Last Updated:
ಸಿ.ಪಿ.ಜಾನ್ ದಕ್ಷಿಣ ಕನ್ನಡದ ಕೊಣಾಜೆಯಲ್ಲಿ ಸ್ವಂತ ಖರ್ಚಿನಲ್ಲಿ 200 ಮೀಟರ್ ಉದ್ದದ ಆನೆ ಕಂದಕ ನಿರ್ಮಿಸಿ ತೋಟವನ್ನು ಕಾಡಾನೆ ಹಾವಳಿಯಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ದಕ್ಷಿಣ ಕನ್ನಡ: ತಮ್ಮ ಮುಂದಾಗುವ ಸಣ್ಣ-ಪುಟ್ಟ ಸಮಸ್ಯೆಗಳಿಗೆ (Problem) ತಾವೇ ಯಾವುದಾದರೂ ದಾರಿಯಲ್ಲಿ ಪರಿಹಾರ ಕಂಡುಕೊಳ್ಳುವ ಜನರ ನಡುವೆ ಸರಕಾರದ (Government) ಮಟ್ಟದಲ್ಲಿ ಮಾತ್ರ ಆಗುವ ಪರಿಹಾರವನ್ನು (Solution) ತನ್ನದೇ ರೀತಿಯಲ್ಲಿ ಪರಿಹರಿಸಿದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಕಡಬ ತಾಲ್ಲೂಕಿನ ಕಾಡಾನೆಗಳ ಹಾವಳಿ (Menace) ಹೆಚ್ಚಾಗಿರುವ ಗ್ರಾಮವಾದ ಕೊಣಾಜೆಯ ನಿವಾಸಿ ಸಿ.ಪಿ.ಜಾನ್ ಈ ರೀತಿ ಪರಿಹಾರ ಕಂಡುಕೊಂಡ ಕೃಷಿಕ.
ತನ್ನ ತೋಟಕ್ಕೆ ನಿರಂತರವಾಗಿ ದಾಳಿಯಿಟ್ಟು ಕೃಷಿ ನಾಶಪಡಿಸುತ್ತಿದ್ದ ಕಾಡಾನೆಗಳ ದಾಳಿಯನ್ನು ಕೊಂಚ ಮಟ್ಟಿಗೆ ತಡೆಯುವಲ್ಲಿ ಸಿ.ಪಿ.ಜಾನ್ ಯಶಸ್ವಿಯಾಗಿದ್ದಾರೆ. ಆನೆಗಳು ಕಾಡು ಬಿಟ್ಟು ನಾಡಿಗೆ ಬರೋದನ್ನ ತಪ್ಪಿಸಲು ಕಾಡು ಮತ್ತು ನಾಡಿನ ಮಧ್ಯೆ ಆನೆ ಕಂದಕವನ್ನು ನಿರ್ಮಿಸಬೇಕೆಂಬ ಒತ್ತಾಯ ಇಂದು ನಿನ್ನೆಯದಲ್ಲ. ಈ ಕಾಮಗಾರಿಯನ್ನು ನಡೆಸಬೇಕಾದ ಅರಣ್ಯ ಇಲಾಖೆ ಕೆಲವು ಕಡೆಗಳಲ್ಲಿ ಈ ಕಾಮಗಾರಿಗಳನ್ನು ನಡೆಸಿದರೆ, ಇನ್ನು ಕೆಲವು ಕಡೆಗಳಲ್ಲಿ ಈ ಕಾಮಗಾರಿಗಳನ್ನು ನಡೆಸಿಲ್ಲ.
ಅನುದಾನದ ಕೊರತೆ ಸೇರಿದಂತೆ ಇತರ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಡಿನಂಚಿನ ಎಲ್ಲಾ ಕಡೆಗಳಲ್ಲಿ ಆನೆ ಕಂದಕ ನಿರ್ಮಿಸುವ ಕಾಮಗಾರಿಗಳು ನಡೆದಿಲ್ಲ. ಅರಣ್ಯ ಇಲಾಖೆ ಕಂದಕವನ್ನು ನಿರ್ಮಿಸಿ ನಮ್ಮ ಕೃಷಿ ತೋಟವನ್ನು ಕಾಪಾಡುತ್ತದೆ ಎಂದು ಕಾದು ಕುಳಿತ ಈ ಭಾಗದ ಕೃಷಿಕರು ಇಂದಿಗೂ ಅದರ ನಿರೀಕ್ಷೆಯಲ್ಲೇ ಇದ್ದಾರೆ. ಸರಕಾರದ ಕೆಲವು ಕಾಮಗಾರಿಗಳು ಹೇಗಿರುತ್ತೆ ಅಂದರೆ ಕೆಲವೊಮ್ಮೆ ರೈಲು ಹೋದ ಮೇಲೆ ಟಿಕೆಟ್ ತಗೊಂಡ ಹಾಗೆ. ಪ್ರಾಣ ಹಾನಿ ಸಂಭವಿಸಿದ ಬಳಿಕ ಕಾಮಗಾರಿಗಳನ್ನು ಆರಂಭಿಸಿದರೆ ಏನು ಪ್ರಯೋಜನ ಎಂದು ಎಚ್ಚೆತ್ತುಕೊಂಡ ಸಿ.ಪಿ.ಜಾನ್ ತನ್ನ ತೋಟದ ಸುತ್ತ ತಾವೇ ದೊಡ್ಡದಾದ ಕಂದಕವನ್ನ ನಿರ್ಮಿಸಿಕೊಂಡಿದ್ದಾರೆ.
ಸುಮಾರು ಒಂದು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಜಾನ್ ಈ ಕಂದಕವನ್ನು ನಿರ್ಮಿಸಿದ್ದಾರೆ. ಈ ಕಂದಕ ನಿರ್ಮಿಸಿದ ಬಳಿಕ ಕಾಡಾನೆಗಳು ಇವರ ತೋಟಕ್ಕೆ ನುಗ್ಗೋದು ಕಡಿಮೆಯಾಗಿದೆ. ಸುಮಾರು 200 ಮೀಟರ್ ಉದ್ದಕ್ಕೆ ಮತ್ತು ಸುಮಾರು 8 ಮೀಟರ್ ಆಳಕ್ಕೆ ಈ ಕಂದಕವನ್ನು ನಿರ್ಮಿಸಲಾಗಿದ್ದು, ಆನೆಗಳಿಗೆ ಈ ಕಂದಕವನ್ನು ಅಷ್ಟು ಸುಲಭವಾಗಿ ಇಳಿದು ಅಥವಾ ಹಾರಿ ಜಾನ್ ಅವರ ಕೃಷಿ ತೋಟವನ್ನು ತಲುಪೋದು ಸಾಧ್ಯವಿಲ್ಲದಂತಾಗಿದೆ.
ಆರು ತಿಂಗಳಿಂದ ಆನೆ ಹಾವಳಿ ಇಲ್ಲ!
ಸುಮಾರು ಆರು ತಿಂಗಳ ಹಿಂದೆ ಈ ಕಂದಕವನ್ನು ನಿರ್ಮಿಸಿರುವ ಜಾನ್ ಅವರ ತೋಟಕ್ಕೆ ಆ ಬಳಿಕದ ದಿನಗಳಲ್ಲಿ ಆನೆಗಳು ಬಂದಿಲ್ಲ. ಇದರಿಂದಾಗಿ ಆನೆಗಳಿಂದ ನಾಶವಾಗುತ್ತಿದ್ದ ಕೃಷಿ ಉಳಿಯುವಂತಾಗಿದೆ. ಆನೆ ದಾಳಿಯಿಂದ ನಾಶವಾಗುವ ಬೆಳೆಗೆ ಅರಣ್ಯ ಇಲಾಖೆ ನೀಡುವ ಪರಿಹಾರ ಯಾವುದಕ್ಕೂ ಸಾಕಾಗೋದಿಲ್ಲ, ಇಲಾಖೆ ಕಂದಕ ನಿರ್ಮಿಸುತ್ತದೆ ಎಂದು ಕಾದು ಕಾದು ಸುಸ್ತಾದ ಬಳಿಕ ತಾವೇ ಕಂದಕ ನಿರ್ಮಾಣಕ್ಕೆ ಮುಂದಾಗಬೇಕಾಯಿತು ಎನ್ನುತ್ತಾರೆ ಸಿ.ಪಿ.ಜಾನ್.
Dakshina Kannada,Karnataka