Last Updated:
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ನ್ಯೂಜಿಲೆಂಡ್ ಕ್ರಿಕೆಟ್ (New Zealand) ತಂಡ ಶನಿವಾರ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (ODI Series) ಇಂಗ್ಲೆಂಡ್ ತಂಡವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ವೆಲ್ಲಿಂಗ್ಟನ್ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್ಗಳ ರೋಮಾಂಚಕ ಜಯ ಸಾಧಿಸಿದೆ. ನ್ಯೂಜಿಲೆಂಡ್ನ ಏಕದಿನ ಇತಿಹಾಸದಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದ್ದು ಇದು ಎರಡನೇ ಬಾರಿ. 42 ವರ್ಷಗಳ ಹಿಂದೆ ಮೊದಲ ಬಾರಿ ಈ ಸಾಧನೆ ಮಾಡಿತ್ತು. ನ್ಯೂಜಿಲೆಂಡ್ ವೆಲ್ಲಿಂಗ್ಟನ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 222 ರನ್ಗಳಿಗೆ ಸೀಮಿತಗೊಳಿಸಿ, ನಂತರ 44.4 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಜೆಫ್ ಹೊವರ್ತ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡವು 1983ರಲ್ಲಿ ಇಂಗ್ಲೆಂಡ್ ವಿರುದ್ಧ 3-0 ಅಂತರದ ಕ್ಲೀನ್ ಸ್ವೀಪ್ ಪೂರ್ಣಗೊಳಿಸಿತು. ಬೇ ಓವಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್ 4 ವಿಕೆಟ್ಗಳಿಂದ, ಹ್ಯಾಮಿಲ್ಟನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು 5 ವಿಕೆಟ್ಗಳಿಂದ ಮತ್ತು ಮೂರನೇ ಪಂದ್ಯವನ್ನು 2 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ನ್ಯೂಜಿಲೆಂಡ್ ಈ ಎಲ್ಲಾ ಪಂದ್ಯಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಗೆದ್ದಿತು.
ಪಂದ್ಯದ ಕುರಿತು ಹೇಳುವುದಾದರೆ, 223 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ನ್ಯೂಜಿಲೆಂಡ್ ಉತ್ತಮ ಆರಂಭವನ್ನು ನೀಡಿತು. ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟ ಹಂಚಿಕೊಂಡರು. ಡೆವೊನ್ ಕಾನ್ವೇ 44 ಎಸೆತಗಳಲ್ಲಿ 34 ರನ್ಗಳಿಸಿ ರನೌಟ್ ಆದರು. ಮುಂದಿನ ಓವರ್ನಲ್ಲಿ ರಾಚಿನ್ ರವೀಂದ್ರ (46) ಕೂಡ ನಿರ್ಗಮಿಸಿದರು. ವಿಲ್ ಯಂಗ್ ಕೂಡ ಕೇವಲ ಒಂದು ರನ್ ಗಳಿಸಿದ ನಂತರ ನಿರ್ಗಮಿಸಿದರು.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಟಾಮ್ ಲೇಥಮ್ ಕೇವಲ 10 ರನ್ ಗಳಿಸಿದರೆ, ಮೈಕೆಲ್ ಬ್ರೇಸ್ವೆಲ್ 13 ರನ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿದರು. ನೇಥನ್ ಸ್ಮಿತ್ ಎರಡು ರನ್ ಗಳಿಸಿದರು. ಡ್ಯಾರಿಲ್ ಮಿಚೆಲ್ 68 ಎಸೆತಗಳಲ್ಲಿ 44 ರನ್ ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಇಂಗ್ಲೆಂಡ್ ಪರ ಜೇಮೀ ಓವರ್ಟನ್ ಮತ್ತು ಸ್ಉಯಾಮ್ ಕರನ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು, ಇಂಗ್ಲೆಂಡ್ ತಂಡವು 50 ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾಯಿತು. ಇಂಗ್ಲೆಂಡ್ ಕ್ರಿಕೆಟ್ ತಂಡವು 40.2 ಓವರ್ಗಳಲ್ಲಿ ಕೇವಲ 222 ರನ್ ಗಳಿಸಲು ಸಾಧ್ಯವಾಯಿತು. ಇಂಗ್ಲೆಂಡ್ ಪರ ಜೇಮೀ ಓವರ್ಟನ್ 68 ರನ್ ಗಳಿಸಿ ಟಾಪ್ ಸ್ಕೋರರ್ ಆದರೆ, ವಿಕೆಟ್ ಕೀಪರ್ ಜೋಸ್ ಬಟ್ಲರ್ 38 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಟಿಕ್ನರ್ 4 ವಿಕೆಟ್ ಮತ್ತು ಡಫಿ 3 ವಿಕೆಟ್ ಪಡೆದರು.
November 01, 2025 3:49 PM IST