Last Updated:
ದೇಶಾದ್ಯಂತ ಕಳೆದುಹೋದ, ಕದ್ದ, ಲೂಟಿ ಮಾಡಿದ ಮತ್ತು ನಂತರ ಮರುಪಡೆಯಲಾದ ಎಲ್ಲಾ ಆಯುಧಗಳ ವಿವರಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸುವುದೇ ಇದರ ಈ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ದೇಶ. ಪ್ರತಿಯೊಂದು ಶಸ್ತ್ರಾಸ್ತ್ರವನ್ನು ಅದರ ಸರಣಿ ಸಂಖ್ಯೆ, ಮಾದರಿ, ಕ್ಯಾಲಿಬರ್, ಹಾಗೂ ಪತ್ತೆಯಾದ ಅಥವಾ ಮರುಪಡೆಯಲಾದ ಸ್ಥಳದ ಆಧಾರದಲ್ಲಿ ಗುರುತಿಸಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ದೆಹಲಿ: ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ಭಾರತ (India) ಮೊದಲ ಬಾರಿಗೆ ತಾಂತ್ರಿಕವಾಗಿ (Technically) ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಒಳಭಾಗದಲ್ಲಿ ಅಕ್ರಮವಾಗಿ ಸಂಚರಿಸುವ ಶಸ್ತ್ರಾಸ್ತ್ರಗಳ ಮೇಲೆ ಕಣ್ಣಿಟ್ಟುಕೊಳ್ಳಲು, ಕೇಂದ್ರ ಗೃಹ ಸಚಿವ (Centra Home Minister) ಅಮಿತ್ ಶಾ (Amit Sha) ಅವರು ದೇಶದ ಮೊದಲ ಕೇಂದ್ರೀಕೃತ ಡಿಜಿಟಲ್ ಶಸ್ತ್ರಾಸ್ತ್ರಗಳ ಡೇಟಾಬೇಸ್ ಅನ್ನು ಉದ್ಘಾಟಿಸಿದ್ದಾರೆ. ಈ ಮಹತ್ವದ ವ್ಯವಸ್ಥೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಸಮ್ಮೇಳನದಲ್ಲಿ ಪ್ರಾರಂಭಿಸಲಾಯಿತು. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಡಿಜಿಟಲ್ ಟ್ರ್ಯಾಕಿಂಗ್ ಎಂದರೇ ಏನು? ಅದರ ಕಾರ್ಯ ವ್ಯಾಪ್ತಿ ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ದೇಶಾದ್ಯಂತ ಕಳೆದುಹೋದ, ಕದ್ದ, ಲೂಟಿ ಮಾಡಿದ ಮತ್ತು ನಂತರ ಮರುಪಡೆಯಲಾದ ಎಲ್ಲಾ ಆಯುಧಗಳ ವಿವರಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸುವುದೇ ಇದರ ಈ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ದೇಶ. ಪ್ರತಿಯೊಂದು ಶಸ್ತ್ರಾಸ್ತ್ರವನ್ನು ಅದರ ಸರಣಿ ಸಂಖ್ಯೆ, ಮಾದರಿ, ಕ್ಯಾಲಿಬರ್, ಹಾಗೂ ಪತ್ತೆಯಾದ ಅಥವಾ ಮರುಪಡೆಯಲಾದ ಸ್ಥಳದ ಆಧಾರದಲ್ಲಿ ಗುರುತಿಸಲಾಗುತ್ತದೆ.
ಇದುವರೆಗೆ, ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಯು ಪ್ರತ್ಯೇಕ ರಾಜ್ಯಗಳು ಮತ್ತು ಇಲಾಖೆಗಳಲ್ಲಿಯೇ ಸೀಮಿತವಾಗಿತ್ತು. ಇದರ ದುರುಪಯೋಗವನ್ನು ಅಪರಾಧಿಗಳು ಸುಲಭವಾಗಿ ಮಾಡಿಕೊಳ್ಳುತ್ತಿದ್ದರು. ಒಂದು ರಾಜ್ಯದಿಂದ ಕದ್ದ ಆಯುಧವನ್ನು ಮತ್ತೊಂದು ರಾಜ್ಯದಲ್ಲಿ ಬಳಸಿದರೂ, ಅದರ ಮೂಲ ಪತ್ತೆಹಚ್ಚುವುದು ಕಷ್ಟವಾಗುತ್ತಿತ್ತು. ಈ ಅಂತರವೇ ಸಂಘಟಿತ ಅಪರಾಧ ಮತ್ತು ಭಯೋತ್ಪಾದನಾ ಜಾಲಗಳಿಗೆ ದೊಡ್ಡ ಲಾಭವಾಗಿತ್ತು. ಹೊಸ ಡಿಜಿಟಲ್ ಡೇಟಾಬೇಸ್ ಈ ಅಂತರವನ್ನು ಸಂಪೂರ್ಣವಾಗಿ ಮುಚ್ಚುವ ಸಾಮರ್ಥ್ಯ ಹೊಂದಿದೆ. ಉದಾಹರಣೆಗೆ, ಬಿಹಾರದಲ್ಲಿ ಕಳೆದುಹೋದ ಆಯುಧವು ಉತ್ತರ ಪ್ರದೇಶದಲ್ಲಿ ನಡೆದ ಅಪರಾಧ ಪ್ರಕರಣದಲ್ಲಿ ಪತ್ತೆಯಾದರೆ, ಆ ಆಯುಧ ಯಾವಾಗ, ಎಲ್ಲಿಂದ ಕಳೆದುಹೋಯಿತು, ಯಾವ ಪ್ರಕರಣಕ್ಕೆ ಸಂಬಂಧಿಸಿದೆ ಎಂಬ ಸಂಪೂರ್ಣ ಮಾಹಿತಿ ಕ್ಷಣಾರ್ಧದಲ್ಲೇ ತನಿಖಾಧಿಕಾರಿಗಳಿಗೆ ಲಭ್ಯವಾಗುತ್ತದೆ. ಇದರಿಂದ ತನಿಖೆಯ ವೇಗ ಮತ್ತು ನಿಖರತೆ ಎರಡೂ ಹೆಚ್ಚಾಗುತ್ತವೆ.
ಈ ವೇದಿಕೆಯನ್ನು NIA ನಿರ್ವಹಿಸುತ್ತಿದ್ದು, ಇದು ಅತ್ಯಂತ ಸುರಕ್ಷಿತ ಡಿಜಿಟಲ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಧಿಕೃತ ಪೊಲೀಸ್ ಇಲಾಖೆ, ರಾಜ್ಯ ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ಹಾಗೂ ಗುಪ್ತಚರ ಘಟಕಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಸಾಮಾನ್ಯರಿಗೆ ಅಥವಾ ಅನಧಿಕೃತ ಬಳಕೆದಾರರಿಗೆ ಇದಕ್ಕೆ ಪ್ರವೇಶವಿಲ್ಲ. ಈ ಡೇಟಾಬೇಸ್ ಕೇವಲ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯಲ್ಲ. ಇದು ವಿಶ್ಲೇಷಣೆ ಆಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಹೊಸ ಆಯುಧ ಪತ್ತೆಯಾದ ಕ್ಷಣದಲ್ಲೇ, ಅದರ ಹಿಂದಿನ ಚಲನವಲನ, ಅಪರಾಧ ಸಂಬಂಧಗಳು ಮತ್ತು ರಾಜ್ಯಾಂತರ ಸಂಪರ್ಕಗಳ ಕುರಿತು ಎಚ್ಚರಿಕೆ ನೀಡುತ್ತದೆ. ಒಂದು ರಾಜ್ಯದಲ್ಲಿ ದಾಖಲಾಗಿರುವ ಮಾಹಿತಿಯು ದೇಶದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ತಕ್ಷಣವೇ ಗೋಚರವಾಗುತ್ತದೆ. ಇದರಿಂದ ತನಿಖೆ ವೇಗವಾಗಿ ಪೂರ್ಣಗೊಳ್ಳಲು ಸಹಾಯಕವಾಗಿದೆ.
ಈ ವ್ಯವಸ್ಥೆಯಿಂದ ರಾಜ್ಯ ಪೊಲೀಸ್ ಪಡೆಗಳು ಮತ್ತು ವಿಶೇಷ ಕಾರ್ಯಪಡೆಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಜೊತೆಗೆ, ಕೇಂದ್ರ ಸಶಸ್ತ್ರ ಪಡೆಗಳು, ಗಡಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆ, ಈ ಕೇಂದ್ರೀಕೃತ ಡಿಜಿಟಲ್ ಶಸ್ತ್ರಾಸ್ತ್ರಗಳ ಡೇಟಾಬೇಸ್ ಭಾರತದಲ್ಲಿ ಆಂತರಿಕ ಭದ್ರತೆ ಬಲಪಡಿಸುವ ದಿಕ್ಕಿನಲ್ಲಿ ದೊಡ್ಡ ತಿರುವು ಎಂದು ಹೇಳಬಹುದು. ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧ ಜಾಲಗಳನ್ನು ಮುರಿಯುವ ಈ ಪ್ರಯತ್ನವು ಭವಿಷ್ಯದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ನೀಡಲಿದೆ.
Bangalore [Bangalore],Bangalore,Karnataka
Dec 29, 2025 11:31 AM IST