Last Updated:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚೆಂಡೆತ್ತಡ್ಕ ಬಯಲಿನಲ್ಲಿ ನೀಲಿ, ನೇರಳೆ ಬಣ್ಣದ ಸೀತಾಶ್ರು ಹೂವುಗಳು ಮಳೆಗಾಲದ ಕೊನೆಯಲ್ಲಿ ಅರಳಿ, ಪ್ರವಾಸಿಗರನ್ನು ಆಕರ್ಷಿಸುತ್ತವೆ.
ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಜಾಂಬ್ರಿ ಗುಹಾ ಪ್ರದೇಶವಾದ ಚೆಂಡೆತ್ತಡ್ಕ ಬಯಲಿನಲ್ಲಿ ನೀಲಿ (Blue), ನೇರಳೆ ಬಣ್ಣದಲ್ಲಿ ವಿಸ್ತಾರವಾಗಿ ಅರಳಿದ ‘ಸೀತಾಶ್ರು’ ಹೂ (Flower) (ನೀರು ಗುಳ್ಳೆ ಗಿಡ) ದೈವಿಕ ಭೂಮಿಯ ಸೌಂದರ್ಯವನ್ನು ಹೆಚ್ಚಿಸಿದೆ. ಪ್ರತಿ ವರ್ಷ ಮಳೆಗಾಲದ ಕೊನೆಯಲ್ಲಿ ಓಣಂ ಹಬ್ಬದ ಆಗಮನದ ಸಮಯದಲ್ಲಿ ಅರಳುವ ಹೂಗಳು ವಿಶೇಷ ಸೌಂದರ್ಯದೊಂದಿಗೆ ಚಾರಣಿಗರನ್ನು ಸ್ವಾಗತಿಸುತ್ತಿದೆ.
ಪಾರೆ ಪ್ರದೇಶದಲ್ಲಿ ಕಲ್ಲುಬಂಡೆಗಳ ನಡುವೆ ನೀರು ನಿಲ್ಲುವ ಜಾಗದ ಅಪರೂಪದ ಹಸಿರು ಹೊದಿಕೆ, ಸಣ್ಣ ಗಾಳಿಗೂ ತೂಗಾಡುವ ಹೂ ಅರಳಿದ ಸಸ್ಯಗಳ ಸಮೂಹ ಹತ್ತಿರದಿಂದ ನೋಡಲು ತುಂಬಾ ಸೊಗಸಾಗಿ ಕಾಣುತ್ತವೆ. ಗಾಳಿಯೊಂದಿಗೆ ಪಸರಿಸುತ್ತಾ, ನಿಂತಲ್ಲೆ ನರ್ತನವಾಡುವ ಹೂವಿನ ಸೌಂದರ್ಯವನ್ನು ಪ್ರವಾಸಿಗರು ಆಸ್ವಾದಿಸುತ್ತಾರೆ.
ಚೆಂಡೆತ್ತಡ್ಕ ಬಯಲಿನಲ್ಲಿ ಮಳೆಯಿಂದ ರೂಪುಗೊಂಡ ಜಲಮೂಲಗಳಲ್ಲಿ ಅರಳುವ ಹೂವುಗಳು, ಹೂವಿನ ಮಕರಂದವನ್ನು ಹೀರುವ ಜೇನುನೊಣಗಳು, ಸಣ್ಣ ಜೀವಿಗಳು, ಕಪ್ಪೆಗಳು, ಜೌಗು ಪ್ರದೇಶದ ಹುಳು ಹುಪ್ಪಟೆಗಳನ್ನು ತಿನ್ನುವ ಅಪರೂಪದ ಪಕ್ಷಿಗಳು ಸಹಿತ ಜೀವವೈವಿಧ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳವಾಗಿದೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಫೋಟೋ, ವಿಡಿಯೋ ತೆಗೆದು ರೀಲ್ಸ್ ಮಾಡಿ ಫೇಸ್ ಬುಕ್ , ಇನ್ಸ್ಟಾಗ್ರಾಂ, ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಹರಿಬಿಡುವವರೂ ಇದ್ದಾರೆ.
ಉಟ್ರಿಕ್ಯುಲೇರಿಯಾ ಪ್ರಬೇಧ, ಉಟ್ರಿಕ್ಯುಲೇರಿಯಾ ರೆಟಿಕ್ಯುಲಾಟಾ ಕುಲ, ಲೆಂಟಿಬುಲೇರಿಯಾಸಿ ಕುಟುಂಬಕ್ಕೆ ಸೇರಿದ ಸೀತಾಶ್ರು ಹೂವನ್ನು ನೀರುಗುಳ್ಳೆ, ಕೃಷ್ಣ ಹೂ, ಕಾಕ್ಕ ಪೂ, ತೋರಿ ಬೆಳೆ ಎಂಬ ಹೆಸರಿನಲ್ಲೂ ಕರೆಯಲಾಗುತ್ತಿದೆ. ಭಾರತ ಮತ್ತು ಶ್ರೀಲಂಕಾದ ಹುಲ್ಲುಗಾವಲು, ಕಡಿಮೆ ಎತ್ತರದ ಬಂಡೆಗಳ ನಡುವೆ ತೇವಾಂಶವುಳ್ಳ ಮಣ್ಣಿನಲ್ಲಿ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಭೂಮಂಡಲ ಅಥವಾ ಜಲಚರ ಸಸ್ಯವಾಗಿ ಬೆಳೆಯುತ್ತದೆ. ಒಂದೂವರೆ ಅಡಿ ಎತ್ತರಕ್ಕೆ ಬೆಳೆಯುವ ಗಿಡಗಳು ಬುಡದಿಂದಲೆ ಅರ್ಧದಿಂದ ಒಂದಡಿ ಸೆಂ.ಮೀ. ಉದ್ದಕ್ಕೆ ತೆಳ್ಳಗೆ ನೆಟ್ಟಗೆ ಜೋಡಿಯಾಗಿರುವ ಕಾಂಡ, ಹಲವಾರು ಕಿರಿದಾದ ರೇಖೀಯ-ಆಯತಾಕಾರದ ಎಲೆಗಳನ್ನು ಹೊಂದಿದೆ. ತುಟಿಯಂತಿರುವ ಗಾಢ ನೀಲಿ ನೇರಳೆ ಬಣ್ಣದ ಹೂವುಗಳು ತಿಳಿ ಬಣ್ಣದ ಉದ್ದದ ನಾಳವನ್ನು ಹೊಂದಿರುತ್ತದೆ. ಇವು ಸಣ್ಣ ಗಾಳಿಗೂ ಕಂಪಿಸುತ್ತವೆ.
Dakshina Kannada,Karnataka
August 17, 2025 7:07 AM IST