Last Updated:
ಡೇವಿಡ್ ವಾರ್ನರ್ ಐಪಿಎಲ್ನಿಂದ ಹೊರಗುಳಿದು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ಗೆ 2.58 ಕೋಟಿ ರೂಪಾಯಿಗೆ ಸೇರ್ಪಡೆಗೊಂಡಿದ್ದಾರೆ. ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಐಪಿಎಲ್ನ ದಿಗ್ಗಜ ಆಟಗಾರ ಡೇವಿಡ್ ವಾರ್ನರ್ರನ್ನ (David Warner) 2025ರ ಋತುವಿನಲ್ಲಿ ಯಾವುದೇ ತಂಡ ಖರೀದಿಸದಿರುವುದರಿಂದ ಐಪಿಎಲ್ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಆದರೆ, ಈ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಈಗ ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪಾದಾರ್ಪಣೆಗೆ ಸಿದ್ಧರಾಗಿದ್ದಾರೆ. ಕರಾಚಿ ಕಿಂಗ್ಸ್ (Karachi Kings) ತಂಡವು ಪಿಎಸ್ಎಲ್ ಇತಿಹಾಸದ ಅತ್ಯಂತ ದುಬಾರಿ ಖರೀದಿಯಾಗಿ ವಾರ್ನರ್ರನ್ನು 2.58 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. ಜೊತೆಗೆ, ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಲಾಗಿದೆ.
ಐಪಿಎಲ್ನಿಂದ ಪಿಎಸ್ಎಲ್ಗೆ ಎಂಟ್ರಿ
ವಾರ್ನರ್ರ ಐಪಿಎಲ್ ಪಯಣವು ಸನ್ರೈಸರ್ಸ್ ಹೈದರಾಬಾದ್ನಿಂದ ಆರಂಭವಾಗಿತ್ತು. ನಂತರ ಡೆಲ್ಲಿ ಕ್ಯಾಪಿಟಲ್ಸ್ಗೆ ಸೇರಿದರು. 2024ರ ಋತುವಿನಲ್ಲಿ ಡೆಲ್ಲಿಯ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ವಾರ್ನರ್, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವುದೇ ತಂಡದಿಂದ ಆಯ್ಕೆಯಾಗಲಿಲ್ಲ. ಇದೀಗ, ಪಿಎಸ್ಎಲ್ನ ಕರಾಚಿ ಕಿಂಗ್ಸ್ಗೆ ಸೇರಿರುವ ಅವರು, ಪ್ಲಾಟಿನಂ ವಿಭಾಗದ ಅಡಿಯಲ್ಲಿ ತಂಡಕ್ಕೆ ದೊಡ್ಡ ಶಕ್ತಿಯಾಗಲಿದ್ದಾರೆ.
ಇದನ್ನೂ ಓದಿ: ಸಿಎಸ್ಕೆ ತಂಡಕ್ಕೆ ಆ ಯುವ ಆಟಗಾರನ ಅಗತ್ಯವಿದೆ! ಮಾಜಿ ಕ್ರಿಕೆಟಿಗನಿಂದ ಧೋನಿ ಪಡೆಗೆ ಮಹತ್ವದ ಸೂಚನೆ
ಪತ್ರಿಕಾಗೋಷ್ಠಿಯಲ್ಲಿ ವಾರ್ನರ್ರ ಉತ್ತರ
ಪಿಎಸ್ಎಲ್ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾರ್ನರ್ಗೆ ಐಪಿಎಲ್ನಿಂದ ಹೊರಗುಳಿದ ಬಗ್ಗೆ ಪಾಕಿಸ್ತಾನಿ ವರದಿಗಾರನೊಬ್ಬ ಅನಿರೀಕ್ಷಿತ ಪ್ರಶ್ನೆ ಕೇಳಿದರು. “ಐಪಿಎಲ್ 2025ರಲ್ಲಿ ನೀವು ಮಾರಾಟವಾಗದಿದ್ದ ಬಳಿಕ, ಪಿಎಸ್ಎಲ್ನಲ್ಲಿ ಆಡುತ್ತಿರುವುದಕ್ಕೆ ಭಾರತೀಯ ಅಭಿಮಾನಿಗಳು ನಿಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ, ಇದಕ್ಕೆ ನಿಮ್ಮ ಉತ್ತರವೇನು?” ಎಂದು ಕೇಳಲಾಯಿತು. ಇದಕ್ಕೆ ವಾರ್ನರ್ ಶಾಂತವಾಗಿ ಉತ್ತರಿಸಿದರು, “ ಇದೇ ಮೊದಲ ಬಾರಿಗೆ ಇಂತಹ ವಿಷಯ ಕೇಳುತ್ತಿದ್ದೇನೆ. ನನಗೆ ಕ್ರಿಕೆಟ್ ಆಡುವುದಷ್ಟೇ ಗೊತ್ತು. ಪಿಎಸ್ಎಲ್ನಲ್ಲಿ ಅವಕಾಶ ಸಿಕ್ಕಿದೆ, ಇದನ್ನು ಆನಂದಿಸಲು ಬಯಸುತ್ತೇನೆ ” ಎಂದು ತಿರುಗೇಟು ನೀಡಿದ್ದಾರೆ.
ಕರಾಚಿ ಕಿಂಗ್ಸ್ನ ನಾಯಕ
ವಾರ್ನರ್, ಕರಾಚಿ ಕಿಂಗ್ಸ್ನ ನಾಯಕನಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಉತ್ಸುಕರಾಗಿದ್ದಾರೆ. “ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದಾಗಿ ಪಿಎಸ್ಎಲ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಈಗ ಕರಾಚಿಯೊಂದಿಗೆ ಆಡುವುದಕ್ಕೆ ಉತ್ಸುಕನಾಗಿದ್ದೇನೆ,” ಎಂದು ಅವರು ಹೇಳಿದರು. ವಾರ್ನರ್ರ ಈ ಹೊಸ ಅಧ್ಯಾಯವು ಪಿಎಸ್ಎಲ್ನಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಧೋನಿ ತಲೆ ಕೆಲಸ ಮಾಡುತ್ತಿಲ್ಲ, ಇಲ್ಲ ಅಂದಿದ್ರೆ ಆ ತಪ್ಪು ಮಾಡ್ತಿರಲಿಲ್ಲ! ಮಾಜಿ ಕ್ರಿಕೆಟಿಗ ಅಚ್ಚರಿ ಹೇಳಿಕ
ವಾರ್ನರ್ರ ಟಿ20 ದಾಖಲೆ
ವಾರ್ನರ್ ಟಿ20 ಕ್ರಿಕೆಟ್ನಲ್ಲಿ 399 ಪಂದ್ಯಗಳಲ್ಲಿ 12,913 ರನ್ ಗಳಿಸಿದ್ದಾರೆ (37.00 ಸರಾಸರಿ, 140.23 ಸ್ಟ್ರೈಕ್ ರೇಟ್). ಐಪಿಎಲ್ನಲ್ಲಿ 176 ಪಂದ್ಯಗಳಲ್ಲಿ 6,397 ರನ್ (41.54 ಸರಾಸರಿ) ಗಳಿಸಿರುವ ಅವರು, ಟಿ20ಯ ದಿಗ್ಗಜರಲ್ಲಿ ಒಬ್ಬರಾಗಿದ್ದಾರೆ. ಪಿಎಸ್ಎಲ್ನಲ್ಲಿ ಅವರ ಪ್ರದರ್ಶನವು ಕರಾಚಿ ಕಿಂಗ್ಸ್ನ ಯಶಸ್ಸಿಗೆ ನಿರ್ಣಾಯಕವಾಗಲಿದೆ.
April 12, 2025 5:51 PM IST