Last Updated:
ಗೇರು ಬೀಜವನ್ನು ಆಹಾರ ಉತ್ಪನ್ನವಾಗಿ ಬಳಸುವ ಪರಂಪರೆಯನ್ನು ಕರಾವಳಿ ಭಾಗದ ಜನರು ಆರಂಭಿಸಿದ್ದು, ಬ್ರೆಜಿಲ್ ಮೂಲದ ಈ ಬೆಳೆ ಇಂದು ದುಬಾರಿ ಕ್ಯಾಶ್ಯೂ ನಟ್ ಆಗಿದೆ.
ದಕ್ಷಿಣ ಕನ್ನಡ: ಇಂದು ಅತ್ಯಂತ ದುಬಾರಿ ಮತ್ತು ಶ್ರೀಮಂತರು (Rich) ತಿನ್ನುವ ಡ್ರೈ ಫ್ರೂಟ್ಸ್ ಪಟ್ಟಿಯಲ್ಲಿರುವ ಗೇರು ಬೀಜಕ್ಕೆ (ಗೋಡಂಬಿ) ಈ ಮನ್ನಣೆ ಸಿಗುವಂತೆ ಮಾಡಿದೋರು ಕರಾವಳಿ ಭಾಗದ (Coastal) ಜನ ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಕೇವಲ ಗೇರು ಹಣ್ಣನ್ನು (Cashew) ತಿಂದು ಗೇರು ಬೀಜವನ್ನು ಎಸೆಯುತ್ತಿದ್ದ ಕಾಲದಲ್ಲಿ, ಗೇರು ಬೀಜವನ್ನು ಆಹಾರ ಉತ್ಪನ್ನವಾಗಿ (product) ಬಳಸಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಕರಾವಳಿಯವರಾಗಿದ್ದು, ವಿದೇಶದ ಈ ಬೆಳೆ ಕರಾವಳಿಗೆ ಹೇಗೆ ಬಂತು ಅನ್ನೋದರ ಒಂದು ಸಣ್ಣ ಸ್ಟೋರಿ ನೋಡಿ.
ಗೇರು ಮೂಲತ ಲ್ಯಾಟಿನ್ ಅಮೇರಿಕಾದ ಬ್ರೆಜಿಲ್ ದೇಶಕ್ಕೆ ಸೇರಿದ ಹಣ್ಣು. 16 ನೇ ಶತಮಾನದಲ್ಲಿ ನಮ್ಮ ದೇಶವನ್ನು ಪೋರ್ಚುಗೀಸರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ಈ ಗೇರು ಬೆಳೆ ಕರಾವಳಿಗೆ ಪ್ರವೇಶ ಪಡೆದಿತ್ತು. ಭಾರತಕ್ಕೆ ಬರುವ ಸಂದರ್ಭದಲ್ಲಿ ಪೋರ್ಚುಗೀಸರು ತಮ್ಮ ಜೊತೆ ಗೇರು ಮತ್ತು ಸೀತಾಫಲವನ್ನು ತರುತ್ತಿದ್ದರು. ಹೀಗೆ ತಂದ ಗೇರು ಹಣ್ಣನ್ನು ತಿಂದು ಅದರ ಬೀಜವನ್ನು ಎಸೆಯುತ್ತಿದ್ದರು. ಹೀಗೆ ಎಸೆದ ಬೀಜಗಳು ಗಿಡವಾಗಿ ಕರಾವಳಿ ಭಾಗದಲ್ಲಿ ಬೆಳೆದಿದೆ.
ಗೇರು ಬೆಳೆಯ ತವರಾದ ಬ್ರೆಜಿಲ್‌ನಲ್ಲೂ ಅಂದು ಗೇರು ಹಣ್ಣನ್ನು ತಿಂದು ಬೀಜವನ್ನು ಎಸೆಯುತ್ತಿದ್ದರು. ಆದರೆ ಕರಾವಳಿಯಲ್ಲಿ ಬೆಳೆದ ಗೇರು ಗಿಡಗಳಲ್ಲಿ ಫಲಬಂದ ಗೇರು ಹಣ್ಣಿನ ಜೊತೆಗೆ ಕರಾವಳಿ ಭಾಗದ ಜನ ಗೇರು ಬೀಜವನ್ನೂ ಒಂದು ಆಹಾರ ಉತ್ಪನ್ನವಾಗಿ ಬಳಸಲು ಆರಂಭಿಸಿದ್ದರು. ಮೊದಲಿಗೆ ಗೇರು ಹಣ್ಣಿನಿಂದ ಬೇರ್ಪಡಿಸಿದ ಬೀಜವನ್ನು ಕೆಂಡದಲ್ಲಿ ಬೇಯಿಸಿ, ಬಳಿಕ ಬೀಜದೊಳಗಿನ ತಿರುಳನ್ನು ತಿನ್ನಲು ಪ್ರಾರಂಭಿಸಿದ್ದರು. ಈ ತಿರುಳೇ ಇಂದು ಕ್ಯಾಶ್ಯೂ ನಟ್ ಎನ್ನುವ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
ಗೇರು ಬೆಳೆಯ ತವರಿನ ಜನರಿಗೇ ತಿಳಿಯದ ಈ ರಹಸ್ಯವನ್ನು ಭೇಧಿಸಿದ ಹೆಗ್ಗಳಿಕೆಯ ಜೊತೆಗೆ ಗೇರು ಬೀಜಕ್ಕೆ ಇಂದು ಸಿಗುತ್ತಿರುವ ಮನ್ನಣೆಗೂ ಕರಾವಳಿ ಭಾಗದ ಜನರೇ ಕಾರಣರಾಗಿದ್ದಾರೆ. ಬಡವರು ಬೆಳೆಸಿ ಶ್ರೀಮಂತರು ತಿನ್ನುವ ಬೆಳೆ ಗೇರಾಗಿದೆ. ಯಾಕೆಂದರೆ ಬೆಳೆದ ಗೇರು ಬೀಜವನ್ನು ಮಾರಾಟ ಮಾಡಿದ ಬಳಿಕ ಅದೇ ಬೀಜಗಳು ಸಂಸ್ಕರಣೆಗೊಂಡು ಮಾರುಕಟ್ಟೆಗೆ ಬಂದಾಗ ಅದರ ಬೆಲೆ ಗಗನಮುಖಿಯಾಗಿರುತ್ತೆ.
Dakshina Kannada,Karnataka
September 27, 2025 1:49 PM IST