರಿಗಳು (Officers) ರಸ್ತೆ ಗುಂಡಿಯನ್ನು ಮುಚ್ಚಿ ತೇಪೆ ಹಚ್ಚುತ್ತಿದ್ದಾರೆ.
ಎನ್‌ಎಚ್ 66 ಸುರತ್ಕಲ್‌ನಿಂದ ಕೆಪಿಟಿವರೆಗೆ ಅಲ್ಲಲ್ಲಿ ಸಂಪೂರ್ಣ ಹೊಂಡಗುಂಡಿ ಬಿದ್ದಿದೆ. ಇತ್ತೀಚೆಗೆ ಜನರ ಆಕ್ರೋಶದಿಂದ ಕೂಳೂರು ಬ್ರಿಡ್ಜ್ ಬಳಿ ಹೆದ್ದಾರಿ ಪ್ರಾಧಿಕಾರ ಗುಂಡಿ ಮುಚ್ಚುವ ಕಾರ್ಯ ಮಾಡಿತ್ತು. ಬೇರೆ ಗುಂಡಿಗಳು ಮುಚ್ಚುವ ಗೋಜಿಗೆ ಹೋಗದ ಪರಿಣಾಮ ದ್ವಿಚಕ್ರ ಸವಾರರು ಈ ರಸ್ತೆಯಲ್ಲಿ ಹರಸಾಹಸಪಟ್ಟು ಸಂಚಾರ ನಡೆಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚಿ ನಿರ್ವಹಣೆ ಮಾಡಬೇಕಿದ್ದ ಎನ್.ಎಚ್. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಮಳೆಗಾಲದಲ್ಲಿ ದೊಡ್ಡದೊಡ್ಡ ಹೊಂಡಗಳು ಸೃಷ್ಟಿಯಾಗುತ್ತಿದೆ.
ಒಂದೆರಡು ಸವಾರರು ರಸ್ತೆ ಗುಂಡಿಗೆ ಬಲಿಯಾದ ಬಳಿಕವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂಬುದನ್ನು ಅಧಿಕಾರಿಗಳು ಇದೀಗ ಮತ್ತೆ ಸಾಬೀತು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಎ.ಜೆ.ಆಸ್ಪತ್ರೆ ಸಿಬ್ಬಂದಿ ಮಹಿಳೆಯೋರ್ವರು ಮೃತಪಟ್ಟ ಕೆಲವೇ ಕ್ಷಣಗಳಲ್ಲಿ ಕೂಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳು ಧಾವಿಸುತ್ತಿದ್ದಾರೆ. ಈ ಕೆಲಸ ಮೊದಲೇ ಆಗುತ್ತಿದ್ದರೆ, ಒಂದು ಪ್ರಾಣವಾದರೂ ಉಳಿಯುತ್ತಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವಿಶಂಕರ್ ಅವರು, ‘ನಾವು ಎರಡೆರಡು ಬಾರಿ ಗುಂಡಿ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ನೋಟಿಸ್ ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಅಸಹಾಯಕತೆ ತೋರಿದ್ದಾರೆ.
ಮಂಗಳೂರಿನಿಂದ ನಂತೂರಿನಿಂದ ಸುರತ್ಕಲ್ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಮಹಿಳೆ ಮೃತಪಟ್ಟ ಸ್ಥಳದಲ್ಲೇ ಈ ಹಿಂದೆಯೂ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಮಂಗಳೂರು ನಗರದ ನಂತೂರು ಜಂಕ್ಷನ್‌ನಲ್ಲಿ ಸೆ. 6ರಂದು ರಾತ್ರಿ 8.45ಕ್ಕೆ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ರಸ್ತೆ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್ ಚಾಲಕ ಸಮಯಪ್ರಜ್ಞೆ ಹಠಾತ್ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೂ. 10ರಂದು ಪಣಂಬೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರಿನಲ್ಲಿ ಸುರತ್ಕಲ್ ಜನತಾ ಕಾಲೊನಿ ನಿವಾಸಿ ಮಹಮ್ಮದ್ ಅಶ್ರಫ್ ಹಾಗೂ ಕೊಲ್ನಾಡು ನಿವಾಸಿ ಮೊಹಮ್ಮದ್ ಷರೀಫ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಹೆದ್ದಾರಿ ಗುಂಡಿ ತಪ್ಪಿಸುವ ಭರದಲ್ಲಿ ಬೈಕ್ ಸವಾರರಿಬ್ಬರೂ ಹೆದ್ದಾರಿಗೆ ಬಿದ್ದಿದ್ದರು. ಈ ಸಂದರ್ಭ ಹಿಂಬದಿ ಸವಾರ ಅಶ್ರಫ್ ಮೇಲೆ ಬುಲೆಟ್ ಟ್ಯಾಂಕರ್ ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದರು.
ನಿಮ್ಮ ಕೆಲಸ ಸರಿಯಾಗಿ ಮಾಡಿದ್ದರೆ ಎರಡು ಜೀವ ಉಳಿಯುತ್ತಿತ್ತು!
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಒಳ ರಸ್ತೆಗಳ ಹೊಂಡಕ್ಕೆ ಬಿದ್ದು ಹಲವು ಅಪಘಾತಗಳು ನಡೆದಿವೆ. ಇದರಿಂದ ಸಾವು, ನೋವು, ವಾಹನಗಳಿಗೆ ಹಾನಿ ಪ್ರಕರಣಗಳು ದಾಖಲಾಗಿವೆ. ಆದರೂ ಈ ಪ್ರಕರಣಗಳನ್ನು ಇನ್ನೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಅಧಿಕಾರಿಗಳೇ ಇನ್ನಾದರೂ ಮೊದಲೇ ಎಚ್ಚೆತ್ತುಕೊಳ್ಳಿ. ಪ್ರಾಣಬಲಿಗಾಗಿ ಕಾಯದಿರಿ ಎಂಬುದೇ ನಮ್ಮ ಆಶಯ.
Mangalore,Dakshina Kannada,Karnataka
September 11, 2025 10:41 AM IST